ಕಣಿವೆ, ನ. ೨೪: ಗ್ರಾಮೀಣ ಪ್ರದೇಶಗಳಲ್ಲಿ ರೈತರು ಹೆಚ್ಚಾಗಿ ಅವಲಂಬಿಸಿರುವ ಅಲ್ಪಾವಧಿಯ ಲಾಭದ ಬೆಳೆ ಜೋಳದ ಫಸಲಿಗೆ ಮಾರುಕಟ್ಟೆಯಲ್ಲಿ ದರ ಕುಸಿತ ಕಂಡಿದೆ. ಇದರಿಂದಾಗಿ ಜೋಳ ಬೆಳೆಯುವ ರೈತರು ನಷ್ಟದ ಭೀತಿಯಲ್ಲಿದ್ದಾರೆ. ಒಂದು ಕ್ವಿಂಟಾಲ್ ಒಣಗಿದ ಜೋಳಕ್ಕೆ ಮಾರುಕಟ್ಟೆಯಲ್ಲಿ ೧೭೦೦ ರೂ ಇದ್ದರೆ, ಅದೇ ಒಣಗದ ( ಹಸಿ ) ಜೋಳಕ್ಕೆ ೧೩೦೦ ರಿಂದ ೧೪೦೦ ರೂ ಇದೆ. ಕಳೆದ ವರ್ಷ ಇದೇ ಜೋಳಕ್ಕೆ ಕ್ವಿಂಟಾಲ್ ಗೆ ೨೨೦೦ ರೂ ಇತ್ತು. ಈ ವರ್ಷಕ್ಕೆ ಹೋಲಿಸಿದರೆ ಬರೋಬ್ಬರಿ ೫೦೦ ರೂ ಗಳಿಂದ ೬೦೦ ರೂಗಳ ವ್ಯತ್ಯಾಸ ಕಂಡುಬರುತ್ತಿದೆ ಎಂದು ರೈತಾಪಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಸಹಕಾರ ಸಂಘಗಳಲ್ಲಿ ಹಾಗೂ ಕೈ ಸಾಲ ಮಾಡಿ, ಜೋಳಕ್ಕೆ ಬಂಡವಾಳ ಹೂಡಿದರೆ ಇದೀಗ ಮಾರುಕಟ್ಟೆಯಲ್ಲಿ ಇರುವ ದರ ಏನೇನಕ್ಕೂ ಸಾಲುತ್ತಿಲ್ಲ ಎಂದು ಚಿಕ್ಕಹೊಸೂರು ರೈತ ಮಂಜುನಾಥ್ ಹಾಗೂ ಸದಾಶಿವ ನೊಂದು ನುಡಿದರು.

ಒಂದು ಎಕರೆ ಭೂಮಿಯಲ್ಲಿ ಜೋಳ ಬೆಳೆದರೆ ೩೦ರಿಂದ ೩೫ ಚೀಲ ಜೋಳದ ಫಸಲು ಸಿಗುತ್ತದೆ. ಈ ಜೋಳವನ್ನು ಕಟಾವು ಮಾಡಿದರೆ ಖರ್ಚು ತೆಗೆದು ೧೦ ರಿಂದ ೧೫ ಸಾವಿರ ಸಿಗಬೇಕಿತ್ತು. ಆದರೆ, ಈ ಬಾರಿ ಜೋಳಕ್ಕೆ ಕಾಡಿದ ಮಾರಕ ಶಿಲೀಂದ್ರದಿAದಾಗಿ ಇಳುವರಿಯ ಮೇಲೆ ಮಾರಕವಾದ ಪರಿಣಾಮ ಬೀರಿತು. ಹಾಗಾಗಿ ಇಳುವರಿ ಪೂರ್ಣ ಪ್ರಮಾಣದಲ್ಲಿ ಕುಸಿತ ಕಂಡಿತು. ಇತ್ತ ಬೆಲೆಯೂ ಕುಸಿತ ವಾಗಿದೆ ಎಂದು ಮಾದಾಪಟ್ಟಣದ ಯುವ ರೈತರಾದ ಲೋಹಿತ್, ಶಿವಣ್ಣ, ಮಂಜು, ಅವಿನಾಶ್ ಮೊದಲಾದವರು ಅಳಲು ತೋಡಿಕೊಂಡಿದ್ದಾರೆ.

ನೆರೆಯ ತಮಿಳುನಾಡು ಹಾಗು ಬಿಹಾರದಲ್ಲಿ ಈ ಬಾರಿ ಜೋಳದ ಸಂಗ್ರಹ ಹೆಚ್ಚಾದ ಹಿನ್ನೆಲೆಯಲ್ಲಿ ಅಷ್ಟೂ ಪ್ರಮಾಣದ ಜೋಳದ ಫಸಲು ಮಾರುಕಟ್ಟೆಗೆ ಬರುತ್ತಿರುವುದರಿಂದ ಕೊಡಗಿನ ಕುಶಾಲನಗರ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ ಹಳ್ಳಿಗಾಡು ರೈತರ ಸಣ್ಣ ಪುಟ್ಟ ಖರ್ಚುಗಳ ಪ್ರಮುಖ ಆದಾಯದ ಮೂಲವಾಗಿರುವ ಈ ಜೋಳವೂ ಕೈಕೊಟ್ಟರೆ ರೈತರ ಸ್ಥಿತಿ ಹರೋ ಹರ ಎಂದು ತೊರೆನೂರು ಕೃಷಿಕ ಟಿ.ಎಲ್. ಮಹೇಶ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಜೋಳ ಬೆಳೆಯಲು ಖರ್ಚು

ಸಾಮಾನ್ಯವಾಗಿ ಒಂದು ಎಕರೆ ಭೂಮಿಯಲ್ಲಿ ಜೋಳದ ಫಸಲು ತೆಗೆಯಲು ೫೫ ಸಾವಿರ ತಗಲುತ್ತದೆ. ಒಂದು ಎಕರೆ ಭೂಮಿ ಭೋಗ್ಯಕ್ಕೆ ಪಡೆದರೆ ಭೂಮಿಯ ಮಾಲೀಕನಿಗೆ ೧೦ ಸಾವಿರ, ಉಳುಮೆಗೆ ಒಟ್ಟು ೧೨ ಸಾವಿರ, ಬಿತ್ತನೆ ಬೀಜಕ್ಕೆ ೫ ಸಾವಿರ, ರಸಗೊಬ್ಬರ ಬಿತ್ತನೆಗೆ ಮತ್ತು ಬಿತ್ತನೆಯ ೨೦ ದಿನಗಳ ಬಳಿಕ ಬೆಳವಣಿಗೆಗೆ ಸೇರಿ ಆರು ಚೀಲ ಗೊಬ್ಬರಕ್ಕೆ ೧೨ ಸಾವಿರ, ಕೀಟಬಾಧೆ ನಿಯಂತ್ರಣ ಕ್ಕೆ ಔಷಧಿ ಸಿಂಪಡಿಸಲು ೪ ಸಾವಿರ, ನಂತರ ಜೋಳದ ಕಾಳು ಫಲಭರಿತಗೊಳ್ಳಲು ಯೂರಿಯಾ ರಸ ಗೊಬ್ಬರ ಅಳವಡಿಸಲು ೨೫೦೦, ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಲು ಕೂಲಿ ಕಾರ್ಮಿಕರ ಕೂಲಿ ಸೇರಿ ೧೫ ಸಾವಿರ ಹೀಗೆ ಒಟ್ಟು ಕನಿಷ್ಟ ೫೦ ರಿಂದ ೫೫ ಸಾವಿರ ಖರ್ಚು ತಗಲುತ್ತದೆ.

ಇಳುವರಿ

ಒಂದು ಎಕರೆ ಭೂಮಿಯಲ್ಲಿ ಅಚ್ಚುಕಟ್ಟಾಗಿ ಕೃಷಿ ಮಾಡಿದರೆ ೩೫ ರಿಂದ ೪೦ ಚೀಲ ಇಳುವರಿ ಬರುತ್ತದೆ. ಕ್ವಿಂಟಾಲ್ ಗೆ ಪ್ರಸಕ್ತ ಮಾರುಕಟ್ಟೆ ದರ ೧೩೫೦ ರೂ ಅಂದರೂನು ೫೨ ರಿಂದ ೫೫ ಸಾವಿರ ರೂ. ಖರ್ಚು ತಗಲುತ್ತದೆ. ಹೀಗಾಗಿ ರೈತರಿಗೆ ಆದಾಯಕ್ಕಿಂತ ಖರ್ಚೇ ಜಾಸ್ತಿ ತಗಲುವ ಕಾರಣ ಬೆಲೆ ಕುಸಿತದ ಭೀತಿ ಚಿಂತೆಗೀಡು ಮಾಡಿದೆ.

- ಕೆ.ಎಸ್. ಮೂರ್ತಿ