ಭಾಗಮಂಡಲ, ಡಿ. ೫ : ಭಾಗಮಂಡಲದ ಕಾವೇರಿ ಕೋಲ್ ಮಂದ್‌ನಲ್ಲಿ ಶುಕ್ರವಾರ ನಾಲ್ಕು ಗ್ರಾಮದವರಿಂದ ಹುತ್ತರಿ ಕೋಲಾಟ ಸಂಭ್ರಮದಿAದ ನಡೆಯಿತು.
ಭಾಗಮಂಡಲದ ತಾವೂರು, ಚೇರಂಗಾಲ, ಕೋರಂಗಾಲ ಮತ್ತು ತಣ್ಣಿಮಾನಿ ಗ್ರಾಮಸ್ಥರು ಒಟ್ಟಾಗಿ ಕಾವೇರಿ ಹಿರಿಯ ಮಾನಿ ಮಂದ್‌ನಲ್ಲಿ ತಾವೂರು ಗ್ರಾಮದ ಮಹಿಷಾಸುರ ಮರ್ದಿನಿ ದೇವಾಲಯದ ತಕ್ಕರಾದ ಕುರುಂಜಿ ಬಾಲಕೃಷ್ಣ, ಚೇರಂಗಾಲ ಗ್ರಾಮದ ಸಿರಕಜೆ ಸುಂದರ, ತಣ್ಣಿಮಾನಿ ಭಗವತಿ ದೇವಾಲಯದ ತಕ್ಕರಾದ ದಂಡಿನ ರುಕ್ಮಯ್ಯ, ಹಾಗೂ ಕೋರಂಗಾಲ ಗ್ರಾಮದ ಸುಬ್ರಹ್ಮಣ್ಯ ದೇವಾಲಯದ ನಂಗಾರು ವಿಜಯ ನೇತೃತ್ವದಲ್ಲಿ ಹುತ್ತರಿಕೋಲು ನಡೆಯಿತು. ಬಳಿಕ ಭಾಗಮಂಡಲಕ್ಕೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಒಟ್ಟು ಸೇರಿ ಭಗಂಡೇಶ್ವರ ದೇವಾಲಯಕ್ಕೆ ತೆರಳಿದರು. ಅಲ್ಲಿಂದ ವಾದ್ಯಗೋಷ್ಠಿಯೊಂದಿಗೆ ತೆರಳಿದ ಮಂದಿ ಎಂಟು ಸುತ್ತಿನ ಕೋಲಾಟ ನಡೆಸಿದರು. ನಂತರ ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ಹಿಂತಿರುಗಿ ಕೋಲು ಒಪ್ಪಿಸಲಾಯಿತು.
ತಣ್ಣಿಮಾನಿ ಗ್ರಾಮದ ಭಗವತಿ ದೇವಾಲಯದಲ್ಲಿ ಹುತ್ತರಿ ಕೋಲು ನಡೆದು ಅಲ್ಲಿಯೇ ಕೋಲು ಒಪ್ಪಿಸುವ ಸಂಪ್ರದಾಯವಿದೆ.
- ಸುನಿಲ್