ಮಡಿಕೇರಿ, ಡಿ. ೧೩: ಜಿಲ್ಲೆಯ ಪವಿತ್ರ ಕ್ಷೇತ್ರ ಭಾಗಮಂಡಲದ ಶ್ರೀ ಭಗಂಡೇಶ್ವರ ಸನ್ನಿದಿ ಎದುರಿನಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವದಕ್ಕೆ ಕೊಡಗು ಜಿಲ್ಲಾ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ; ಪವಿತ್ರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವದಕ್ಕೆ ಯಾವದೇ ಅಭ್ಯಂತರವಿಲ್ಲ, ಆದರೆ ಯಾವದೇ ಕಾಮಗಾರಿ ಮಾಡಬೇಕಿದ್ದರೂ ಕ್ಷೇತ್ರದ ತಂತ್ರಿಗಳನ್ನು ಕರೆಸಿ ಪ್ರಶ್ನೆ ಇಟ್ಟು ನಾಡಿನ ಪ್ರಮುಖರೆಲ್ಲರನ್ನೂ ಸೇರಿಸಿ ಚರ್ಚೆ ಮಾಡಿ ಮುಂದುವರಿಯುವದು ಸಂಪ್ರದಾಯ ಹಾಗೂ ಪದ್ಧತಿಯಾಗಿದೆ. ಆದರೆ, ಇದೀಗ ಅಲ್ಲಿ ಏನು ಕಾಮಗಾರಿಯಾಗುತ್ತಿದೆ ಎಂಬುದೇ ಗೊತ್ತಿಲ್ಲ, ಈ ಬಗ್ಗೆ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಜನರಿಗೆ ಮಾಹಿತಿ ನೀಡಬೇಕಿದೆ ಎಂದರು.

ಈ ಕಾಮಗಾರಿಯಿಂದಾಗಿ ದೇವಾ ಲಯದ ಸೌಂದರ್ಯ ಹಾಳಾಗುವದಲ್ಲದೆ, ಸಮೀಪವೇ ಹರಿಯುತ್ತಿರುವ ಪುಣ್ಯ ನದಿ ಕಲುಷಿತವಾಗಲಿದೆ. ಆ ನದಿ ಸಂಗಮವಾಗುವಲ್ಲಿ ಭಕ್ತರು ಭಕ್ತಿಪೂರ್ವಕವಾಗಿ ಪುಣ್ಯ ಸ್ನಾನ ಮಾಡುತ್ತಾರೆ. ಹಾಗಾಗಿ ಕಾಮಗಾರಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಅಲ್ಲಿ ಮಾಡಲಿ ಎಂದು ಹೇಳಿದರು. ಇದರೊಂದಿಗೆ ತಲಕಾವೇರಿಯಲ್ಲಿ ಕೂಡ ಬಿಬಿಎಂಪಿ ಅನುದಾನದಡಿ ಕಾಮಗಾರಿಗೆ ಮುಂದಾಗಿದ್ದು, ಈ ಬಗ್ಗೆ ಕೂಡ ಯಾವದೇ ಮಾಹಿತಿ ಇಲ್ಲವೆಂದು ರವಿ ಕಾಳಪ್ಪ ಹೇಳಿದರು.

ಜಿಲ್ಲಾಧಿಕಾರಿಗಳು ಮಾಡುವದಲ್ಲ

ವಿಧಾನಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಕಾವೇರಿ ಕೊಡಗಿನವರ ಕುಲದೇವತೆ, ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡುವದು ಸಂತೋಷ, ಆದರೆ, ಅಷ್ಟಮಂಗಲ ಪ್ರಶ್ನೆ ಹಾಕಿ ತಂತ್ರಿಗಳ ನಿರ್ದೇಶನದಂತೆ ಕೆಲಸ ಮಾಡಬೇಕು. ಭಕ್ತರ ಭಾವನೆಗಳಿಗೆ ತೊಂದರೆ ಮಾಡಬಾರದು. ಇಂತಹ ಕಾರ್ಯಗಳನ್ನು ಜಿಲ್ಲಾಧಿಕಾರಿಗಳು ಮಾಡುವದಲ್ಲ, ಇದು ಎಲ್ಲರಿಗೂ ಸೇರಿದ ದೇವಸ್ಥಾನ, ಪ್ರಶ್ನೆ ಇಟ್ಟು ಕೆಲಸ ಮಾಡಬೇಕೆಂದು ಹೇಳಿದರು.

ಶಾಸಕರ ವಿಫಲತೆ

ಬಿಜೆಪಿ ವಕ್ತಾರ ಹಾಗೂ ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್‌ಕುಮಾರ್ ಮಾತನಾಡಿ, ಕಾಫಿ ಮಂಡಳಿಯಿAದ ಬೆಳೆ ನಷ್ಟದ ಬಗ್ಗೆ ಸಮಗ್ರ ಪರಿಶೀಲನೆ ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಕೇಂದ್ರದಿAದ ಎನ್‌ಡಿಆರ್‌ಎಫ್ ನಿಧಿಯಡಿ ಅನುದಾನ ಬಿಡುಗಡೆಯಾಗಿದ್ದರೂ ರಾಜ್ಯ ಸರಕಾರದಿಂದ ಅದಕ್ಕೆ ಹೊಂದಾಣಿಕೆ ಅನುದಾನ ನೀಡಿಲ್ಲ. ಜಿಲ್ಲೆಯ ಶಾಸಕರುಗಳು ಕೂಡ ಬೆಳೆಗಾರರೇ ಆಗಿದ್ದು, ಅನುದಾನ ಒದಗಿಸದಿರುವದು ಶಾಸಕರ ವಿಫಲತೆ ಎಂದೇ ಹೇಳಬೇಕು. ಇದು ನಾಚಿಕೆಗೇಡಿನ ಸಂಗತಿ, ಕೂಡಲೇ ಶಾಸಕರು ಪರಿಹಾರ ಒದಗಿಸಲು ಮುಂದಾಗಬೇಕೆAದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ವಕ್ತಾರ ಬಿ.ಕೆ. ಅರುಣ್‌ಕುಮಾರ್ ಇದ್ದರು.