ಪೊನ್ನಂಪೇಟೆ, ನ. ೨೪: ಮಹಿಳೆಯೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೊನ್ನಂಪೇಟೆ ತಾಲೂಕಿನ ತೂಚಮಕೇರಿ ಗ್ರಾಮದಲ್ಲಿ ನಡೆದಿದೆ. ಮೂಕಳಮಾಡ ಸುರೇಶ್ ಎಂಬವರ ಪತ್ನಿ ಸುಮಿತಾ (೪೮) ಎಂಬವರೇ ಆತ್ಮಹತ್ಯೆಗೆ ಶರಣಾದವರು.
ಕಳೆದ ಎರಡು ತಿಂಗಳ ಹಿಂದೆ ಸುಮಿತಾ ಅವರ ಮಗನಿಗೆ ವಾಹನ ಅಪಘಾತ ಸಂಭವಿಸಿ ಆಸ್ಪತ್ರೆಗೆ ಸೇರಿದ್ದು, ಮಗನ ಸ್ಥಿತಿ ಕಂಡು ಸುಮಿತಾ ಮಾನಸಿಕವಾಗಿ ಕುಂದಿದ್ದರು ಎನ್ನಲಾಗಿದೆ. ತಾ. ೨೩ರ ಬೆಳಗ್ಗಿನ ಜಾವ ಸುಮಾರು ೬ ಗಂಟೆ ಸಮಯದಲ್ಲಿ ಸುಮಿತಾ ಅವರು ಬೆಳಗಿನ ತಿಂಡಿಗೆ ಚಪಾತಿ ಹಿಟ್ಟು ಕಲೆಸಿದ್ದು, ಬಳಿಕ ಮನೆಯಲ್ಲಿ ಕಂಡು ಬರಲಿಲ್ಲ ಎನ್ನಲಾಗಿದೆ. ನಂತರ ಸುಮಿತಾ ಅವರ ಪತಿ ಸುರೇಶ್ ಅವರು ಪತ್ನಿ ಮನೆಯಲ್ಲಿ ಕಾಣದ ಹಿನ್ನೆಲೆಯಲ್ಲಿ ತಮ್ಮ ಮನೆಯ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಅಕ್ಕ ಪಕ್ಕದ ಮನೆಯವರಿಗೂ ವಿಷಯ ತಿಳಿಸಿ ಹುಡುಕಾಟ ನಡೆಸಿದಾಗ ಮೂಕಳೆರ ಅಪ್ಪಾಜಿ ಎಂಬವರ ಕೆರೆಯಲ್ಲಿ ಮೃತ ದೇಹ ತೇಲುತ್ತಿರುವುದು ಕಂಡು ಬಂದಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಶ್ರೀಮಂಗಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಗ್ರಾಮಸ್ಥರ ಸಹಾಯದಿಂದ ಕೆರೆಯಿಂದ ಮೃತ ದೇಹವನ್ನು ಹೊರ ತೆಗೆದು ಮಹಜರು ನಡೆಸಿ, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಲಾಯಿತು.
ಠಾಣಾಧಿಕಾರಿ ಎ.ಎಸ್.ರವೀಂದ್ರ, ಎ.ಎಸ್.ಐ ಸುಕುಮಾರ್, ಸಿಬ್ಬಂದಿಗಳಾದ ಎಂ.ಪಿ.ಮೇಘನಾ, ಎಸ್.ಎಸ್.ಅರುಣ್ ಹಾಗೂ ಧರಣೇಶ್ ಸ್ಥಳಕ್ಕೆ ಭೇಟಿ ನೀಡಿದ್ದರು. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.