ಸಿದ್ದಾಪುರ, ನ. ೨೪: ಹೊಸ್ಕೇರಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು.
ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಯವರು ಸಾರ್ವಜನಿಕ ಸೇವೆಯನ್ನು ಉತ್ತಮ ರೀತಿಯಲ್ಲಿ ಮಾಡಬೇಕೆಂದು ಕರೆ ನೀಡಿದರು. ಹೊಸ್ಕೇರಿ ಗ್ರಾಮ ಪಂಚಾಯಿತಿಯ ಕಟ್ಟಡವನ್ನು ವಿವಿಧ ಅನುದಾನಗಳಲ್ಲಿ ನಿರ್ಮಾಣ ಮಾಡಲಾಗಿದೆ. ಈ ಹೊಸ ಕಟ್ಟಡದಲ್ಲಿ ಹೊಸ ಹುಮ್ಮಸ್ಸಿನಿಂದ ಗ್ರಾಮಸ್ಥರ ಕೆಲಸಗಳನ್ನು ಸಕಾಲಕ್ಕೆ ಮಾಡಿಕೊಡುವಂತೆ ಸಲಹೆ ನೀಡಿದರು. ಈ ಕಟ್ಟಡವು ರಾಜಕೀಯ ರಹಿತವಾಗಿ ನಿರ್ಮಾಣ ಮಾಡಲು ಸದಸ್ಯರುಗಳು ಸಹಕಾರ ನೀಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೇವಲ ೨೦ ತಿಂಗಳಲ್ಲಿ ರೂ.೮೦ ಲಕ್ಷ ವೆಚ್ಚದಲ್ಲಿ ಉತ್ತಮ ರೀತಿಯಲ್ಲಿ ನಿರ್ಮಾಣ ಮಾಡಿರುವ ಈ ಕಟ್ಟಡ ಸಾರ್ವಜನಿಕರಿಗೆ ಅನುಕೂಲವಾಗಿದೆ ಎಂದರು. ಗ್ರಾಮಸ್ಥರು ಕೂಡ ತಮ್ಮ ಅಹವಾಲುಗಳನ್ನು ನೇರವಾಗಿ ಬಂದು ಪಂಚಾಯಿತಿಗೆ ನೀಡಬೇಕೆಂದರು. ನೂತನ ಕಟ್ಟಡದಲ್ಲಿ ಇರುವ ಗ್ರಂಥಾಲಯದಲ್ಲಿ ದಿನಪತ್ರಿಕೆಗಳು ಹಾಗೂ ಉತ್ತಮ ಮಾಹಿತಿಯ ಪುಸ್ತಕಗಳನ್ನು ಇಟ್ಟು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಹಿತಿಗಳನ್ನು ನೀಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಡುವಂಡ್ರ ಕವಿತ ಬೆಳ್ಯಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಶೇಖರ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು, ಇನ್ನಿತರರು ಹಾಜರಿದ್ದರು.