ಪೊನ್ನಂಪೇಟೆ, ನ. ೨೯: ಪೊನ್ನಂಪೇಟೆ ತಾಲೂಕಿನ ಬಾಳಲೆ ಗ್ರಾಮದಲ್ಲಿ ವಾಹನ ಮಾಲೀಕರು, ಚಾಲಕರು ಹಾಗೂ ಆಟೋ ಮಾಲೀಕರ ಸಂಘವನ್ನು ನೂತನವಾಗಿ ಅಸ್ತಿತ್ವಕ್ಕೆ ತರಲಾಗಿದ್ದು, ಗಣ್ಯರು ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾಜಿ ವಿಧಾನ ಸಭಾಧ್ಯಕ್ಷರಾದ ಕೆ.ಜಿ. ಬೋಪಯ್ಯ ಮಾತನಾಡಿ, ಯಾವುದೇ ವೃತ್ತಿ ಮಾಡುವುದಾದರೂ ವೃತ್ತಿಯ ಬಗ್ಗೆ ಹೆಮ್ಮೆ, ದಕ್ಷತೆ, ಪ್ರಾಮಾಣಿಕತೆ ಹೊಂದಿರಬೇಕು. ಆಟೋ ಚಾಲಕರು ಹಾಗೂ ಮಾಲೀಕರಿಗೆ ಯಾವುದೇ ರೀತಿಯ ತೊಂದರೆಯಾದರೆ ಸ್ಪಂದಿಸಲು ಸಂಘಟನೆಗಳ ಅವಶ್ಯಕತೆ ಇದೆ. ಕೇಂದ್ರ ಸರ್ಕಾರ ಕಾರ್ಮಿಕರಿಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಸಂಸ್ಥೆಗಳು ಕಾರ್ಮಿಕರ ನೋಂದಾವಣೆ ಮಾಡಿಕೊಂಡು ಸರಕಾರದಿಂದ ದೊರೆಯುವ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ, ಚಾಲಕರು ಸಮಯ ಪ್ರಜ್ಞೆ ಹೊಂದಿರಬೇಕು. ತುರ್ತು ಸಂದರ್ಭದಲ್ಲಿ ಗ್ರಾಹಕರು ಕರೆ ಮಾಡಿದಾಗ ತಲುಪಲು ಸಾಧ್ಯವಿಲ್ಲದಿದ್ದಲ್ಲಿ ನೇರವಾಗಿ ವಿಚಾರ ತಿಳಿಸಬೇಕು. ಪ್ರತಿಯೊಬ್ಬ ವಾಹನ ಚಾಲಕರು ದಕ್ಷತೆ ಹಾಗೂ ಪ್ರಾಮಾಣಿಕತೆಯನ್ನು ಮೈಗೂಡಿಸಿ ಕೊಂಡಿರಬೇಕು. ವಾಹನ ಚಾಲಕರು ಗ್ರಾಹಕರೊಂದಿಗೆ ಸ್ನೇಹ ಸಂಬAಧವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಾಳೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ಬಾಳೆಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮುಕ್ಕಾಟೀರ ಜಾನಕಿ ಕಾವೇರಪ್ಪ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ನೆಲ್ಲಿರ ಚಲನ್, ಬಾಳೆಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪೋಡಮಾಡ ಬಿ. ಸುಕೇಶ್ ಭೀಮಯ್ಯ, ಆದೇಂಗಡ ಎಂ. ವಿನು ಉತ್ತಪ್ಪ, ಚಕ್ಕೇರ ಸೂರ್ಯ ಅಯ್ಯಪ್ಪ, ಕಾಟಿಮಾಡ ಶರೀನ್ ಮುತ್ತಣ್ಣ, ಹಾಗೂ ಆದೇಂಗಡ ವಿನು ಚಂಗಪ್ಪ ಪಾಲ್ಗೊಂಡಿದ್ದರು.
ವಾಹನ ಮಾಲೀಕರು ಹಾಗೂ ಚಾಲಕರ ಸಂಘದ ರಾಜ್ಯಧ್ಯಕ್ಷ ಜಿ. ನಾರಾಯಣ ಸ್ವಾಮಿ ಅವರ ನಿರ್ದೇಶನದಂತೆ ಸಂಘದ ವತಿಯಿಂದ ಗಣ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಾಳೆಲೆ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಗಿರೀಶ್, ಗೌರವಾಧ್ಯಕ್ಷ ಸತೀಶ್, ಉಪಾಧ್ಯಕ್ಷ ಇಲಿಯಾಸ್, ಪ್ರಧಾನ ಕಾರ್ಯದರ್ಶಿ ವಿನಯ್, ಖಜಾಂಚಿ ಚಂದು, ಸಂಘದ ಪದಾಧಿಕಾರಿಗಳು, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ಬಾಳಲೆ ಎಪಿಸಿಎಂಎಸ್ ಅಧ್ಯಕ್ಷ ಅರಮಣಮಾಡ ಸಿ.ಸುಗುಣ ಗಣಪತಿ, ಬಾಳಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೊಕ್ಕೆಂಗಡ ಸ್ಮಿತಾ, ಪೋರಂಗಡ ಪವನ್ ಚಿಟ್ಟಿಯಪ್ಪ, ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಹಾಗೂ ಗ್ರಾಮಸ್ಥರು, ಸಾರ್ವಜನಿಕರು ಪಾಲ್ಗೊಂಡಿದ್ದರು.