ರಾಯಚೂರು, ನ. ೨೪: ರಸ್ತೆ ಕಾಮಗಾರಿ ಆರಂಭಿಸಲು ವಿಳಂಬ ಮಾಡಿದ ಎಂಜಿನಿಯರ್ ಒಬ್ಬರಿಗೆ ಅಮಾನತ್ತು ಅಷ್ಟೇ ಅಲ್ಲದೆ ಒದೆಯುವ ಎಚ್ಚರಿಕೆಯನ್ನು ಸಣ್ಣ ನೀರಾವರಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ನೀಡಿದ ಘಟನೆ ಭಾನುವಾರ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರಿನ ಸಿರವಾರ ತಾಲೂಕಿನ ಮರಾಟ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಕೆಲವು ಜನಪ್ರತಿನಿಧಿಗಳು ಸಿರವಾರ ರಸ್ತೆಯ ಕಾಮಗಾರಿ ಆರಂಭ, ಶಾಲಾ ಕಟ್ಟಡ ನಿರ್ಮಾಣ ಕಾರ್ಯ ಬಾಕಿ ಇದ್ದು ಅಧಿಕಾರಿಗಳು ವಿಳಂಬ ಮಾಡಿರುವ ಬಗ್ಗೆ ದೂರು ನೀಡಿದ್ದಾರೆ. ಇದರಿಂದ ಅಧಿಕಾರಿಗಳ ವಿರುದ್ದ ಸಚಿವರು ಗರಂ ಆಗಿದ್ದಾರೆ. ಸ್ಥಳದಲ್ಲಿದ್ದ ಕೆಆರ್‌ಐಡಿಎಲ್ (ಏಚಿಡಿಟಿಚಿಣಚಿಞಚಿ ಖoಚಿಜ Iಟಿಜಿಡಿಚಿsಣಡಿuಛಿಣuಡಿe ಜeveಟoಠಿmeಟಿಣ ಛಿoಡಿಠಿoಡಿಚಿಣioಟಿ) ನ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ಬಿ. ಹನುಮಂತಪ್ಪ ಅವರನ್ನು ಕಾಮಗಾರಿ ವಿಳಂಬಕ್ಕೆ ಕಾರಣ ಕೇಳಿದ್ದಾರೆ. ಆದರೆ ಅಧಿಕಾರಿ ಸಬೂಬು ಹೇಳುತ್ತಿದ್ದಂತೆ ಮತ್ತೆ ಆಕ್ರೋಷಿತರಾದ ಸಚಿವರು ಕಾಮಗಾರಿ ಪೂಜೆ ಮಾಡಿ ಎಷ್ಟು ದಿನವಾಯ್ತು ರಸ್ತೆ ಕಾಮಗಾರಿ ಆರಂಭಿಸದೆ ಕತ್ತೆ ಕಾಯುತ್ತಿದ್ದಿರಾ? ನಿತ್ಯ ಜನರಿಗೆ ತೊಂದರೆಯಾಗುತ್ತಿದೆ. ಜನರಿಂದ ಸರ್ಕಾರಕ್ಕೆ ಬಯ್ಯಿಸುವ ಕೆಲಸ ಮಾಡುತ್ತಿದ್ದೀರಾ? ಕೂಡಲೇ ಆರಂಭಿಸದಿದ್ದರೆ ಅಮಾನತ್ತು ಮಾತ್ರವಲ್ಲ, ಕಂಬಕ್ಕೆ ಕಟ್ಟಿ ಹಾಕಿ ಒದೆಯುತ್ತೇನೆ ಎಂದಿದ್ದಾರೆ.
ಸಿರವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು ೧.೫ ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಗಳಿಗೆ ಸರ್ಕಾರ ಅನುದಾನ ಒದಗಿಸಿದ್ದು ಇನ್ನೂ ಪೂರ್ಣಗೊಂಡಿಲ್ಲ. ಗುದ್ದಲಿ ಪೂಜೆ ಮಾಡಿ ೬ ತಿಂಗಳಾಗಿದ್ದರೂ ಕಾಮಗಾರಿಯು ಇನ್ನೂ ಆರಂಬಿಕ ಹಂತದಲ್ಲೇ ಇರುವುದು ಸಚಿವರ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ಸಾಮಾನ್ಯವಾಗಿ ಎಂದೂ ತಾಳ್ಮೆ ಕಳೆದುಕೊಳ್ಳದಿರುವ ಹಿರಿಯ ಸಚಿವ ಭೋಸರಾಜು ಅವರು ಇಂದು ನಾಲಿಗೆ ಹರಿಬಿಟ್ಟದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೂ ಕಾರಣ ಆಯಿತು. ಈ ವೇಳೆ ಮಾನ್ವಿ ಶಾಸಕ ಹಂಪಯ್ಯ ನಾಯಕ್, ಸಂಸದ ಕುಮಾರ್ ನಾಯಕ್ ಜೊತೆಗಿದ್ದರು.
-(ಕೋವರ್ ಕೊಲ್ಲಿ ಇಂದ್ರೇಶ್)