ಮರಗೋಡು; ಡಿ. ೨೬ : ಮರಗೋಡು-ಕತ್ತಲೆಕಾಡು ರಸ್ತೆ ದುರಸ್ತಿ ಕಾಣದೆ ೨೦ ವರ್ಷಗಳಾಗಿದ್ದು ಈ ಹಿನ್ನೆಲೆಯಲ್ಲಿ ಮರಗೋಡು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಮರಗೋಡಿನಿಂದ ಹುಲಿತಾಳದವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರ ಯೋಗ್ಯವಾಗಿಲ್ಲ. ಹಾಗಾಗಿ ಬಸ್‌ಗಳು ಹುಲಿತಾಳದಿಂದಲೇ ಮಡಿಕೇರಿಗೆ ಹಿಂತಿರುಗುತ್ತಿದ್ದು, ಆಟೋ ಚಾಲಕರು ಕೂಡ ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುವಂತಾಗಿದೆ. ದ್ವಿಚಕ್ರ ಸವಾರರಂತೂ ಜೀವ ಪಣಕ್ಕಿಟ್ಟು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಪ್ರತಿನಿತ್ಯ ಹಲವು ಸವಾರರು ಉರುಳಿ ಬಿದ್ದು ಗಾಯಾಳುಗಳಾಗುತ್ತಿವೆ. ಇನ್ನು ಕಾರು ಜೀಪು ಹೊಂದಿದ ಸ್ಥಳೀಯರು ಈ ರಸ್ತೆಯಲ್ಲಿ ಸಂಚರಿಸುವಾಗ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾ ಸಂಚರಿಸುವAತಾಗಿತ್ತು. ಭರ್ತಿ ೧೫ ವರ್ಷಗಳ ಹಿಂದೆ ಈ ರಸ್ತೆಗೆ ಡಾಂಬರೀಕರಣವಾಗಿದ್ದು ಬಿಟ್ಟರೆ ಇತ್ತೀಚಿನ ವರ್ಷಗಳಲ್ಲಿ ಕನಿಷ್ಟ ತೇಪೆ ಕಾರ್ಯವನ್ನೂ ಕೂಡ ಮಾಡದೆ ನಿರ್ಲಕ್ಷ್ಯ ಮಾಡಲಾಗಿತ್ತು. ರಸ್ತೆ ದುರಸ್ತಿಪಡಿಸುವಂತೆ ಈ ಮೊದಲು ಸ್ಥಳೀಯ ಗ್ರಾಮಸ್ಥರು, ವಾಹನ ಚಾಲಕರು ಬಹಳಷ್ಟು ಬಾರಿ ಜಿಲ್ಲಾಡಳಿತ, ಸ್ಥಳೀಯ ಶಾಸಕರಿಗೆ ಮನವಿ ಮಾಡಿದ್ದರೂ ಕೂಡ ಪ್ರಯೋಜನವಾಗಿರಲಿಲ್ಲ. ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತ ಸ್ಥಳೀಯ ಗ್ರಾಮಸ್ಥರು ಇಂದು ಮರಗೋಡು ಗ್ರಾಮ ಕೇಂದ್ರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮರಗೋಡು ಆಟೋ ಚಾಲಕರ ಸಂಘ ಪ್ರಮುಖವಾಗಿ ಈ ಪ್ರತಿಭಟನೆಗೆ ಕರೆ ನೀಡಿತ್ತು. ಪ್ರತಿಭಟನೆ ಸಂದರ್ಭ ಮಾತನಾಡಿದ ಭಗಂಡೇಶ್ವರ ಬಸ್ ಚಾಲಕ ಮಧುಮೋಹನ್, ಹದಗೆಟ್ಟ ರಸ್ತೆಯಲ್ಲಿ ಖಾಸಗಿ ಬಸ್‌ಗಳ ಸಂಚಾರದ ದುರವಸ್ಥೆಯನ್ನು ತೆರೆದಿಟ್ಟರು. ರಸ್ತೆ ಕಾಮಗಾರಿಗೆ ಬರೇ ಭೂಮಿ ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಪೂಜೆ ಮಾಡುತ್ತಿದ್ದಾರೆಯೇ ಹೊರತು ರಸ್ತೆ ದುರಸ್ತಿ ಮಾಡುತ್ತಿಲ್ಲ, ಖಾಸಗಿ ಬಸ್ ನವರು ಲಾಭ-ಅಸಲು ಬದಿಗಿಟ್ಟು ಸಾರ್ವಜನಿಕರಿಗೆ ಸೇವೆ ನೀಡಬೇಕೆಂಬ ಒಂದೇ ಉದ್ದೇಶದಿಂದ ಲಕ್ಷಾಂತರ ರೂ ನಷ್ಟ ಮಾಡಿಕೊಂಡು ಬಸ್ ಓಡಿಸುತ್ತಿರುವುದಾಗಿ ಹೇಳಿದರು.

ಪ್ರತಿಭಟನೆಯ ಸಂದರ್ಭ ಮಾತನಾಡಿದ ಆಟೋ ಚಾಲಕರ ಸಂಘದ ಅಧ್ಯಕ್ಷ ನಂದಕುಮಾರ್, ಮಡಿಕೇರಿ ಹುಲಿತಾಳ ರಸ್ತೆಯಲ್ಲಿ ಆಟೋ ಓಡಿಸುವುದೆಂದರೆ ಜೀವ ಬಾಯಿಗೆ ಬಂದAತಾಗುತ್ತದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ನೇರ ಗ್ಯಾರೇಜಿಗೆ ತೆರಳುವಂತಾಗಿದೆ. ಆಂಬ್ಯುಲೆನ್ಸ್ ಕೂಡ ಈ ರಸ್ತೆಯಲ್ಲಿ ಬರುವುದಿಲ್ಲ. ಸ್ಥಳೀಯ ನಾಗರಿಕರಾಗಿ ನಾವೇನು ಅನ್ಯಾಯ ಮಾಡಿದ್ದೇವೆ ಎಂದು ಖಾರವಾಗಿ ಪ್ರಶ್ನಿಸಿದರು. ಇದೇ ಸಂದರ್ಭ ಮಾತನಾಡಿದ ಆಟೋ ಚಾಲಕರ ಸಂಘದ ಕಾರ್ಯದರ್ಶಿ ಇಟ್ಟಣಿಕೆ ನವನೀತ್, ಈ ರಸ್ತೆಗೆ ಈಗಾಗಲೇ ಎರಡು ಬಾರಿ ಭೂಮಿಪೂಜೆ ಮಾಡಿದ್ದಾರೆ. ಆದರೆ ಕಾಮಗಾರಿ ಆರಂಭವಾಗಿಲ್ಲ. ಅದೂ ಅಲ್ಲದೆ, ಈ ರಸ್ತೆಯಲ್ಲಿ ಎಷ್ಟು ಕಿಲೋಮೀಟರ್ ರಸ್ತೆ ಕಾಮಗಾರಿ ಮಾಡಲಾಗುತ್ತದೆ ಎಂಬುದೂ ಸ್ಪಷ್ಟವಿಲ್ಲ. ಗ್ರಾಮಸ್ಥರನ್ನು ಕತ್ತಲಲ್ಲಿ ಇಟ್ಟು ಅಧಿಕಾರಿಗಳು ಜನಪ್ರತಿನಿಧಿಗಳು ಏನು ಮಾಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು.

ಪ್ರತಿಭಟನೆ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಮಡಿಕೇರಿ ಡಿವೈಎಸ್ಪಿ ಸೂರಜ್, ಮಡಿಕೇರಿ ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಶೇಖರ್, ಎಸ್‌ಐ ತಮ್ಮಯ್ಯ, ಪ್ರತಿಭಟನಾಕಾರರಿಗೆ ರಸ್ತೆ ತಡೆ ನಡೆಸದೆ ಪ್ರತಿಭಟನೆ ನಡೆಸುವಂತೆ ಸೂಚನೆ ನೀಡಿದರು. ಇದಕ್ಕೆ ಸಮ್ಮತಿಸಿದ ಪ್ರತಿಭಟನಾಕಾರರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಷರತ್ತು ವಿಧಿಸಿ ರಸ್ತೆ ತಡೆ ಹಿಂಪಡೆದು ಪ್ರತಿಭಟನೆ ಮುಂದುವರಿಸಿದರು.

ಲೋಕೋಪಯೋಗಿ ಅಭಿಯಂತರ ತರಾಟೆಗೆ

೧೧ ಗಂಟೆಯ ವೇಳೆಗೆ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆ ಕಿರಿಯ ಅಭಿಯಂತರ ಗಿರೀಶ್ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ರಸ್ತೆ ಕಾಮಗಾರಿಗೆ ಟೆಂಡರ್ ಆಗಿ ಅನುದಾನ ಬಿಡುಗಡೆಯಾದರೂ ಕಾಮಗಾರಿ ವಿಳಂಬವಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸಮಜಾಯಿಸಿಕೆ ನೀಡಿದ ಅಧಿಕಾರಿ ಗಿರೀಶ್ ಮಳೆ ಹಿನ್ನೆಲೆ ಕಾಮಗಾರಿ ವಿಳಂಭವಾಗಿದ್ದು, ಸದ್ಯ ೯೦೦ ಮೀಟರ್ ರಸ್ತೆ ಕಾಮಗಾರಿಯನ್ನ ಜನವರಿ ೧೦ ರ ಒಳಗೆ ಸಂಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ಇನ್ನೂ ಐದು ಕಿಲೋ ಮೀಟರ್ ರಸ್ತೆಯನ್ನು ಆದಷ್ಟು ಶೀಘ್ರ ಟೆಂಡರ್ ಕರೆದು ಏಪ್ರಿಲ್ ಅಂತ್ಯದ ಒಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ಸ್ಥಳೀಯ ಗ್ರಾಮಸ್ಥರು ಇಷ್ಟೆಲ್ಲಾ ಬವಣೆ ಪಡುತ್ತಿದ್ದರೂ ಶಾಸಕ ಡಾ ಮಂತರ್ ಗೌಡ ಸ್ಥಳಕ್ಕೆ ಭೇಟಿ ನೀಡದ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರು.

ರಸ್ತೆ ಕಾಮಗಾರಿ ಆರಂಭ

ಅಚ್ಚರಿಯ ವಿಷಯ ಏನೆಂದರೆ ಇಂದು ಮರಗೋಡಿನಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುತ್ತದೆ ಎಂಬ ಸುದ್ದಿ ಪ್ರಚಾರವಾಗುತ್ತಲೇ ಎಚ್ಚೆತ್ತ ಗುತ್ತಿಗೆದಾರರು ನಿನ್ನೆ ರಾತೋರಾತ್ರಿ ಜೆಸಿಬಿ ತಂದು ಹುಲಿತಾಳದ ಬಳಿ ರಸ್ತೆ ಅಗೆದು ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಇದೇ ಪ್ರಜ್ಞೆ ಕೆಲವು ತಿಂಗಳ ಹಿಂದೆಯೇ ತೋರಿದ್ದಲ್ಲಿ ಇಂದು ರಸ್ತೆ ಸಂಚಾರಕ್ಕೆ ಯೋಗ್ಯವಾಗಿರುತ್ತಿತ್ತು ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.

ಸದ್ಯ ಪ್ರತಿಭಟನೆ ಬೆನ್ನಲ್ಲೇ ಅಲ್ಲಲ್ಲಿ ಕಾಮಗಾರಿಯೂ ಆರಂಭಗೊAಡಿದೆ. ಆದರೆ ಕಟ್ಟೆಮಾಡುವಿನಿಂದ ಮರಗೋಡು-ಹುಲಿತಾಳದವರೆಗೆ ಸಂಪೂರ್ಣ ಹದಗೆಟ್ಟಿರುವ ಸುಮಾರು ೮ ಕಿಲೋ ಮೀಟರ್ ರಸ್ತೆಯನ್ನು ಸಂಪೂರ್ಣ ಡಾಂಬರೀಕರಣ ಮಾಡಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಮರಗೋಡು ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಪ್ರದೀಪ್, ಮರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಿತ್ರಾ, ಸದಸ್ಯರುಗಳಾದ ಬಳಪದ ಮೋಹನ್, ಪರಿಚನ ಶರತ್, ಇಟ್ಟಣಿಕೆ ನಾಗೇಶ, ಬಿಜೆಪಿ ಮುಖಡ ಕಾಂಗಿರ ಅಶ್ವಿನ್, ಗ್ರಾಮಸ್ಥರಾದ ಪೂಳಕಂಕಡ್ರ ಸಂದೀಪ್, ವಿವೇಕಾನಂದ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಹುಲಿತಾಳ, ಕಟ್ಟೆಮಾಡು, ಹೊಸ್ಕೇರಿ, ಅರೆಕಾಡು ಗ್ರಾಮಸ್ಥರು ಪಾಲ್ಗೊಂಡಿದ್ದರು. ಪ್ರತಿಭಟನೆ ಸಂದರ್ಭ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವ್ಯಾಪಾರಸ್ಥರು ಬೆಂಬಲ ನೀಡಿದರು.