ಸಿದ್ದಾಪುರ, ನ. ೨೨: ಕರಡಿಗೋಡು ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ರೈತರ ಕೃಷಿ ಪಸಲು ನಾಶಗೊಂಡು ಅಪಾರ ನಷ್ಟ ಸಂಭವಿಸಿರುವ ಘಟನೆ ನಡೆದಿದೆ.
ಕರಡಿಗೋಡು ಗ್ರಾಮದ ನಿವಾಸಿ ಕಂಬೀರAಡ ನಂದ ಗಣಪತಿ ಎಂಬವರ ಕಾಫಿ ತೋಟಗಳಲ್ಲಿ ಕಾಡಾನೆಗಳು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೀಡು ಬಿಟ್ಟು ದಾಂಧಲೆ ನಡೆಸಿ ಫಸಲಿರುವ ೩೦ಕ್ಕೂ ಅಧಿಕ ಅಡಿಕೆ ಮರಗಳನ್ನು ಹಾಗೂ ನೂರಾರು ಕಾಫಿ ಗಿಡಗಳನ್ನು ಧ್ವಂಸಗೊಳಿಸಿವೆ.
ಮಿತಿಮೀರಿದ ಕಾಡಾನೆಗಳ ಹಾವಳಿಯಿಂದಾಗಿ ನೆಮ್ಮದಿ ಇಲ್ಲ ದಂತಾಗಿದೆ ಕೈಗೆ ಬಂದ ಫಸಲು ಬಾಯಿಗೆ ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಂದ ಗಣಪತಿ ಬೇಸರ ವ್ಯಕ್ತಪಡಿಸಿದರು. ರಾತ್ರಿ ಸಮಯದಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟದೊಳಗೆ ನುಗ್ಗಿ ದಾಂಧಲೆ ನಡೆಸಿ ಫಸಲಿರುವ ಕಾಫಿ ಗಿಡಗಳನ್ನು ತುಳಿದು ಹಾನಿಗೊಳಿಸುತ್ತಿದೆ. ಕಾಡುಕೋಣಗಳ ಉಪಟಳವೂ ತೀವ್ರವಾಗಿದ್ದು, ವನ್ಯಪ್ರಾಣಿಗಳ ಹಾವಳಿ ಯಿಂದಾಗಿ ಬೆಳೆದ ಬೆಳೆ ಸಿಗುತ್ತಿಲ್ಲ. ಕಾರ್ಮಿಕರು ಕೂಡ ತೋಟಕ್ಕೆ ಕೆಲಸಕ್ಕೆ ತೆರಳಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು.
ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಷ್ಟಕ್ಕೆ ಒಳಗಾದ ರೈತರಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.