ಕಣಿವೆ, ನ. ೨೩ : ಮೆಡಿಕಲ್ ಸರ್ವಿಸ್ ಸೆಂಟರ್ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿರುವ ಬಿಜಿಟಿ ಹೊಟೇಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ಕಾರ್ಯಾಗಾರ ನಡೆಯಿತು.

ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರಿಗಾಗಿ ಎರಡು ದಿನಗಳ ಅಧ್ಯಯನ ಶಿಬಿರವನ್ನು ಆಯೋಜಿಸಲಾಗಿತ್ತು. ಶಸ್ತç್ರಚಿಕಿತ್ಸಕರೂ ಹಾಗೂ ಕಾದಂಬರಿಗಾರ್ತಿ ಕೊಡಗಿನ ಡಾ. ಕಾವೇರಿ ನಂಬೀಸನ್ ಅವರು ಗ್ರಾಮೀಣ ವೈದ್ಯರ ಅನುಭವಗಳು ಎಂಬ ಧ್ಯೇಯದಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಿಹಾರ, ಉತ್ತರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಅವರು ದಶಕಗಳಿಂದ ಸಲ್ಲಿಸಿದ ಸೇವೆಯನ್ನು ಉಲ್ಲೇಖಿಸಿ, ಆರೋಗ್ಯ ಸೇವೆಗಳು ಸೀಮಿತವಾಗಿರುವ ಹಿಂದುಳಿದ ಗ್ರಾಮೀಣ ಸಮುದಾಯಗಳಿಗೆ ತಮ್ಮ ಜ್ಞಾನ ಮತ್ತು ಸಹಾನುಭೂತಿಯನ್ನು ಮೀಸಲಿಡಲು ಯುವ ವೈದ್ಯರಿಗೆ ಕರೆ ನೀಡಿದರು. ಕರ್ತವ್ಯದಲ್ಲಿ ಸವಾಲುಗಳಿದ್ದರೂ, ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವುದು ಆಳವಾದ ವೃತ್ತಿಪರತೆಯನ್ನು ಒದಗಿಸುತ್ತದೆ ಮತ್ತು ವೈದ್ಯಕೀಯ ಅಭ್ಯಾಸದ ನೈತಿಕ ಅಡಿಪಾಯವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.

ಮೆಡಿಕಲ್ ಸರ್ವಿಸ್ ಸೆಂಟರ್‌ನ ರಾಜ್ಯ ಅಧ್ಯಕ್ಷ ಡಾ. ಸುಧಾ ಕಾಮತ್, ರಾಜ್ಯ ಕಾರ್ಯದರ್ಶಿ ಡಾ. ವಸುದೇಂದ್ರ, ಡಾ. ಗಂಗಾಧರ್, ಡಾ. ರಾಜಶೇಖರ್, ಕುಶಾಲನಗರ ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಶಿವಕುಮಾರ್ ಮತ್ತು ಹಿರಿಯ ಎಂಎಸ್‌ಸಿ ಅಧ್ಯಾಪಕ ಸದಸ್ಯರು ಸೇರಿದಂತೆ ಗಣ್ಯ ವೈದ್ಯಕೀಯ ವೃತ್ತಿಪರರು ಭಾಗವಹಿಸಿದ್ದರು. ನಕಲಿ ಔಷಧಗಳು, ವೈದ್ಯಕೀಯ ವೃತ್ತಿಪರರಲ್ಲಿ ಮಾನಸಿಕ ಆರೋಗ್ಯ ಮತ್ತು ಜಾಗತಿಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳಂತಹ ವಿಷಯಗಳನ್ನು ಒಳಗೊಂಡ ಹಲವಾರು ಅಧಿವೇಶನಗಳು ಇದೇ ಸಂದರ್ಭ ನಡೆದವು. ಈ ಸಮಿತಿ ಚರ್ಚೆಗಳು ಯುವ ವೈದ್ಯರಿಗೆ ಹಿರಿಯ ಮಾರ್ಗದರ್ಶಕರೊಂದಿಗೆ ತೊಡಗಿಸಿಕೊಳ್ಳಲು ಮತ್ತು ಭಾರತದಲ್ಲಿ ಕ್ಷಿಣಿಸುತ್ತಿರುವ ಉತ್ತಮ ವೈದ್ಯಕೀಯ ವ್ಯವಸ್ಥೆಯ ಕುರಿತು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟವು. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ವೈದ್ಯಕೀಯ ವಿದ್ಯಾರ್ಥಿಗಳು, ಯುವ ವೈದ್ಯರು ಮತ್ತು ಆರೋಗ್ಯ ವೃತ್ತಿಪರರು ಭಾಗವಹಿಸಿದ್ದರು.