ಮಡಿಕೇರಿ, ಡಿ. ೫: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತ ಇಲಾಖೆ, ಮಡಿಕೇರಿ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ, ಹೆಬ್ಬೆಟ್ಟಗೇರಿಯ ಪಾಂಡೀರ ಕುಟುಂಬ ಮತ್ತು ಮಡಿಕೇರಿ ಕೊಡವ ಸಮಾಜದ ವತಿಯಿಂದ ಐತಿಹಾಸಿಕ ಪುತ್ತರಿ ಕೋಲಾಟ್ ಕಾರ್ಯಕ್ರಮ ನಗರದ ಕೋಟೆ ಆವರಣದಲ್ಲಿ ನಡೆಯಿತು.
ಮೊದಲಿಗೆ ಕೋಟೆ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪಾಂಡೀರ ಕುಟುಂಬಸ್ಥರು ದೇವ ಕೋಲನ್ನು ಕೋಟೆಯ ಮಂದ್ಗೆ ದುಡಿಕೊಟ್ಟ್ ಪಾಟ್, ವಾಲಗ ಸಹಿತ ತಂದು ಪ್ರಾರ್ಥನೆ ಸಲ್ಲಿಸಿ ಪುತ್ತರಿ ಕೋಲಾಟ್ಗೆ ಚಾಲನೆ ನೀಡಿದರು.
ಪಾಂಡೀರ ಕುಟುಂಬ, ಮಡಿಕೇರಿ ಕೊಡವ ಸಮಾಜ, ಪೊಮ್ಮಕ್ಕಡ ಒಕ್ಕೂಟದಿಂದ ಕೋಲಾಟ್, ಉಮ್ಮತ್ತಾಟ್, ಬೊಳಕಾಟ್, ಪರೆಯಕಳಿ ಪ್ರದರ್ಶನಗೊಂಡು ಕೊನೆಗೆ ನೆರೆದಿದ್ದವರು ವಾಲಗಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಪಾಲ್ಗೊಂಡು ಮಾತನಾಡಿ, ರಾಜರ ಕಾಲದಿಂದಲೂ ಇಲ್ಲಿ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ನಡೆಯುತ್ತಿತ್ತು. ಅನಂತರ ಗದ್ದುಗೆಯಲ್ಲಿ ನಡೆದು ಇದೀಗ ಕೋಟೆಯಲ್ಲಿ ಮರು ವೈಭವ ಸೃಷ್ಟಿಯಾಗಿದೆ. ಸಂಸ್ಕೃತಿ, ಸಂಪ್ರದಾಯ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪರಂಪರೆಗೆ ಧಕ್ಕೆ ಬಾರದ ರೀತಿ ನಡೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.
ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ಮಾತನಾಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಈ ರೀತಿ ಪರಂಪರಾಗತ ಕಾರ್ಯಕ್ರಮ ಮುನ್ನಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ಕಾರ್ಯನಿರ್ವಾಹಣಾಧಿಕಾರಿ ದೇವರಾಜು, ಪಾಂಡೀರ ಕುಟುಂಬದ ಪಟ್ಟೇದಾರ ಮೇದಪ್ಪ, ತಕ್ಕಮುಖ್ಯಸ್ಥ ರವಿ ಕರುಂಬಯ್ಯ, ಪ್ರಮುಖರಾದ ಮಣಿ ಕಾಳಪ್ಪ, ಕುಟುಂಬದ ಆಡಳಿತ ಮಂಡಳಿ ಅಧ್ಯಕ್ಷ ಪಿ.ಟಿ. ಅಯ್ಯಣ,್ಣ ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಸೇರಿದಂತೆ ಇನ್ನಿತರರು ಸದಸ್ಯರು ಹಾಜರಿದ್ದರು.
ಪಾಂಡೀರ ಶ್ರೇಯಾ ಅಯ್ಯಮ್ಮ ಪ್ರಾರ್ಥಿಸಿ, ಪಾಂಡೀರ ಮುತ್ತಣ್ಣ ಸ್ವಾಗತಿಸಿ, ಚೋಕಿರ ಅನಿತಾ ನಿರೂಪಿಸಿದರು.