ಕಣಿವೆ, ಡಿ. ೨೮: ಹೊಸ ವರ್ಷದ ಅಂಗವಾಗಿ ಕೊಡಗು ಜಿಲ್ಲೆಗೆ ಪ್ರವಾಸಿಗರ ದಟ್ಟಣೆ ಅಧಿಕ ಇರುವ ಕಾರಣ ಕೊಡಗಿನ ಪ್ರವೇಶ ದ್ವಾರ ಕುಶಾಲನಗರದಲ್ಲಿ ಪ್ರವಾಸಿ ವಾಹನಗಳ ದಟ್ಟಣೆ ಸುಗಮ ರೀತಿಯಲ್ಲಿ ನಿಯಂತ್ರಿಸುವ ಮೂಲಕ ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಶಾಸಕ ಡಾ.ಮಂತರ್‌ಗೌಡ ಕುಶಾಲನಗರ ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಿದರು. ಕಳೆದ ವಾರ ಕ್ರಿಸ್‌ಮಸ್ ಅಂಗವಾಗಿ ಅತ್ಯಧಿಕ ಸಂಖ್ಯೆಯ ವಾಹನಗಳು ಕುಶಾಲನಗರದ ಮೂಲಕ ಕೊಡಗು ಜಿಲ್ಲೆಗೆ ಬಂದ ಕಾರಣ ಜಿಲ್ಲೆಯ ಜನ ಸುಗಮ ಸಂಚಾರಕ್ಕೆ ಸಾಕಷ್ಟು ಅನಾನುಕೂಲ ಎದುರಿಸಿದ ದೂರುಗಳು ಬಂದಿವೆ. ಈ ಬಗ್ಗೆ ನನಗೆ ಸ್ವತಃ ಅನುಭವವಾಗಿದೆ ಎಂದು ತಿಳಿಸಿದರು.

ಹೊಸ ವರ್ಷದ ಅಂಗವಾಗಿ ಜಿಲ್ಲೆಗೆ ಸಾಕಷ್ಟು ಮಂದಿ ಧಾವಿಸುವ ಕಾರಣ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಎಚ್ಚರವಹಿಸಬೇಕೆಂದು ಶಾಸಕರು ಸೂಚಿಸಿದರು. ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕುಶಾಲನಗರ ನಗರ ಠಾಣೆಯ ಉಪನಿರೀಕ್ಷಕಿ ಹೆಚ್.ಎಸ್.ಗೀತಾ, ಸಹಾಯಕ ನಿರೀಕ್ಷಕ ನಂದಾ ಇದ್ದರು.