ಕೊಡ್ಲಿಪೇಟೆ, ಡಿ. ೨: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಬೆಂಬಳೂರು ಕಿರುಹೊಳೆಗೆ ಕಾಫಿ ಪಲ್ಪರ್ ನ ತ್ಯಾಜ್ಯ ನೀರನ್ನು ಹರಿಯ ಬಿಡಲಾಗುತ್ತಿದ್ದು, ಇದರಿಂದ ನೀರು ಕಲುಷಿತಗೊಳ್ಳುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಬೆಂಬಳೂರು ಗ್ರಾಮದ ಹೊಳೆಯ ನೀರು ಕಾಫಿ ಪಲ್ಪರ್ನ ತ್ಯಾಜ್ಯ ನೀರಿನಿಂದ ಕಲುಷಿತಗೊಂಡಿದ್ದು, ಜಲಚರ ಪ್ರಾಣಿಗಳು ಸತ್ತು ಹೋಗುತ್ತಿವೆ. ಜೊತೆಗೆ ಇದೇ ನೀರನ್ನು ದನ ಕರುಗಳು ಕುಡಿಯುತ್ತಿರುವುದರಿಂದ ಅವುಗಳ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತಿದೆ ಎಂದು ಪಂಚಾಯಿತಿಗೆ ಗ್ರಾಮಸ್ಥರು ದೂರು ನೀಡಿದ್ದಾರೆ.
ಸಾರ್ವಜನಿಕರ ದೂರಿನ ಮೇರೆಗೆ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾವನ ಗಗನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಫಿ ಪಲ್ಪರ್ ತ್ಯಾಜ್ಯದ ನೀರನ್ನು ಹೊಳೆಗೆ ಹರಿಬಿಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್ ಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.