ಮಡಿಕೇರಿ, ಡಿ. ೧೩ : ಕೊಡವ ಜಮ್ಮಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್‌ನ ಸಹಯೋಗದೊಂದಿಗೆ ಪುಡಿಯಂಡ ದೇವಣಗೇರಿ-ಕೊಂಡAಗೇರಿ ಕುಟುಂಬಸ್ಥರ ವತಿಯಿಂದ ೨೦೨೬ನೇ ಏ. ೨೪ ರಿಂದ ಮೇ ೧ರವರೆಗೆ ಕೊಡವ ಜಮ್ಮಾ ಮುಸ್ಲಿಂ ಕುಟುಂಬಸ್ಥರಿಗೆ ೩ನೇ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಪುಡಿಯಂಡ ಕುಟುಂಬದ ಅಧ್ಯಕ್ಷ ಪುಡಿಯಂಡ ಉಸ್ಮಾನ್ ತಿಳಿದ್ದಾರೆ.

ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮಿಯಾಲ-ಅರಮೇರಿ ಗ್ರಾಮದಲ್ಲಿರುವ ಎಸ್.ಎಂ.ಎಸ್. ಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದರು, ವಿಧಾನ ಪರಿಷತ್ ಸದಸ್ಯರು, ಶಾಸಕರುಗಳು ಎಲ್ಲಾ ರಾಜಕೀಯ ಪಕ್ಷದ ಮುಖಂಡರುಗಳು, ಕೊಡವ ಜಮ್ಮಾ ಮುಸ್ಲಿಂ ಸಂಘಟನೆ ಆಡಳಿತ ಮಂಡಳಿ, ಕೆ.ಎಂ.ಎ ಆಡಳಿತ ಮಂಡಳಿ, ಕುಟುಂಬದ ಎಲ್ಲಾ ತಕ್ಕ ಮುಖ್ಯಸ್ಥರುಗಳು ಹಾಗೂ ಎಲ್ಲಾ ಜನಾಂಗದ ಮುಖ್ಯಸ್ಥರುಗಳು ಭಾಗವಹಿಸಲಿದ್ದಾರೆ ಎಂದರು.

ಕ್ರೀಡಾಕೂಟವು ಪುಡಿಯಂಡ ಕುಟುಂಬದ ತಕ್ಕ ಮುಖ್ಯಸ್ಥರಾದ ಮಹಮ್ಮದ್ ಹಾಜಿ, ಅಬ್ದುಲ್ಲ ಹಾಜಿ, ಕಾರ್ಯಕಾರಿಣಿ ಸದಸ್ಯರುಗಳಾದ ಬಶೀರ್ ಸಅದಿ, ಲಿಯಾಕತ್ ಅಲಿ, ಸಾದಲಿ ಅವರ ಮಾರ್ಗದರ್ಶನದಲ್ಲಿ ನಡೆಯಲಿದ್ದು, ಪುಡಿಯಂಡ ಕುಟುಂಬದ ವಿದೇಶದಲ್ಲಿ ಉದ್ಯೋಗದಲ್ಲಿರುವವರು ಸೇರಿ ಸರ್ವ ಸದಸ್ಯರುಗಳು ಸಮಿತಿ ಸದಸ್ಯರುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಪುಡಿಯಂಡ ಕುಟುಂಬದ ಕಾರ್ಯದರ್ಶಿ ಅಬ್ದುಲ್ ರಹೀಂ ಮಾತನಾಡಿ, ಮೊದಲ ವರ್ಷ ಕುವಲೆರ ಚಾಮಿಯಾಲ ಕುಟುಂಬ ಮತ್ತು ಎರಡನೇ ವರ್ಷ ಆಲಿರ ಕುಟುಂಬಸ್ಥರು ಕ್ರಿಕೆಟ್ ಕ್ರೀಡಾಕೂಟವನ್ನು ಆಯೋಜಿಸಿದ್ದು, ೭೦ ಕುಟುಂಬಸ್ಥರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.

ಕ್ರೀಡಾಕೂಟ ವಿಜೇತ ತಂಡಕ್ಕೆ ೧,೨೨,೨೨೨ ರೂ. ನಗದು ಮತ್ತು ಟ್ರೋಫಿ, ದ್ವಿತೀಯ ೬೬,೬೬೬ ರೂ., ತೃತೀಯ ೩೩,೩೩೩ ರೂ. ಹಾಗೂ ೪ನೇ ಸ್ಥಾನ ಪಡೆಯುವ ತಂಡಕ್ಕೆ ೨೨,೨೨೨ ರೂ. ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಪುಡಿಯಂಡ ಕುಟುಂಬಸ್ಥರಾದ ಶಾದಲಿ, ಸಮದ್, ಅಯಮದ್, ಮೊಯ್ದು ಉಪಸ್ಥಿತರಿದ್ದರು.