ಮಡಿಕೇರಿ, ನ. ೨೪: ಸರಕಾರಿ ಶಾಲೆಗಳನ್ನು ಮುಚ್ಚಬಾರದೆಂದು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ವತಿಯಿಂದ ಪ್ರತಿಭಟನೆ ನಡೆಯಿತು.

ವಿದ್ಯಾರ್ಥಿಗಳು, ಸಂಘಟನೆ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೇಡಿಕೆ ಮುಂದಿಟ್ಟು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರಾಜ್ಯ ಸರಕಾರ ೭೦೦ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಆರಂಭಿಸಲು ಮುಂದಾಗಿದೆ. ಮ್ಯಾಗ್ನೆಟ್ ಯೋಜನೆಯಡಿ ಈ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆ ೩ ರಿಂದ ೫ ಕಿ.ಮೀ. ವ್ಯಾಪ್ತಿಯ ಶಾಲೆಗಳು ವಿಲೀನವಾಗುತ್ತವೆ. ಈಗಾಗಲೇ ಚನ್ನಪಟ್ಟಣ ತಾಲೂಕಿನ ಹೊಂಗೂರಿನ ಸರಕಾರಿ ಶಾಲೆಯನ್ನು ಮ್ಯಾಗ್ನೆಟ್ ಶಾಲೆ ಎಂದು ಗುರುತಿಸಿ ಈ ವ್ಯಾಪ್ತಿಯ ಹಲವು ಶಾಲೆಯನ್ನು ವಿಲೀನಗೊಳಿಸುವ ಆದೇಶವಾಗಿದೆ. ಈ ರೀತಿ ಪ್ರಕ್ರಿಯೆಗಳಿಂದ ಪದವಿ ಕಾಲೇಜು ಸೇರಿ ೪೦ ಸಾವಿರ ಶಾಲೆಗಳು ಮುಚ್ಚುವ ಸಾಧ್ಯತೆ ಇದೆ. ಸರಕಾರಿ ಶಾಲೆಯಲ್ಲಿ ದಾಖಲೆ ಕುಸಿಯುತ್ತಿದ್ದು, ಗುಣಮಟ್ಟ ಹೆಚ್ಚಿಸಬೇಕಾದ ಸರಕಾರ ಈ ರೀತಿಯ ನೀತಿ ರೂಪಿಸಿರುವುದು ಸರಿಯಲ್ಲ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.

ಸರಕಾರಿ ಶಾಲೆಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಅಗತ್ಯ ಶಿಕ್ಷಕರನ್ನು ನೇಮಿಸಬೇಕು. ಶಾಲಾ ನಿರ್ವಹಣೆಯನ್ನು ಹೊರಗುತ್ತಿಗೆಗೆ ನೀಡಬಾರದೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಹೋರಾಟ ಸಮಿತಿ ಸದಸ್ಯ ರಾಜಶೇಖರ್, ಸಂಘಟನೆಯ ರಾಜ್ಯ ಕಾರ್ಯದರ್ಶಿ ಸುಭಾಷ್ ಬೆಟ್ಟದಕುಪ್ಪ, ಜಿಲ್ಲಾ ಸಹಸಂಚಾಲಕಿ ಬಿ.ಆರ್. ಸ್ವಾತಿ, ಅಂಜಲಿ ಸೇರಿದಂತೆ ಇನ್ನಿತರರು ಹಾಜರಿದ್ದರು.