ಸಿದ್ದಾಪುರ, ಡಿ. ೨೬: ನೆಲ್ಲಿಹುದಿಕೇರಿಯ ಆಂಗ್ಲೋ ವರ್ನಾಕ್ಯುಲರ್ ಶಾಲೆಯ ೩೪ನೇ ವಾರ್ಷಿಕೋತ್ಸವ ವಿವಿಧ ಸಾಂಸ್ಕೃತಿಕ, ಆರೋಗ್ಯ, ಪರಿಸರ ಕಾಳಜಿ, ಮಾದಕ ವಸ್ತುಗಳ ವಿರುದ್ಧ ಜಾಗೃತಿ ಸೇರಿದಂತೆ ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮ ಗಳೊಂದಿಗೆ ನೆರವೇರಿತು. ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಜನರಲ್ ಸರ್ಜರಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸತೀಶ್ ವಿ. ಶಿವಮಲ್ಲಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಯೊAದಿಗೆ ಭಾವೈಕ್ಯತೆಯ ಸಂದೇಶ ಸಾರುವ ಮೂಲಕ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕವಾಗಿದ್ದು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಪೋಷಕರ ಸಹಕಾರ ಅತ್ಯಗತ್ಯವಾಗಿದೆ.

ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಕಲಿಕೆಯ ಮೂಲಕ ಪ್ರತಿಭಾನ್ವಿತರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದರು.

ಸಮಾಜ ಸೇವಕ, ವಕೀಲ ಕುಂಞÂ ಅಬ್ದುಲ್ಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಸಾಧಿಸುವ ಛಲದೊಂದಿಗೆ ಉನ್ನತ ಶಿಕ್ಷಣದ ಮೂಲಕ ಪ್ರತಿಭಾನ್ವಿತರಾಗಿ ಗುರುತಿಸಿಕೊಂಡಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ. ನೀವು ಕಲಿತ ಶಿಕ್ಷಣವು ನಿಮ್ಮ ಹೆಸರಿನೊಂದಿಗೆ ಸೇರಿಕೊಳ್ಳುತ್ತದೆ ಎಂದು ಹೇಳಿದರು. ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಾಗಿ ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು. ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಮಾದಕ ವಸ್ತುಗಳ ಮಾರಾಟ ಸೇವನೆಗಳ ಬಗ್ಗೆ ಇಲಾಖೆಗೆ ಮಾಹಿತಿ ನೀಡಿ. ಬಾಲ್ಯ ವಿವಾಹ, ಪೋಕ್ಸೋ ಸೇರಿದಂತೆ ಇತರ ಕಾಯ್ದೆಗಳ ಬಗ್ಗೆ ಅರಿವು ಜಾಗೃತಿ ಮೂಡಿಸಿದರು.

ಶಾಲಾ ಮುಖ್ಯಸ್ಥ ಮಣಿ ಮೊಹಮ್ಮದ್ ಮಾತನಾಡಿದರು. ವಾರ್ಷಿಕೋತ್ಸವ ಅಂಗವಾಗಿ ನಡೆದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದ ಪೋಷಕರ ಗಮನ ಸೆಳೆದರು.

ಇದೇ ಸಂದರ್ಭ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಭಾನ್ವಿತರಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ಕಲಾವಿದ ಭಾವ ಮಾಲ್ದಾರೆ, ಶಾಲಾ ಮುಖ್ಯ ಶಿಕ್ಷಕಿ ಕೆ.ಆರ್. ಅನಿತಾ, ದೈಹಿಕ ಶಿಕ್ಷಣ ಶಿಕ್ಷಕ ಬಿ.ವಿ. ಕಿರಣ್ ಕುಮಾರ್ ಸೇರಿದಂತೆ ಶಾಲಾ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.