ಸಿದ್ದಾಪುರ, ನ. ೨೨: ಅಕಾಲಿಕ ಮಳೆಯಿಂದಾಗಿ ಜಿಲ್ಲೆಯ ಕಾಫಿ ಬೆಳೆಗಾರರು ಮತ್ತು ಭತ್ತ ಬೆಳೆದ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದೆರಡು ದಿನಗಳಿಂದ ರಾತ್ರಿ ಸಮಯದಲ್ಲಿ ಮಳೆ ಸುರಿಯುತ್ತಿದ್ದು, ರೈತರಿಗೆ ಸಮಸ್ಯೆ ಉಂಟಾಗಿದೆ.

ಅರೇಬಿಕಾ ಕಾಫಿಯನ್ನು ಕೊಯ್ಲು ಮಾಡಿ ಒಣ ಹಾಕಲಾಗಿದ್ದು, ಮಳೆಯಿಂದಾಗಿ ಕಾಫಿ ಒಣಗದೆ ಹಾನಿಯಾಗುವ ಸಂಭವ ಕಂಡು ಬಂದಿದೆ. ಒಂದೆಡೆ ವನ್ಯಪ್ರಾಣಿಗಳ ಹಾವಳಿ ಮತ್ತೊಂದೆಡೆ ಅಕಾಲಿಕ ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ ಎಂದು ಕರಡಿಗೋಡು ಗ್ರಾಮದ ಕೃಷಿಕ ಕುಕ್ಕುನೂರು ಮೋಹನ್ ತಿಳಿಸಿದ್ದಾರೆ.

ಮತ್ತೊಂದೆಡೆ ಗದ್ದೆಗಳಲ್ಲಿ ಕಟಾವಿಗೆ ಬಂದಿರುವ ಭತ್ತದ ಕೃಷಿಗಳು ಕೂಡ ಹಾನಿ ಆಗುವ ಸಂಭವ ಕಂಡುಬAದಿದ್ದು, ಈ ಬಾರಿಯ ಅಕಾಲಿಕ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಮೋಡಕವಿದ ವಾತಾವರಣದಿಂದಾಗಿ ಹಣ್ಣಾಗಿರುವ ಕಾಫಿ ಫಸಲುಗಳನ್ನು ಕೊಯ್ಲು ಮಾಡಲು ಕೃಷಿಕರು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಐಗೂರು

ಐಗೂರು ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಹೆಚ್ಚಿನ ಬೆಳೆಗಾರರು ತಮ್ಮ ತೋಟಗಳಲ್ಲಿ ಕಾಫಿ ಹಣ್ಣನ್ನು ಕುಯ್ಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಮಳೆ ಇದೇ ರೀತಿ ಮುಂದುವರಿದರೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಬೆಳೆಗಾರರಾದ ಬಾರನ ಪ್ರಮೋದ್, ಕೆ. ಪಿ. ಮುತ್ತಪ್ಪ, ಮತ್ತು ಅಯ್ಯಪ್ಪ ತಿಳಿಸಿದ್ದಾರೆ. ಚೆಟ್ಟಳ್ಳಿ

ಚೆಟ್ಟಳ್ಳಿ: ನಿನ್ನೆ ರಾತ್ರಿ ಚೆಟ್ಟಳ್ಳಿ ಸೇರಿದಂತೆ ಹಲವೆಡೆ ಸುರಿದ ದಿಢೀರ್ ಮಳೆಯಿಂದಾಗಿ ಕೊಯ್ಲು ಕಾರ್ಯದಲ್ಲಿ ತೊಡಗಿಸಿಕೊಂಡ ಅರೆಬಿಕಾ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಈಗಾಗಲೇ ಕುಯ್ದ ಅರೆಬಿಕಾ ಹಣ್ಣುಗಳು ಕಣದಲ್ಲಿ ಮಳೆಯಿಂದ ತೊಯ್ದು ಹೋಗಿವೆ. ವೀರಾಜಪೇಟೆ: ವೀರಾಜಪೇಟೆ ತಾಲೂಕು ವ್ಯಾಪ್ತಿಯ ಕೆಲವೆಡೆ ಹಾಗೂ ಕೆದಮುಳ್ಳೂರು ಭಾಗದಲ್ಲಿ ಶನಿವಾರ ಸಂಜೆ ಸುರಿದ ಧಾರಾಕಾರ ಮಳೆಗೆ ರೈತರು ಕಂಗಾಲಾಗಿದ್ದಾರೆ. ಒಣಗಲು ಹಾಕಿದ್ದ ಕಾಫಿ ಕೊಚ್ಚಿ ಹೋಗಿದೆ.

ಬಹುತೇಕ ಕಾಫಿ ತೋಟಗಳಲ್ಲಿ ಅರೆಬಿಕಾ ಕಾಫಿ ಹಣ್ಣಾಗಿವೆ. ಜೊತೆಗೆ ಕೊಯ್ಲು ಮಾಡಿದ ಕಾಫಿಯನ್ನು ಕೂಡ ಒಣಗಲು ಹಾಕಲಾಗಿದೆ. ಈ ಅವಧಿಯಲ್ಲಿ ಅಕಾಲಿಕ ಮಳೆ ಬಿದ್ದರೆ, ಹಣ್ಣಾಗಿರುವ ಕಾಫಿ ಮಣ್ಣುಪಾಲಾಗುವ ಸಾಧ್ಯತೆ ಹೆಚ್ಚು. ಕೊಯ್ಲು ಮಾಡಿದ ಕಾಫಿ ಒಣಗದೆ ಕೊಳೆತು ಗುಣಮಟ್ಟ ಕಳೆದುಕೊಳ್ಳುವ ಅಪಾಯವೂ ಇದೆ. ಇದರಿಂದ ನಷ್ಟ ಉಂಟಾಗುವ ಚಿಂತೆ ಬೆಳೆಗಾರರನ್ನು ಕಾಡ ತೊಡಗಿದೆ.

ಜಮೀನುಗಳಲ್ಲಿ ಭತ್ತದ ಕಾಳುಕಟ್ಟುವ ಸಮಯ ಇದಾಗಿದೆ. ಈಗ ಮಳೆ ಬೀಳುವುದರಿಂದ ಫಸಲು ಜೊಳ್ಳಾಗುವ ಸಾಧ್ಯತೆಯೂ ಇದೆ. ಕಟಾವಿಗೆ ಬಂದಿರುವ ಗದ್ದೆಗಳಲ್ಲಿ ಕೊಯ್ಲು ಮಾಡುವುದಕ್ಕೂ ತೊಡಕಾಗಿದೆ.