ಕೊಡಗು ವಿಶಿಷ್ಟವಾದ ಪ್ರಕೃತಿ ಸೌಂದರ್ಯ, ಜನ ಜೀವನ, ಊಟ ಉಪಚಾರ, ಉಡುಗೆ-ತೊಡುಗೆಗಳು, ಬುಡಕಟ್ಟು, ಸಂಪ್ರದಾಯ, ಸಸ್ಯ ಹಾಗೂ ಪ್ರಾಣಿ ಸಂಕುಲವನ್ನು ಹೊಂದಿರುವ ಕೃಷಿ ಪ್ರಧಾನವಾದ ಪುಟ್ಟ ಜಿಲ್ಲೆ. ಕೊಡಗಿನಲ್ಲಿ ಪ್ರತಿ ವರ್ಷ ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ವೃಶ್ಚಿಕ ಮಾಸದ ಹನ್ನೊಂದನೆಯ ದಿನ ರೋಹಿಣಿ ನಕ್ಷತ್ರದ ಹುಣ್ಣಿಮೆ ಬೆಳಕಿನಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವು ಕೇರಳದ ಓಣಂ ಆದ ೯೦ ದಿನಗಳ ನಂತರ ಆಚರಿಸಲ್ಪಡುತ್ತದೆ. ಕಕ್ಕಬ್ಬೆಯಲ್ಲಿ ಇರುವ ಪಾಡಿ ಇಗ್ಗುತಪ್ಪ ದೇವಸ್ಥಾನದಲ್ಲಿ ತಕ್ಕರು ಮತ್ತು ಕಣಿಯರು ಸೇರಿ ಹುತ್ತರಿ ಹಬ್ಬದ ದಿನಾಂಕ ಹಾಗೂ ಮುಹೂರ್ತವನ್ನು ನಿರ್ಧರಿಸುತ್ತಾರೆ. ಮೊದಲು ಇಗ್ಗುತಪ್ಪ ದೇವಾಲಯದಲ್ಲಿ ಕದಿರು ತೆಗೆಯಲಾಗುತ್ತದೆ. ಇಗ್ಗುತಪ್ಪ ಎಂದರೆ ಸುಬ್ರಮಣ್ಯ ದೇವರು. ಅಲ್ಲಿ ಮೊದಲ ಪೂಜೆ ಮತ್ತು ನೈವೇದ್ಯ ನೆರವೇರುತ್ತದೆ. ಇದನ್ನು ದೇವಕೋಲು, ದೇವರ ಹಬ್ಬ ಎನ್ನುವರು. ಸುಬ್ರಮಣ್ಯನಿಗೆ ನೈವೇದ್ಯ ಅರ್ಪಿಸಿದ ನಂತರ ಇತರೆಡೆಗಳಲ್ಲಿ ಹಬ್ಬವನ್ನು ಆಚರಿಸುತ್ತಾರೆ.
ಹುತ್ತರಿ ಕೊಡಗಿನ ಸುಗ್ಗಿ ಹಬ್ಬ. ಹೊಸ ಭತ್ತದ ತೆನೆಯನ್ನು ಅಂದರೆ ಕದಿರನ್ನು ಸ್ವಾಗತಿಸುವ ಈ ಹಬ್ಬಕ್ಕೆ ಕೆಲವು ದಿನಗಳ ಹಿಂದಿನಿAದಲೇ ಮನೆ, ಭತ್ತದ ಕಣಗಳನ್ನು ಸ್ವಚ್ಚ ಮಾಡಿ, ಸುಣ್ಣ-ಬಣ್ಣಗಳಿಂದ ಅಲಂಕರಿಸುತ್ತಾರೆ. ಕದಿರು ಕೊಯ್ಯಲು ಹೋಗುವ ದಿನ ಕುಟುಂಬದವರೆಲ್ಲರೂ ಐನ್‌ಮನೆಯಲ್ಲಿ ಸೇರುತ್ತಾರೆ. ಅಲ್ಲಿ ನೆಲ್ಲಕ್ಕಿ ನಡುಬಾಡೆಯಲ್ಲಿ ತೂಗುದೀಪದ ಕೆಳಗೆ ಸಂಪ್ರದಾಯದAತೆ ಬಳಸುವ ವಸ್ತುಗಳನ್ನು ಇಟ್ಟು ನೆರೆ ಕಟ್ಟುವ ಕಾರ್ಯ ನೆರವೇರಿಸಲಾಗುತ್ತದೆ. ಅಲಂಕಾರಕ್ಕಾಗಿ ಅಕ್ಕಿ ಪುಡಿಯ ರಂಗೋಲಿ ಹಾಕಿ ಅಲಂಕರಿಸುತ್ತಾರೆ. ಹೊಸ ಕುಕ್ಕೆಯಲ್ಲಿ ಭತ್ತ, ಅರ್ಧ ಸೇರು ಅಕ್ಕಿಯನ್ನು ತುಂಬುತ್ತಾರೆ. ಹುತ್ತರಿ ಕುಡಿಕೆಯಲ್ಲಿ ತಂಬಿಟ್ಟು ಹಾಕಿ ಜೊತೆಗೆ ಹಾಲು, ತುಪ್ಪ, ಜೇನು, ಎಳ್ಳು, ಶುಂಠಿ, ತೆಂಗಿನಕಾಯಿ, ಹಾಗಲಕಾಯಿ, ಮುಳ್ಳು ಇಡುತ್ತಾರೆ. ಜೊತೆಗೆ ಕುಡಗೋಲು, ಅಕ್ಕಿ ತುಂಬಿದ ಕಂಚಿನ ಬಟ್ಟಲಿನಲ್ಲಿ ಮಣ್ಣಿನ ಪುಟ್ಟ ದೀಪವನ್ನು ಹಚ್ಚಿಡುತ್ತಾರೆ. ಮೂರು ವೀಳ್ಯದೆಲೆ, ಮೂರು ಅಡಿಕೆಯನ್ನು ಇಡಲಾಗುವುದು. ನಂತರ ಬೇಯಿಸಿದ ಹುತ್ತರಿ ಗೆಣಸು, ಜೇನು, ಬೆಲ್ಲ, ಇನ್ನಿತರ ತಿನಿಸುಗಳನ್ನು ಮನೆಮಂದಿ ಫಲಾಹಾರ ಮಾಡಿ, ಸಿದ್ದ ಪಡಿಸಿದ ಗುತ್ತಿಯನ್ನು ಕುಟುಂಬದ ಹಿರಿಯರು ಹೊತ್ತು, ಕದಿರು ತೆಗೆಯುವ ಕುಡುಗೋಲನ್ನು ಹಿಡಿದು ಗದ್ದೆಯ ಕಡೆಗೆ ನಡೆಯುತ್ತಾರೆ. ಆಗ ಮನೆಯ ಹೆಣ್ಣು ಮಗಳೊಬ್ಬಳು ಕಂಚಿನ ಬಟ್ಟಲಿನಲ್ಲಿ ಅಕ್ಕಿ ಆರತಿ ಹಿಡಿದು ಭತ್ತದ ಗದ್ದೆಗೆ ಹೋಗುತ್ತಾರೆ. ಈ ಸಮಯದಲ್ಲಿ ಕೆಲವರು ಸಾಂಪ್ರದಾಯಿಕ ಉಡುಪು ತೊಟ್ಟು, ದುಡಿ ಬಾರಿಸುತ್ತಾ, ಹಾಡುತ್ತಾ ಗದ್ದೆಗೆ ತೆರಳುವರು. ಕದಿರು ತೆಗೆಯುವ ಗದ್ದೆಯನ್ನು ಮೊದಲೇ ಸಿಂಗರಿಸಿರುತ್ತಾರೆ. ಹಾಲು, ಜೇನುಗಳನ್ನು ಕದಿರಿನ ಬುಡಕ್ಕೆ ಸುರಿದು, ಕಟ್ಟಿರುವ ನೆರೆಯನ್ನು ಕದಿರಿನ ಬುಡಕ್ಕೆ ಕಟ್ಟುತ್ತಾರೆ.
ಸಾಂಪ್ರದಾಯಿಕವಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸುತ್ತಾರೆ. ದೇವರನ್ನು ಪ್ರಾರ್ಥಿಸಿ, ಬೆಸಸಂಖ್ಯೆಯಲ್ಲಿ ಕದಿರನ್ನು ಕೊಯ್ದು, ಗುತ್ತಿಯಲ್ಲಿ ಇಡಲಾಗುವುದು. ಪಟಾಕಿಗಳನ್ನು ಸಿಡಿಸಿ, ಪೊಲಿ ಪೊಲಿ ದೇವಾ ಎಂದು ಸಂಭ್ರಮದಿAದ ಕೂಗುತ್ತಾರೆ. ಎಲ್ಲರೂ ಸ್ವಲ್ಪ-ಸ್ವಲ್ಪ ಹೊಸ ಕದಿರನ್ನು ಹಿಡಿದು ಕುಕ್ಕೆಯನ್ನು ಹೊತ್ತು ಭತ್ತದ ಕಣಕ್ಕೆ ಹೋಗಿ ಭತ್ತದ ಕದಿರನ್ನು ಇಟ್ಟು ನಂತರ ಪೊಲಿ...ಪೊಲಿ ದೇವಾ ಪೊಲಿಯೇ ಬಾ ಎಂದು ಕರೆಯುತ್ತಾ ಕದಿರನ್ನು ಮನೆಗೆ ತರುತ್ತಾರೆ. ಮನೆಯ ಹೆಂಗಸರು ಕದಿರು ಕುಯ್ದವರ ಕಾಲು ತೊಳೆದು, ಕುಡಿಯಲು ಹಾಲು ಕೊಟ್ಟು, ಧಾನ್ಯ ಲಕ್ಷಿö್ಮಯನ್ನು ಮನೆ ತುಂಬಿಸಿಕೊಳ್ಳುತ್ತಾರೆ. ನೆಲ್ಲಕ್ಕಿ ನಡುಬಾಡೆಗೆ ಬಂದು ಚಾಪೆಯ ಮೇಲೆ ಕಟ್ಟಿ ಇಟ್ಟಿದ್ದ ನೆರೆಗೆ ಹೊಸ ಕದಿರನ್ನು ತುಂಬುತ್ತಾರೆ. ಕಣದಲ್ಲಿ ನೆಟ್ಟಿದ್ದ ಬೇಟಿ ಕಂಬಕ್ಕೆ, ಮನೆಯ ಬಾಗಿಲು, ಪೆಟ್ಟಿಗೆ, ಪಾಯಸದ ಮಡಕೆ, ಹುತ್ತರಿ ಗೆಣಸು ಸಾರು ಮಾಡಿದ ಪಾತ್ರೆ, ಮಂಚ, ವಾಹನಗಳು ಹೀಗೆ ಎಲ್ಲಾ ಮುಖ್ಯ ವಸ್ತುಗಳಿಗೆ ಕದಿರು ಕಟ್ಟುತ್ತಾರೆ. ನಂತರ ಹೊಸ ಅಕ್ಕಿ ಪಾಯಸ, ಶುಂಠಿ ಚಟ್ನಿ, ಹುತ್ತರಿ ಗೆಣಸು, ಕೆಸುವಿನ ಗೆಡ್ಡೆಯ ಸಾರು, ಅನ್ನ ಮುಂತಾದ ವ್ಯಂಜನಗಳಿAದ ಮನೆಯ ಸದಸ್ಯರು ಒಟ್ಟಿಗೆ ಕುಳಿತು ಹುತ್ತರಿ ಭೋಜನವನ್ನು ಮಾಡುತ್ತಾರೆ. ಮನೆಯಲ್ಲಿ ಖಾಯಂ ಆಳುಗಳಿದ್ದರೆ ಆ ದಿನ ಪಟಾಕಿ, ಹುತ್ತರಿ ಗೆಣಸು, ಅಕ್ಕಿ, ತೆಂಗಿನಕಾಯಿ, ತಂಬಿಟ್ಟು ಪುಡಿ ಹೀಗೆ ಹಬ್ಬಕ್ಕೆ ಬೇಕಾದ ಪದಾರ್ಥಗಳನ್ನು ಒಡೆಯರ ಮನೆಯಿಂದ ಪಡೆದುಕೊಂಡು ತಮ್ಮ ಮನೆಯಲ್ಲಿ ಹಬ್ಬ ಆಚರಿಸುತ್ತಾರೆ. ಒಡೆಯರ ಮನೆಯಲ್ಲಿ ಕುಟುಂಬದೊAದಿಗೆ ಬಂದು ಹಬ್ಬದೂಟ ಮಾಡುತ್ತಾರೆ.
ಮರುದಿನ ಊರಿನ ಮಂದಿಯೆಲ್ಲಾ ಕೋಲು ಮಂದುಗಳಲ್ಲಿ ಸೇರಿ, ಕೋಲಾಟ, ಉಮ್ಮತ್ತಾಟ್ ಹೀಗೆ ಸಾಂಪ್ರದಾಯಿಕ ಹಾಡು ನೃತ್ಯಗಳನ್ನು ಮಾಡಿ ಮನೆಯಿಂದ ತಂದಿದ್ದ ತಿನಿಸುಗಳನ್ನು ಹಂಚಿಕೊAಡು ತಿಂದು ಸಂಭ್ರಮ ಪಡುತ್ತಾರೆ.
-ರೇಣುಕಾ ಮುಕ್ಕಾಟಿ.
ಗೋಣಿಕೊಪ್ಪ. ಮೊ: ೯೪೮೧೪೩೯೭೨೯