ಮಡಿಕೇರಿ, ಡಿ. ೨೬: ಇದೊಂದು ವಿಶಿಷ್ಟ ಮತ್ತು ವಿಭಿನ್ನ ಕಾರ್ಯಕ್ರಮ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ವೇದಿಕೆಯಂತೆ ಕಂಡು ಬಂದಿತು ಎಂದರೆ ತಪ್ಪಾಗಲಾರದು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಗೌಡ ವಿಕಾಸ ವೇದಿಕೆ (ಸಾಮಾಜಿಕ ಮಾಧ್ಯಮ ವಿಭಾಗ) ಸಹಕಾರದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಗರದ ಗಾಂಧಿ ಭವನದಲ್ಲಿ ನಡೆದ ಅರೆಭಾಷೆ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಈ ವಾತಾವರಣ ಕಂಡು ಬಂದಿತು.
ಅರೆಭಾಷೆಯಲ್ಲಿ ಹಲವು ಪ್ರಶ್ನೆ ಕೇಳುವ ಮೂಲಕ ಅರೆಭಾಷೆ ಮತ್ತು ಕನ್ನಡದ ಶಬ್ದಕೋಶದ ಪದಗಳನ್ನು ಉತ್ತರಿಸುವ ಮೂಲಕ ಮೂವರು ವಿದ್ಯಾರ್ಥಿಗಳು ನಗದು ಬಹುಮಾನ ಪಡೆದರು.
ಅರೆಭಾಷೆ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಬೆಂಗಳೂರು, ಕರಿಕೆ, ಸುಳ್ಯ, ಪೆರಾಜೆ, ಸಂಪಾಜೆ, ಕೊಯನಾಡು, ಭಾಗಮಂಡಲ, ಚೇರಂಬಾಣೆ, ಮೂರ್ನಾಡು, ಮದೆನಾಡು, ಮೇಕೇರಿ, ಮಡಿಕೇರಿಯ ವಿವಿಧ ಶಾಲೆಗಳಿಂದ ೩೫ ವಿದ್ಯಾರ್ಥಿಗಳು ಭಾಗವಹಿಸಿ ಅರೆಭಾಷೆ ರಸಪ್ರಶ್ನೆ ಪರೀಕ್ಷೆ ಬರೆದರು. ಇವರಲ್ಲಿ ೮ ವಿದ್ಯಾರ್ಥಿಗಳು ೪೦ ಅಂಕಕ್ಕೆ ೩೮ ಅಂಕವನ್ನು ಇಬ್ಬರು, ೩೭ ಅಂಕವನ್ನು ಮೂವರು ಮತ್ತು ೩೫ ಅಂಕವನ್ನು ಇಬ್ಬರು ಪಡೆದು ರಸಪ್ರಶ್ನೆ ಸುತ್ತಿಗೆ ಆಯ್ಕೆಯಾಗಿದ್ದರು.
ಇವರಿಗೆ ಥಟ್ ಅಂತ ಹೇಳಿ ಕಾರ್ಯಕ್ರಮದ ರೀತಿ ಅರೆಭಾಷೆಯಲ್ಲಿ ಪ್ರಶ್ನೆ ಕೇಳಿ ಉತ್ತರ ಪಡೆಯುವ ಮೂಲಕ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಅರೆಭಾಷೆ ಶಬ್ದ ಭಂಡಾರದ ಬಗ್ಗೆ ಮಾಹಿತಿ ನೀಡುವುದು ಜತೆಗೆ ಒಂದು ರೀತಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರುಗುವ ರೀತಿ ಅರೆಭಾಷೆ ರಸಪ್ರಶ್ನೆ ಕಾರ್ಯಕ್ರಮ ನಡೆದಿದ್ದು ವಿಶೇಷ ಎನಿಸಿತು.
ಪ್ರಥಮ ಸ್ಥಾನ ಪಡೆದ ಚೇರಂಬಾಣೆಯ ರಾಜರಾಜೇಶ್ವರಿ ಶಾಲೆಯ ಲಕ್ಷಣ ಕಾಳೇರಮ್ಮನ, ದ್ವಿತೀಯ ಸ್ಥಾನ ಪಡೆದ ಪೆರಾಜೆಯ ವಿದ್ಯಾರ್ಥಿ ಕಾರ್ತಿಕ್, ತೃತೀಯ ಸ್ಥಾನ ಪಡೆದ ನಗರದ ಸಂತ ಜೋಸೆಫರ ಶಾಲೆಯ ಎಲಿನಾ ಅವರಿಗೆ ಕ್ರಮವಾಗಿ ೧೫ ಸಾವಿರ, ೧೦ ಸಾವಿರ ಮತ್ತು ೫ ಸಾವಿರ ನಗದು ಬಹುಮಾನವನ್ನು ಅರೆಭಾಷೆ ಗೌಡ ವಿಕಾಸ ವೇದಿಕೆಯ ನಿರ್ದೇಶಕ ಪ್ರಹ್ಲಾದ್ ಪೊಕ್ಕುಳಂಡ್ರ ಅವರು ವೈಯಕ್ತಿಕವಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಅರೆಭಾಷೆ ಸಾಹಿತ್ಯ, ಸಂಸ್ಕೃತಿ, ಸಂಶೋಧನೆ ಮತ್ತು ಅರೆಭಾಷೆಯಲ್ಲಿ ಹಲವು ಉತ್ತಮ ಕೃತಿಗಳನ್ನು ಪ್ರಕಟಿಸುವ ಮೂಲಕ ಅರೆಭಾಷೆ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಅಕಾಡೆಮಿ ಸಹಕಾರದಲ್ಲಿ ಅರೆಭಾಷೆ ಗೌಡ ವಿಕಾಸ ವೇದಿಕೆ ವತಿಯಿಂದ ಅರೆಭಾಷೆ ರಸಪ್ರಶ್ನೆ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಅರೆಭಾಷೆ ಮಾತನಾಡುವ ಎಲ್ಲರೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಮೆಚ್ಚುವಂತದ್ದು, ಅರೆಭಾಷೆಯು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿದ್ದು, ಪ್ರಾದೇಶವಾರು ವ್ಯತ್ಯಾಸ ಕಾಣುತ್ತೇವೆ ಎಂದರು.
ಅರೆಭಾಷೆ ಗೌಡ ವಿಕಾಸ ವೇದಿಕೆಯ ನಿರ್ದೇಶಕ ಪ್ರಹ್ಲಾದ್ ಪೊಕ್ಕುಳಂಡ್ರ ಮಾತನಾಡಿ, ಕಳೆದ ೨೫ ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿದ್ದು, ಮಾತೃ ಭಾಷೆಯಾದ ಅರೆಭಾಷೆಯಲ್ಲಿ ವಿದ್ಯಾರ್ಥಿಗಳಿಗೆ ಸಹಕಾರವಾಗುವಲ್ಲಿ ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂದು ಯೋಚಿಸಿದಾಗ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತಿ ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಈ ಕಾರ್ಯಕ್ರಮ ಆಯೋಜನೆಗೆ ಉಪಯುಕ್ತವಾಯಿತು ಎಂದರು.
ನಾವು ಎಲ್ಲೇ ನೆಲೆಸಿದ್ದರೂ ಸಹ ಮಾತೃಭಾಷೆ ಮತ್ತು ನಾಡಿನ ಕನ್ನಡ ಭಾಷೆ ಮರೆಯಬಾರದು. ಸ್ಥಳೀಯ ಭಾಷೆಗಳು ಉಳಿದಲ್ಲಿ ನಾಡಿನ ಭಾಷೆಯು ಮತ್ತಷ್ಟು ಔನ್ನತ್ಯಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಭಾಗಮಂಡಲ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದಿವಾಕರ ಕುಂದಲ್ಪಾಡಿ ಮಾತನಾಡಿ, ಇಂದಿನ ಸಾಮಾಜಿಕ ಮಾಧ್ಯಮ ಯುಗದಲ್ಲಿ ಮೊಬೈಲ್ ಬಳಕೆ ಅನಿವಾರ್ಯ ಮತ್ತು ಅಗತ್ಯವಾಗಿದೆ. ಇದರಿಂದ ಉಪಯುಕ್ತ ಮಾಹಿತಿ ಪಡೆಯುವಂತಾಗಬೇಕು ಎಂದರು.
ಮೊಬೈಲ್ ಒಂದು ರೀತಿ ಗ್ರಂಥಾಲಯವಾಗಿದ್ದು, ಪುಸ್ತಕದ ಭಂಡಾರ ಇದ್ದಂತೆ, ತಂತ್ರಜ್ಞಾನದ ಮಾಹಿತಿಯ ಆಗರವಾಗಿದ್ದು, ಒಳ್ಳೆಯ ಅಂಶಗಳನ್ನು ಬಳಸಿಕೊಂಡು ಅರೆಭಾಷೆಯನ್ನು ಮತ್ತಷ್ಟು ಅಭಿವೃದ್ಧಿಯತ್ತ ಸಾಗಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹುಟ್ಟಿದ ನೆಲ, ಓಡಾಡಿದ ದಾರಿ ಹಾಗೂ ಮನೆಯ ಭಾಷೆಯನ್ನು ಯಾರೂ ಮರೆಯಬಾರದು. ಆ ದಿಸೆಯಲ್ಲಿ ಅರೆಭಾಷೆ ಮಾತನಾಡುವ ಮೂಲಕ ಉಳಿಸಿ ಬೆಳೆಸಬೇಕು ಎಂದು ದಿವಾಕರ ಕುಂದಲ್ಪಾಡಿ ಕರೆ ನೀಡಿದರು.
ಸಾಹಿತಿ ಬೈತಡ್ಕ ಜಾನಕಿ ಬೆಳ್ಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಅರೆಭಾಷೆಯಲ್ಲಿ ಕಥೆ, ಕವನ, ಅವಲೋಕನ, ವಿಮರ್ಶೆ, ವಿಡಂಬನೆ ಹಾಗೂ ಹಾಸ್ಯ ಲೇಖನ ಬರೆಯುಂತಾಗಬೇಕು ಎಂದು ಸಲಹೆ ಮಾಡಿದರು.
ಹಾಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ತೆಕ್ಕಡೆ ಕುಮಾರಸ್ವಾಮಿ ಮಾತನಾಡಿ, ನೂರಾರು ವರ್ಷಗಳಿಂದ ಉಳಿಸಿಕೊಂಡು ಬಂದಿರುವ ಅರೆಭಾಷೆಯನ್ನು ಬೆಳೆಸಬೇಕು. ಅರೆಭಾಷೆಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಅಕಾಡೆಮಿ ಸದಸ್ಯರಾದ ಲತಾ ಪ್ರಸಾದ್ ಕುದ್ಪಾಜೆ, ಮೋಹನ್ ಪೊನ್ನಚ್ಚನ, ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಪ್ರೇಮ ರಾಘವಯ್ಯ, ಕಲ್ಪನಾ ಹೊಸಗದ್ದೆ ಇತರರು ಇದ್ದರು.
ಕಾವ್ಯನಂದ ಕೋಳಿಬೈಲು ಸ್ವಾಗತಿಸಿದರು, ಚೈತ್ರ ಕುದುಕುಳಿ ನಿರೂಪಿಸಿದರು, ಖುಷಿ ಪ್ರಾರ್ಥಿಸಿದರು, ರಿಜಿಸ್ಟಾçರ್ ಚಿನ್ನಸ್ವಾಮಿ ವಂದಿಸಿದರು.