ಕಣಿವೆ, ಡಿ. ೨: ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಹೋಬಳಿಯ ನಾಕೂರು ಶಿರಂಗಾಲ ಗ್ರಾಮದಲ್ಲಿರುವ ಗಿರಿಜನ ಹಾಡಿಯ ನಿವಾಸಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿರುವ ಕುರಿತು ‘ಶಕ್ತಿ’ಯಲ್ಲಿ ಪ್ರಕಟಗೊಂಡ ವಿಶೇಷ ವರದಿಗೆ ಕೊಡಗು ಜಿಲ್ಲಾಡಳಿತ ಸ್ಪಂದಿಸಿದೆ.
ಪತ್ರಿಕೆಯಲ್ಲಿ ಪ್ರಕಟಗೊಂಡ ಗಿರಿಜನರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತಾದ ಲೇಖನದತ್ತ ಕಣ್ಣಾಡಿಸಿರುವ ಜಿಲ್ಲಾಧಿಕಾರಿಗಳು ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಕರೆ ಮಾಡಿ ಈ ಹಾಡಿಯ ಬಗ್ಗೆ ಮಾಹಿತಿ ಕೇಳಿದ್ದರು.
ನಂತರ ಹಾಡಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಕಿರಣ್ ಗೌರಯ್ಯ ನಿವಾಸಿಗಳ ಅಹವಾಲು ಆಲಿಸಿದರು. ಬಳಿಕ ಜಿಲ್ಲಾಧಿಕಾರಿಗಳನ್ನು ಖುದ್ದಾಗಿ ಭೇಟಿಯಾಗಿ ಅಲ್ಲಿ ಇರುವ ಮೂಲ ಸಮಸ್ಯೆಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸಿದರು.
ನಾಕೂರು ಶಿರಂಗಾಲ ಹಾಡಿಯ ನಿವಾಸಿಗಳ ವಾಸದ ಜಾಗ ಹಾಗೂ ಕೃಷಿ ಭೂಮಿಯ ಕುರಿತಾದ ಕಡತಗಳು ಕಾಣೆಯಾಗಿರುವುದಾಗಿ ತಿಳಿಸಿದ್ದಾರೆ. ಬಳಿಕ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಉಪವಿಭಾಗಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಭೂಮಾಪನ ಸರ್ವೆ ಇಲಾಖೆ ಅಧಿಕಾರಿಗಳು, ಕುಶಾಲನಗರ ತಹಶೀಲ್ದಾರ್ ಅವರ ಸಮ್ಮುಖದಲ್ಲಿ ವಿಶೇಷ ಸಭೆ ನಡೆಸಿ ನಾಕೂರು ಶಿರಂಗಾಲ ಹಾಡಿಯ ನಿವಾಸಿಗಳಿಗೆ ಅಗತ್ಯವಾಗಿ ಬೇಕಾದ ಭೂಮಿ ಹಾಗು ವಾಸಕ್ಕೆ ಅಗತ್ಯವಾದ ನಿವೇಶನಗಳ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ ಎಂದು ತಹಶೀಲ್ದಾರ್ ‘ಶಕ್ತಿ’ಗೆ ವಿವರ ನೀಡಿದ್ದಾರೆ.
ಈಗಾಗಲೇ ಹಾಡಿಯಲ್ಲಿನ ೩೩ ಮಂದಿ ಯರವ ಹಾಗೂ ಕುರುಬ ಸಮುದಾಯದ ನಿವಾಸಿಗಳ ಪಟ್ಟಿ ಸಿದ್ದಪಡಿಸಲಾಗಿದೆ. ಸದ್ಯದಲ್ಲೇ ಸರ್ವೆ ಕಾರ್ಯ ನಡೆಸಿ ದುರಸ್ತಿಗೆ ಮಂಜೂರಾತಿ ದೊರೆಯಲಿದೆ.
ನಂತರ ಫಲಾನುಭವಿಗಳಾದ ಹಾಡಿಯ ಸರ್ವೆ ನಂಬರ್ ೧೬೬/೧ ರಲ್ಲಿ ಕುರುಬರ ಸಿದ್ದ, ಮುತ್ತ, ರಾಮ, ಬಸವ,ರಾಜು, ಗೆಜ್ಜೆ, ನಂಜ, ಲಿಂಗ, ಬಸವ,ಗಿಣಿಯ, ರಾಜು, ಭೈರಾ, ಜುಟ್ಟ, ಕೆ.ಎ. ರಾಜು, ಬುರುಡ, ಯರವರ ನಂಜ, ಹರಿಜನ ತನಿಯ, ಅಂಗಾರ, ಜವರಪ್ಪ, ಪುಟ್ಟ,ವಿಠಲ ರೈ, ಈರ, ದಾಮೋದರನ್, ಯಂಕಮ್ಮ, ಕಲ್ಯಾಣಿ, ಪಳಂಗಪ್ಪ, ಕಾವೇರಪ್ಪ, ತಮ್ಮಣ್ಣಿ, ದೊಡ್ಡ, ಯರವರ ತಿಮ್ಮ, ರಾಜು ಸೇರಿ ೩೩ ಮಂದಿಗೆ ಆರ್ ಟಿ ಸಿ ನೀಡಲು ದುರಸ್ತಿ ಮಾಡಲಾಗುತ್ತದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.