ವಿಶ್ವ ಮಾನವ ಹಕ್ಕುಗಳು ಜಾಗತಿಕ ಒಗ್ಗಟ್ಟು ಮತ್ತು ಸಮ ಸಮಾಜದ ನಿರ್ಮಾಣದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಇತರರ ಹಕ್ಕುಗಳನ್ನು ಉಲ್ಲಂಘಿಸದೆ ಗೌರವಿಸುವ ಹಾಗೂ ನಮ್ಮ ಹಕ್ಕುಗಳನ್ನು ಇತರರು ಉಲ್ಲಂಘಿಸಲು ಅವಕಾಶ ಕೊಡದೇ ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಎಲ್ಲರಿಗೂ ಸಮಾನ ಅವಕಾಶ ಕೊಡುವವೇ ಮಾನವ ಹಕ್ಕುಗಳು. ಒಂದು ಸುಭದ್ರ ಮತ್ತು ಸುವ್ಯವಸ್ಥಿತ ಸಮಾಜ ಕಟ್ಟುವಲ್ಲಿ ಈ ಮಾನವ ಹಕ್ಕುಗಳ ಪಾತ್ರ ಗಣನೀಯವಾದುದು. ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿಯೂ ಈ ಮಾನವ ಹಕ್ಕುಗಳ ರಕ್ಷಣೆಗಾಗಿ ನಡೆದ ಹೋರಾಟಗಳು, ಚಳವಳಿಗಳು, ಹರಿಸಿದ ರಕ್ತ ಕ್ರಾಂತಿಗಳು ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದೆ. "ಉಳಿವಿಗಾಗಿ ಹೋರಾಟ" ಎನ್ನುವುದು ಯಾವುದೇ ಜೀವ ಸಂಕುಲದ ಮೊದಲ ಧ್ಯೇಯವೆನ್ನುವುದು ಬದುಕಿನ ವಾಸ್ತವತೆ. ತಮ್ಮ ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ಪ್ರತಿಯೊಂದು ಜೀವಿಯೂ ಆಜೀವ ಪರ್ಯಂತ ಹೋರಾಡುತ್ತಲೇ ಇರುತ್ತದೆ. ಆದರೆ ಇತರರಿಂದ ತನ್ನ ಜೀವಿತದ ಹಕ್ಕಿನ ಮೇಲಾಗುವ ದೌರ್ಜನ್ಯವನ್ನು ಮಾತ್ರ ಪ್ರತಿಭಟನೆಯ ಮೂಲಕ ವಿರೋಧಿಸುವ ಸ್ವಾತಂತ್ರ‍್ಯವೇ ನಿಜವಾದ ವ್ಯಕ್ತಿ ಸ್ವಾತಂತ್ರ‍್ಯ. ಹಾಗಾಗಿ ಮತ್ತೊಬ್ಬರ ಬದುಕಿನ ಹಕ್ಕನ್ನು ಕಸಿದುಕೊಳ್ಳುವಂತಹ ದಬ್ಬಾಳಿಕೆ ಮೆರೆಯುವ ಪ್ರವೃತ್ತಿಗೂ ಅಂಕುಶ ಹಾಕುವ ಕಾನೂನು ಬದ್ಧವಾಗಿ ರಕ್ಷಣೆ ಕೊಡುವ ಹಕ್ಕುಗಳೇ ಈ ಮಾನವ ಹಕ್ಕುಗಳು.
ನಾವು ನಮ್ಮ ಜಾಗತಿಕ ಇತಿಹಾಸದ ಮೇಲೊಮ್ಮೆ ಕಣ್ಣಾಡಿಸಿದಾಗ ನಮಗೆ ಕಂಡುಬರುವ ಮಾನವನ ಅತ್ಯಂತ ವಿನಾಶಕಾರಿ ಸ್ವಭಾವ ಎಂದರೆ ಸದಾ ಮತ್ತೊಬ್ಬರನ್ನು ಹಿಡಿತದಲ್ಲಿಟ್ಟುಕೊಳ್ಳುವ ಈ ದಬ್ಬಾಳಿಕೆಯ ಪ್ರವೃತ್ತಿ. ಇದರಿಂದಾಗಿಯೇ ನಾಗರಿಕತೆ ಪ್ರಾರಂಭವಾದಾಗಿನಿAದ ಆಗ ನಡೆದು ಹೋದ, ಈಗ ನಡೆಯುತ್ತಿರುವ, ಮುಂದೆಯೂ ನಡೆಯಬಹುದಾದ ಮಾನವ- ಮಾನವರ ನಡುವೆ ದೇಶ - ದೇಶ ಗಳ ಮಧ್ಯೆ, ಜಾತಿ, ಧರ್ಮ, ಜನಾಂಗ, ಲಿಂಗ ತಾರತಮ್ಯ ಹೀಗೆ ಒಬ್ಬರ ಹಕ್ಕನ್ನು ಕಸಿದುಕೊಳ್ಳುವ ಪ್ರವೃತ್ತಿ ಇಂದು ನೆನ್ನೆಯದಲ್ಲ. ಇದು ನಿರಂತರವಾಗಿ ನಡೆಯುತ್ತಲೇ ಬಂದಿರುವ ಮಾನವ ಸಮುದಾಯವನ್ನು ಕಾಡುತ್ತಿರುವ ಅತಿ ದೊಡ್ಡದಾದ ಕಂಟಕ. ಜಾಗತಿಕ ಮಟ್ಟದಲ್ಲಿ ನಡೆದ ಐತಿಹಾಸಿಕ ಘಟನೆಗಳನ್ನು ಕುರಿತಾದ ಉದಾಹರಣೆಯನ್ನೇ ಗಮನಿಸೋಣ. ರಷ್ಯಾ ಕ್ರಾಂತಿಗೆ ಕಾರಣವಾದ ಆರ್ಥಿಕ ಅಸಮಾನತೆ, ಫ್ರಾನ್ಸ್ ಕ್ರಾಂತಿಗೆ ಕಾರಣ ವಾದ ಸಾಮಾಜಿಕ ಅಸಮಾನತೆ, ದಕ್ಷಿಣ ಆಫ್ರಿಕಾದಲ್ಲಿ ಕಂಡುಬAದ ವರ್ಣಬೇಧÀ ನೀತಿ, ಕಪ್ಪು-ಬಿಳಿಯರ ನಡುವಿನ ತಾರತಮ್ಯ ಭಾವ ಇವೆಲ್ಲವೂ ಒಂದೊAದು ರೀತಿಯ ಹಕ್ಕುಗಳ ಉಲ್ಲಂಘನೆಯಲ್ಲದೆ ಮತ್ತೇನು?
"ಯತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಾಃ" ಎಂದು ಹೆಣ್ಣನ್ನು ಭಕ್ತಿಭಾವದಿಂದ ನೋಡುವ ನಮ್ಮ ನಾಡಿನಲ್ಲಿಯೂ ಹೆಣ್ಣು ಮಕ್ಕಳ ಕಡೆಗಣನೆಗೆ ಸಂಬAಧಿಸಿದAತೆ ಬೇಕಾದಷ್ಟು ಉದಾಹರಣೆಗಳಿವೆ. ತನ್ನ ತಂದೆ-ತಾಯಿಗಳಿಗೆ ಸೇರಿದ ಆಸ್ತಿಯಲ್ಲಿ, ಗಂಡನ ಆಸ್ತಿಯಲ್ಲಿ ಪಾಲು ಪಡೆಯಲು ಅದೆಷ್ಟು ಶತಮಾನದ ಹೋರಾಟ ಮಾಡಬೇಕಾಯಿತು? ವಿದ್ಯಾಭ್ಯಾಸದಲ್ಲಿ ಪಾಲು ಪಡೆಯಲು ಹೆಣ್ಣು ಮಕ್ಕಳ ಹೋರಾಟದ ಹಾದಿ ಇಂದು ನಿನ್ನೆಯದಲ್ಲ. ಯಾವುದೋ ಅಂಕುಶ ಹಿಡಿದ ಕೈಗಳ ಅಡಿಯಾಳಾಗಿ ಕಳೆದು, ಪ್ರತಿಭೆ ಸಾಮರ್ಥ್ಯವಿದ್ದೂ ಬದುಕು ವ್ಯರ್ಥವಾದ ಸಾಕ್ಷಿಗಳು ಬೇಕಾದಷ್ಟಿವೆ. ನಾವೇ ಸೃಷ್ಟಿಸಿಕೊಂಡ ಸಾಮಾಜಿಕ ಸ್ಥಾನ ಮಾನವನ್ನು ಎತ್ತಿ ತೋರಿಸುವ ನಾಲ್ಕು ವರ್ಗಗಳಲ್ಲಿ ತಳ ಸಮುದಾಯವೆಂದು ಪರಿಗಣಿಸಲ್ಪಟ್ಟು ಶತ ಶತ ಮಾನಗಳಿಂದ ಸಮಾಜದಿಂದ ಹೊರಗಿಡಲ್ಪಟ್ಟ ಶೋಷಿತ ಸಮುದಾಯ ಇದೇ ಮಾನವ ಹಕ್ಕುಗಳಿಂದ ವಂಚಿತವಾದ ಪ್ರತಿರೂಪವೇ ತಾನೇ ?
ಡಾರ್ವಿನ್‌ನ ವಿಕಾಸವಾದ ಸಿದ್ಧಾಂತದ ತಿರುಳಿನಂತೆ ಬಲಿಷ್ಠರೇ ಮೇಲುಗೈ ಸಾಧಿಸುತ್ತಾರೆ. ಹಾಗಾದರೆ ಇದು ಕೇವಲ ದೈಹಿಕ ಬಲಾಢ್ಯತೆಗೆ ಮಾತ್ರ ಸಂಬAಧಿಸಿದ್ದಾ ಎನ್ನುವ ಪ್ರಶ್ನೆಗೆ ಖಂಡಿತವಾಗಿಯೂ ಅಲ್ಲ ಎನ್ನುವ ಉತ್ತರ ನಮ್ಮ ಮುಂದಿದೆ. ಹಣ ಬಲ, ಅಧಿಕಾರದ ಬಲ ಎನ್ನುವುದು ಪ್ರತಿಭೆ, ಸ್ವ ಸಾಮರ್ಥ್ಯವನ್ನು ಕೊಂಡುಕೊಳ್ಳುವ ಮಟ್ಟಿಗೆ ಇವುಗಳ ಮುಂದೆ ಮಿಕ್ಕ ಪ್ರತಿಭೆಗಳೆಲ್ಲ ನಗಣ್ಯ ಎಂಬAತೆ ಪರಿಗಣಿಸಲ್ಪಡುತ್ತಿವೆ. ಎಷ್ಟು ಮಂದಿಗೆ ಅರ್ಹತೆ, ಆಸಕ್ತಿಯ ಆಧಾರದ ಮೇಲೆ ಜವಾಬ್ದಾರಿ, ನಾಯಕತ್ವ ನಿರ್ವಹಣೆಗಾಗಿ ಪರಿಗಣಿಸಲ್ಪಟ್ಟಿದ್ದಾರೆ? ಈ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ಯಾವುದೇ ಕ್ಷೇತ್ರವಿರಲಿ ರಾಜಕೀಯ, ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ, ಉದ್ಯೋಗ ಕ್ಷೇತ್ರ ಹೀಗೆ ಬದುಕಿನ ಎಲ್ಲಾ ವಲಯಗಳಲ್ಲಿಯೂ ಈ ತಾರತಮ್ಯವನ್ನು ಕಾಣುತ್ತಿದ್ದೇವೆ. ಮಾನವ ಹಕ್ಕುಗಳು ಪ್ರತಿಯೊಬ್ಬರ ಸಾಮರ್ಥ್ಯ, ಪ್ರತಿಭೆಗಳಿಗೆ ಲೀಲಾ ಜಾಲವಾಗಿ ಅವಕಾಶಗಳನ್ನು ಒದಗಿಸುತ್ತಿರಬೇಕು. ಯಾವ ಕಾಣದ ಕೈಗಳ ಪ್ರಭಾವಕ್ಕೆ ಸಿಲುಕದೆ, ನಲುಗದೆಯೇ ತನಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಹಕ್ಕುಗಳು ಬಳಕೆಯಾಗಬೇಕು. ಆದರೆ ಇದು ಉಳ್ಳವರು ಹಾಗೂ ಇಲ್ಲದವರ ನಡುವಿನ ನಿರಂತರ ಹೋರಾಟವೆಂಬAತೆ ನಿರಂತರವಾಗಿ ಬಿಂಬಿತವಾಗುತ್ತಿದೆ. ಇದು ಸ್ವಸ್ಥ ಸಮಾಜದ ನಿರ್ಮಾಣಕ್ಕಿರುವ ಏಕೈಕ ಕಂಟಕ ಎಂದರೆ ತಪ್ಪಾಗಲಾರದು.
ಮಾನವ ಹಕ್ಕುಗಳ ಮಾನ್ಯತೆಯನ್ನು ೧೯೪೮, ಡಿಸೆಂಬರ್ ೧೦ ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಿಂದ ಅಂಗೀಕರಿಸಲ್ಪಟ್ಟರೂ ಸಹ ಈ ಅಸಮಾನತೆಯ ತೊಳಲಾಟಕ್ಕೆ ಇನ್ನೂ ಪೂರ್ಣ ವಿರಾಮ ಬೀಳಲಿಲ್ಲ ಎಂದಾಗ ನಾವು ಕಾನೂನಿನ ಮೂಲಕ ಪರಿಹಾರ ಕಾಣುವ ಮುಂಚೆ ಪ್ರತಿಯೊಬ್ಬರ ಮನಸ್ಥಿತಿಯಲ್ಲಿ ಈ ಬದಲಾವಣೆ ತರಲೇಬೇಕಾದ ಅನಿವಾರ್ಯತೆ ಇದೆ ಎನ್ನುವುದು ಸ್ಪಷ್ಟ.
ಆ ಕಾಲಘಟ್ಟದಲ್ಲಿ ಶಿಕ್ಷಣ ಎನ್ನುವುದು ಕೆಲವೇ ಕೆಲವರ ಹಕ್ಕು ಎಂದು ಸ್ವೀಕರಿಸಲ್ಪಟ್ಟ ಕಾಲದಲ್ಲಿ ಕೂಡ ನಿರಕ್ಷರಿಗಳು, ಅವಿದ್ಯಾವಂತರು ತಾವೇನು? ತಮಗೇನು ಅರ್ಹತೆ ಇದೆ ಎನ್ನುವ ಅರಿವೇ ಇಲ್ಲದಿದ್ದಾಗ ಹಕ್ಕುಗಳ ಬಗ್ಗೆ ಇನ್ನೇನು ಹೇಳೋಕೆ ಸಾಧ್ಯ? ಅಲ್ಲಿ ಮೋಸ, ವಂಚನೆ ನಡೆದದ್ದು ಅದು ಸಹಜವೇ. ಆದರೆ ಈಗಿನ ಸುಶಿಕ್ಷಿತ ಸಮುದಾಯ ಈ ಮಾನವ ಹಕ್ಕುಗಳನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳುತ್ತಿದೆ? ಹಕ್ಕುಗಳು ಎನ್ನುವುದು ದುರಹಂಕಾರದ, ಸ್ವೇಚ್ಛಾಚಾರದ ರೀತಿಯಲ್ಲಿ ದುರುಪಯೋಗವಾಗುತ್ತಿದೆಯೇನೊ ಅನ್ನಿಸುತ್ತಿದೆ. ವಿವೇಚನೆ ಇಲ್ಲದ ಚಿಂತನೆಗಳು, ನಡವಳಿಕೆಗಳು, ಬದುಕಿನ ಶೈಲಿ, ತಂತ್ರಜ್ಞಾನ, ಫ್ಯಾಷನ್ ಹೆಸರಿನಲ್ಲಿ ಮೌಲ್ಯವನ್ನು ಕಳೆದುಕೊಂಡು ನಾಟಕೀಯವಾಗಿ ಕಳೆದು ಹೋಗುತ್ತಿರುವ ನಮಗೀಗ ಅರ್ಥವಾಗಬೇಕಾಗಿರುವುದು ಒಂದೇ.. ಯಾವುದನ್ನು ಹೇಗೆ ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು ಸದಭಿರುಚಿಯ ಬದುಕನ್ನು ಪಡೆಯಲು ಎಂಬುದು. ಇಲ್ಲಿ ಒಂದೊAದು ವರ್ಗಕ್ಕೆ ಒಂದೊAದು ರೀತಿಯಲ್ಲಿ ಈ ಹಕ್ಕುಗಳು ಸಾಧನವಾಗುತ್ತಿವೆ. ಸರಳವಾಗಿ ಹೇಳುವುದಾದರೆ ಉಳ್ಳವರು ಹಾಗೂ ಇಲ್ಲದವರಲ್ಲಿ ಮಾನವ ಹಕ್ಕುಗಳು ವಿಭಿನ್ನವಾಗಿ ಸ್ವೀಕರಿಸಲ್ಪಟ್ಟಿವೆ. ಅವರವರ ಆವಶ್ಯಕತೆ ಹಾಗೂ ಅನಿವಾರ್ಯತೆಗೆ ತಕ್ಕ ಹಾಗೆ ಎನ್ನಬಹುದು. ಒಂದು ಕಡೆ ಸಾಮಾಜಿಕ ನ್ಯಾಯವನ್ನು ಒದಗಿಸುವಲ್ಲಿ ಈ ಹಕ್ಕುಗಳು ಮಾಂತ್ರಿಕ ಶಕ್ತಿಯಾಗಿದ್ದರೆ, ಸರ್ವಾಧಿಕಾರದಿಂದ ಮೆರೆಯುವ ಬೇರೊಂದು ವರ್ಗ ದಬ್ಬಾಳಿಕೆ ಮೆರೆಯಲೆಂದೇ ಇವನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡಿವೆ. ವಿಶ್ವದ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ರೂಪಿಸುವಲ್ಲಿ ಅಂದು ನಿರ್ಣಾಯಕ ಪಾತ್ರ ವಹಿಸಿದ ಭಾರತ ಇಂದು ಮಾನವ ಹಕ್ಕುಗಳ ದಮನಕಾರಿ ಕಾಲಘಟ್ಟದಲ್ಲಿರುವುದು ಅತ್ಯಂತ ದೌರ್ಭಾಗ್ಯದ ಸಂಗತಿ. ಮಾನವ ಹಕ್ಕುಗಳ ಉಲ್ಲಂಘನೆಯೇ ಭಾರತದ ಇಂದಿನ ರಾಜಕೀಯ, ಸಾಮಾಜಿಕ ಆರ್ಥಿಕ, ಔದ್ಯೋಗಿಕ ಹಾಗೂ ಬದುಕಿನ ಎಲ್ಲಾ ವಲಯದ ಹೀನಾಯ ಸ್ಥಿತಿಗೆ ಮೂಲ ಕಾರಣ ಎನ್ನಬಹುದಾಗಿದೆ. ಇವುಗಳ ಸುಧಾರಣೆಯಾಗಬೇಕೆಂದರೆ ಅದು ಕಾನೂನು, ನೀತಿ-ನಿಯಮಗಳಿಗಿಂತಲೂ ವ್ಯಕ್ತಿಯ ಮೂಲ ಮನಸ್ಥಿತಿಯಲ್ಲಿ ಪ್ರಗತಿಪರ ಚಿಂತನೆಗಳು ಮೊಳಗಬೇಕು. ಕುವೆಂಪುರವರ ವಿಶ್ವ ಮಾನವ ತತ್ತ್ವ ಜಾಗತಿಕ ಮಟ್ಟದಲ್ಲಿ ಪರಿಪಾಲನೆಯಾಗಬೇಕು. ಜಾತಿ, ಧರ್ಮ, ಲಿಂಗವೆAಬ ಭೇದ-ಭಾವ ಬಿಟ್ಟು ವ್ಯಕ್ತಿಯನ್ನು ವ್ಯಕ್ತಿಯಾಗಿ ನೋಡುವ ಮನಸ್ಥಿತಿಯನ್ನು ಪ್ರತಿಯೊಬ್ಬರೂ ತಲುಪಬೇಕಾಗಿದೆ. ಅಲ್ಲಿಯವರೆಗೆ ಮಾನವ ಹಕ್ಕುಗಳು ಪರಿಣಾಮಕಾರಿಯಾಗಿ ನಮ್ಮ ಬದುಕಿ ನಲ್ಲಿ ಅಳವಡಿಕೆಯಾಗಲಾರದು.
-ಪ್ರತಿಮಾ ಹರೀಶ್ ರೈ, ಉಪನ್ಯಾಸಕರು,
ಸೈಂಟ್ ಆ್ಯನ್ಸ್ ಪದವಿ ಕಾಲೇಜು, ವೀರಾಜಪೇಟೆ.