ಸಿದ್ದಾಪುರ, ಡಿ. ೯: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಿ.ಪಿ.ಐ.ಎಂ. ಪಕ್ಷದ ವತಿಯಿಂದ ಸಿದ್ದಾಪುರ ಗ್ರಾಮ ಪಂಚಾಯಿತಿಯ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿ.ಪಿ.ಐ.ಎಂ. ಪಕ್ಷದ ಪ್ರಮುಖರಾದ ಎನ್.ಕೆ. ಅನಿಲ್, ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ಹಾಗೂ ಬಾಡಿಗೆ ಮನೆಗಳಲ್ಲಿ ವಾಸ ಮಾಡಿಕೊಂಡಿರುವ ಬಡವರಿಗೆ ನಿವೇಶನಕ್ಕಾಗಿ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಹಲವು ವರ್ಷಗಳು ಕಳೆದರೂ ನಿವೇಶನ ದೊರೆತಿಲ್ಲ ಎಂದು ಆರೋಪಿಸಿದರು.
ನಿವೇಶನ ರಹಿತ ಕುಟುಂಬಗಳು ಗ್ರಾಮ ಪಂಚಾಯಿತಿಗೆ ನೀಡಿರುವ ಅರ್ಜಿಯ ಬಗ್ಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು ಗಂಭೀರ ವಾಗಿ ಪರಿಗಣಿಸದೆ ನಿರ್ಲಕ್ಷö್ಯ ವಹಿಸುತ್ತಿರುವುದು ಖಂಡನೀಯ ಎಂದರು. ಕೂಡಲೇ ನಿವೇಶನ ರಹಿತರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿದರು. ಗುಹ್ಯ ಗ್ರಾಮದ ಕೂಡುಗದ್ದೆ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು. ಕೂಡುಗದ್ದೆ ಸೇರಿದಂತೆ ಗ್ರಾಮ ವ್ಯಾಪ್ತಿಯ ಹಲವು ರಸ್ತೆಗಳು ಹದೆಗೆಟ್ಟಿದ್ದು ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕೆಂದು ಒತ್ತಾಯಪಡಿಸಿದರು. ಪ್ರತಿಭಟನೆಯಲ್ಲಿ ಸಿ.ಪಿ.ಐ.ಎಂ. ಪಕ್ಷದ ಪದಾಧಿಕಾರಿಗಳಾದ ಎನ್.ಡಿ. ಕುಟ್ಟಪ್ಪನ್, ವೈಜು ಇನ್ನಿತರರು ಹಾಜರಿದ್ದರು.