ಮಡಿಕೇರಿ, ಡಿ. ೨೮: ಕಾಂಗ್ರೆಸ್ ಪಕ್ಷದಲ್ಲಿ ಹಾಗೂ ಸರಕಾರದ ನಿಗಮ, ಸಮಿತಿಗಳಲ್ಲಿ ದಲಿತರಿಗೆ ಸೂಕ್ತ ಸ್ಥಾನಮಾನ ನೀಡದೆ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ನಗರದ ಅಂಬೇಡ್ಕರ್ ಭವನದಲ್ಲಿ ಸಭೆ ನಡೆಸಿ ಪರಿಶಿಷ್ಟ ಜಾತಿ ಹಾಗೂ ಪಂಗಡ ಸಮನ್ವಯ ಸಮಿತಿಯನ್ನು ರಚನೆ ಮಾಡಲಾಯಿತು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಹೆಚ್.ಎಂ. ನಂದಕುಮಾರ್ ಮುಂದಾಳತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ದಲಿತ ಸಂಘಟನೆಗಳ ಪ್ರಮುಖರು ಹಾಗೂ ಕಾಂಗ್ರೆಸ್ ಪಕ್ಷದಲ್ಲಿರುವ ಪರಿಶಿಷ್ಟ ಜಾತಿ ಸಮುದಾಯದವರು ಈ ಕುರಿತು ಗಂಭೀರ ಚರ್ಚೆ ನಡೆಸಿ, ದಲಿತರ ಕಡೆಗಣನೆ ಆಗುತ್ತಿರುವ ಬಗ್ಗೆ ಸರಕಾರ, ಕಾಂಗ್ರೆಸ್ ವರಿಷ್ಠರು ಹಾಗೂ ಶಾಸಕರ ಗಮನ ಸೆಳೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲು ನಿರ್ಧಾರ ಕೈಗೊಳ್ಳಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಹೆಚ್.ಎಂ. ನಂದಕುಮಾರ್, ಜಿಲ್ಲಾ ಕಾಂಗ್ರೆಸ್‌ನಲ್ಲಿ ಪರಿಶಿಷ್ಟ ಜಾತಿಯವರನ್ನು ತಾತ್ಸಾರ ಮನೋಭಾವದಿಂದ ಕಾಣಲಾಗುತ್ತದೆ. ದಲಿತರ ನಿರ್ಣಾಯಕ ಮತಗಳಿಂದ ಆಯ್ಕೆಯಾದ ಶಾಸಕರು ಕೂಡ ನಮ್ಮ ಪರ ಚಿಂತಿಸುತ್ತಿಲ್ಲ. ಬೇರೆ ಪಕ್ಷದ ಕಾರ್ಯಕರ್ತರಿಗೆ ಮಣೆ ಹಾಕುತ್ತಿದ್ದಾರೆ. ಪಕ್ಷದ ನೈಜ ಕಾರ್ಯಕರ್ತರನ್ನು ಅಗೌರವದಿಂದ ಕಾಣಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಆಂತರಿಕ ಸಮಿತಿಗಳಲ್ಲಿಯೂ ಪ್ರಾಶಸ್ತö್ಯ ನೀಡುತ್ತಿಲ್ಲ. ಜೊತೆಗೆ ಅಕ್ರಮ ಸಕ್ರಮ ಸಮಿತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಜಿ.ಪಂ. ಕೆಡಿಪಿ ಸಮಿತಿ ಸೇರಿದಂತೆ ನಿಗಮಗಳಲ್ಲಿ ದಲಿತರಿಗೆ ಅಧ್ಯಕ್ಷ ಸ್ಥಾನಗಳನ್ನು ನೀಡುತ್ತಿಲ್ಲ. ಇದು ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ. ಈ ನಿಟ್ಟಿನಲ್ಲಿ ದಲಿತರನ್ನು ಸಂಘಟಿಸಿ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಹೋರಾಟ ಮಾಡುವ ಅಗತ್ಯತೆ ಇದೆ. ಸಮುದಾಯದ ಸರಕಾರಿ ನೌಕರರು ಸಮಸ್ಯೆಯಲ್ಲಿದ್ದು, ಅದು ಕೂಡ ಪರಿಹಾರವಾಗಬೇಕು. ಮುಂದೆ ಯಾರೇ ಶಾಸಕರಾದರು ದಲಿತ ಸಮುದಾಯವನ್ನು ಕಡೆಗಣಿಸದಂತೆ ಸಂಘಟಿತಗೊಳ್ಳುವ ಅನಿವಾರ್ಯತೆ ಇದೆ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ಪ್ರಮುಖ ಬೆಳ್ಳೂರು ಕೃಷ್ಣಪ್ಪ ಮಾತನಾಡಿ, ದಲಿತರ ಪರ ಕೆಲಸಗಳು ನಡೆಯುತ್ತಿಲ್ಲ. ನಮ್ಮ ಬೇಡಿಕೆಗಳಿಗೆ ಮನ್ನಣೆ ದೊರೆಯುತ್ತಿಲ್ಲ. ದಲಿತ ಸಂಘಗಳು ಇಬ್ಭಾಗವಾಗಿರುವುದು ಇದಕ್ಕೊಂದು ಕಾರಣವಾಗಿದ್ದು, ಗಟ್ಟಿ ನಾಯಕತ್ವವನ್ನು ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಮಿತಿ ರಚಿಸಿ ಸಂಘಟನಾತ್ಮಕವಾಗಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದ ಅವರು, ಸರಕಾರಿ ಜಮೀನು ಗುತ್ತಿಗೆ ನೀಡುವ ಕೆಲಸವಾಗುತ್ತಿದೆ. ನಿವೇಶನ ರಹಿತ ದಲಿತರಿಗೆ ಮೊದಲು ಮನೆ ನಿರ್ಮಿಸಬೇಕೆಂಬ ಒತ್ತಾಯವನ್ನು ಪರಿಣಾಮಕಾರಿಯಾಗಿ ಮುಟ್ಟಿಸುವ ಕೆಲಸವಾಗಬೇಕೆಂದರು. ಅಳುವಾರ ಗ್ರಾಮದ ಮಂಜುನಾಥ್ ಮಾತನಾಡಿ, ನೈಜ ಕಾಂಗ್ರೆಸ್ ಕಾರ್ಯಕರ್ತರಿಗೆ ಶಾಸಕರು ಸ್ಪಂದಿಸುತ್ತಿಲ್ಲ. ಬೇರೆ ಪಕ್ಷದವರಿಗೆ ತುರ್ತು ಸ್ಪಂದನ ನೀಡುತ್ತಿರುವ ಉದಾಹರಣೆ ಇದೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಈ ಬಗ್ಗೆಯೂ ಅವರಿಗೆ ತಿಳಿಸುವ ಕೆಲಸವಾಗಬೇಕೆಂದರು. ದಸಂಸ ವಿಭಾಗೀಯ ಸಂಚಾಲಕ ರಾಚಪ್ಪ ಮಾತನಾಡಿ, ದಲಿತರಿಗೆ ಸ್ಥಾನಮಾನ ದೊರೆಯುತ್ತಿಲ್ಲ. ಪಕ್ಷ ಹಾಗೂ ನಿಗಮಗಳಲ್ಲಿ ಸ್ಥಾನ ಇಲ್ಲದಾಗಿದೆ. ಈ ಬಗ್ಗೆ ಗಂಭೀರ ಚಿಂತನೆಯ ಅಗತ್ಯತೆ ಇದೆ. ಸೈದ್ಧಾಂತಿಕ ನಿಲುವಿನಿಂದ ದಲಿತ ವರ್ಗ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತ ಬಂದಿದೆ. ದಲಿತ ಪರ ಕಾಳಜಿಯನ್ನು ಶಾಸಕರು, ಕಾಂಗ್ರೆಸ್ ಪಕ್ಷ ತೋರಬೇಕೆಂದರು.
ಸೋಮವಾರಪೇಟೆ ತಾಲೂಕಿನ ದಲಿತ ಮುಖಂಡ ಜನಾರ್ಧನ್ ಮಾತನಾಡಿ, ಕೆಲವರ ಮಾತಿನಿಂದ ಪರಿಶಿಷ್ಟ ಜಾತಿಯವರು ಸ್ಥಾನಗಳಿಂದ ವಂಚಿತರಾಗುತ್ತಿದ್ದಾರೆ. ಪ್ರಬಲವಾಗಿ ಬೇಡಿಕೆಯೊಡ್ಡಿದರೆ ಜಿಲ್ಲಾಧ್ಯಕ್ಷ ಸ್ಥಾನವನ್ನು ಪಡೆೆಯಬಹುದು. ಮುಂದಿನ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಮೀಸಲು ಸ್ಥಾನವಲ್ಲದೆ ಇನ್ನೂ ಹೆಚ್ಚಿನ ಸ್ಥಾನ ಪಡೆಯಬೇಕು. ಇಬ್ಬರು ಶಾಸಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕೆಂದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಇ. ಸುರೇಶ್ ಮಾತನಾಡಿ, ಈ ಹಿಂದೆ ಪರಿಶಿಷ್ಟ ಜಾತಿಗೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಿಗೆ ಬೇಡಿಕೆ ಇಟ್ಟಿದ್ದೆವು. ಮೀಸಲಾತಿ ಅಡಿ ನಿಗಮ, ಸಮಿತಿಗಳಲ್ಲಿ ದಲಿತರು ಸದಸ್ಯರು ಮಾತ್ರ ಆಗುತ್ತಿದ್ದಾರೆ. ಇದಕ್ಕೆಲ್ಲ ಶಾಸಕರನ್ನು ಬೊಟ್ಟು ಮಾಡುವುದು ಸರಿಯಲ್ಲ. ಅವರ ವಿರುದ್ದ ನಿರ್ಣಯಕ್ಕೆ ನನ್ನ ಸಹಮತವಿಲ್ಲ. ಬೇಡಿಕೆ ಮುಂದಿಟ್ಟು ಮುಂದಿನ ಹೆಜ್ಜೆ ಇಡಬೇಕಾಗಿದೆ. ಅಂಬೇಡ್ಕರ್ ಪ್ರತಿಮೆ ಹಾಗೂ ಭವನ ನಿರ್ಮಾಣದ ಬಗ್ಗೆಯೂ ಚಿಂತನೆ ಮಾಡಬೇಕಾಗಿದೆ. ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಹೆಸರಿನಲ್ಲಿ ಹಣ ಸಂಗ್ರಹ ಮಾಡುತ್ತಿರುವ ಅನುಮಾನವೂ ಇದೆ. ಈ ಬಗ್ಗೆ ಪರಿಶೀಲನೆ ಅಗತ್ಯತೆ ಇದೆ ಎಂದರು.
ಸೋಮವಾರಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸಂದೀಪ್ ಮಾತನಾಡಿ, ಮೊದಲು ಶಾಸಕರಿಗೆ ದಲಿತರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ವಿವರಿಸಬೇಕಾಗಿದೆ. ಏಕಾಏಕಿ ಅವರ ವಿರುದ್ಧದ ನಡೆ ಬೇಕಾಗಿಲ್ಲ ಎಂದು ಅಭಿಪ್ರಾಯಿಸಿದರು.
ವೀರಾಜಪೇಟೆ ಪುರಸಭೆ ಮಾಜಿ ಸದಸ್ಯ ರಜನಿಕಾಂತ್ ಮಾತನಾಡಿ, ಅನ್ಯಾಯವಾದಾಗ ಪ್ರಶ್ನಿಸಬೇಕು. ಇಬ್ಬರು ಶಾಸಕರಿಗೆ ನಮ್ಮ ಹಕ್ಕೊತ್ತಾಯ ಮಂಡಿಸಬೇಕು. ತೆರ್ಮೆಕಾಡು ನಿವಾಸಿಗಳಿಗೆ ಹಕ್ಕುಪತ್ರ, ಹೈಸೊಡ್ಲೂರುವಿನಲ್ಲಿ ಸರಕಾರಿ ನಿವೇಶನ ಹಂಚಿಕೆಯೂ ಆಗಿಲ್ಲ. ಈ ಬಗ್ಗೆಯೂ ಗಮನಸೆಳೆಯಬೇಕಾಗಿದೆ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷ ಪಾಪು ಸಣ್ಣಯ್ಯ ಮಾತನಾಡಿ, ಪರಿಶಿಷ್ಟ ಜಾತಿಯವರಿಗೆ ಪ್ರಾತಿನಿಧ್ಯ ದೊರೆಯದಿರಲು ಕಾಂಗ್ರೆಸ್ ಎಸ್.ಸಿ. ಘಟಕದ ನಿಷ್ಕಿçಯತೆಯೂ ಕಾರಣವಾಗಿದೆ. ಶಾಸಕರ ಕಾರ್ಯವೈಖರಿಗೆ ಅಸಮಾಧಾನವಿದೆ. ಘಟಕದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿ ಬದಲಾವಣೆಗೆ ಪ್ರಯತ್ನ ನಡೆಸಬೇಕೆಂದರು.