ಮಡಿಕೇರಿ, ನ. ೨೪: ನಗರದ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ತಾ. ೨೬ ರಂದು (ನಾಳೆ) ನಡೆಯಲಿದೆ ಎಂದು ಸಮಿತಿ ತಿಳಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್, ದೇವಾಲಯದ ಉತ್ಸವ ಸಮಿತಿ ವತಿಯಿಂದ ಷಷ್ಠಿ ಅಂಗವಾಗಿ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ಬೆಳಿಗ್ಗೆ ಸುಬ್ರಹ್ಮಣ್ಯ ದೇವರಿಗೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಅಪ್ಪಂ ಸೇವೆ, ಪಂಚಕಜ್ಜಾಯ ಸೇವೆ, ಹಣ್ಣು ಕಾಯಿ, ಪುಷ್ಪಾರ್ಚನೆ, ಮಂಗಳಾರತಿ, ಮಹಾಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿವೆ. ನಾಗ ದೇವರಿಗೆ ವಿಶೇಷ ಪೂಜೆಗೆ ಅವಕಾಶವಿದ್ದು, ಭಕ್ತಾದಿಗಳು ಪ್ಯಾಕೇಟ್ ಹಾಲು ತರಬಾರದು. ಬದಲಿಗೆ ದೇವಾಲಯದಲ್ಲ್ಲಿ ಶುದ್ಧ ಹಸುವಿನ ಹಾಲನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ ೯ ಗಂಟೆಗೆ ಮುತ್ತಪ್ಪ ದೇವರ ಮಲೆ ಇಳಿಸುವುದು, ೯.೩೦ಕ್ಕೆ ಕುಟ್ಟಿಚಾತನ್ ದೇವರ ವೆಳ್ಳಾಟಂ, ೧೦ಕ್ಕೆ ಮುತ್ತಪ್ಪ ವೆಳ್ಳಾಟಂ, ೧೦.೩೦ಕ್ಕೆ ಗುಳಿಗ ವೆಳ್ಳಾಟಂ, ೧೧ಕ್ಕೆ ಪೋದಿ ದೇವರ ವೆಳ್ಳಾಟಂ, ೧೨ ಗಂಟೆಗೆ ಸುಬ್ರಹ್ಮಣ್ಯ ದೇವರ ಶ್ರೀಭೂತ ಬಲಿ, ೧೨.೩೦ಕ್ಕೆ ಮಹಾಮಂಗಳಾರತಿ ನಡೆದು ಅನ್ನಸಂತರ್ಪಣೆ. ಸಂಜೆ ೬ ಗಂಟೆಗೆ ಭಜನಾ ಕಾರ್ಯಕ್ರಮ, ೭ಕ್ಕೆ ರಂಗ ಪೂಜೆ, ೮ಕ್ಕೆ ಮಹಾಪೂಜೆಯ ನಂತರ ಪ್ರಸಾದ ವಿತರಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ದೇವಾಲಯ ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರ ರೈ, ಸುಬ್ರಹ್ಮಣ್ಯ ಷಷ್ಠಿ ಉತ್ಸವ ಸಮಿತಿ ಅಧ್ಯಕ್ಷ ಮನು ಮಂಜುನಾಥ್, ದೇವಾಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ, ಕಾರ್ಯದರ್ಶಿ ಆರ್. ಗಿರೀಶ್, ಗೌರವ ಸಲಹೆಗಾರ ಟಿ.ಆರ್. ವಾಸುದೇವ್ ಹಾಜರಿದ್ದರು.