ಸೋಮವಾರಪೇಟೆ, ನ. ೧೮: ಅಚ್ಚರಿಯ ವಿದ್ಯಮಾನದಲ್ಲಿ ಪ್ರಸಕ್ತ ಸಾಲಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಯಾವುದೇ ಬೆಳೆಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ವರದಿ ಸಲ್ಲಿಸಿದ್ದು, ಈ ಸಮೀಕ್ಷಾ ವರದಿಗೆ ಶಾಸಕ ಡಾ. ಮಂತರ್ ಗೌಡ ಆಕ್ಷೇಪ ವ್ಯಕ್ತಪಡಿಸಿ, ಅಧಿಕಾರಿಗಳ ವಿರುದ್ಧ ಗರಂ ಆದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ತ್ರೆöÊಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕರು, ಅಧಿಕಾರಿಗಳ ವರದಿ ಗಮನಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಭಾರೀ ಮಳೆ ಸುರಿದಿದೆ. ಅಕಾಲಿಕವಾಗಿ ಸುರಿದ ಮಳೆಯಿಂದ ಕಾಫಿ, ಕರಿಮೆಣಸು ಸೇರಿದಂತೆ ಇನ್ನಿತರ ಕೃಷಿ ಹಾನಿಯಾಗಿದೆ. ಸರ್ಕಾರದಿಂದ ಪರಿಹಾರ ಪಡೆಯಬೇಕಾದರೆ ಅಧಿಕಾರಿಗಳ ವರದಿ ಅಗತ್ಯವಾಗಿದೆ. ಆದರೆ ಅಧಿಕಾರಿಗಳು ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿ ನೀಡಿದ್ದಾರೆ. ಅಧಿಕಾರಿಗಳ ಲೋಪದಿಂದಾಗಿ ರೈತರಿಗೆ ಸಮಸ್ಯೆಯಾಗಿದೆ. ಮತ್ತೊಮ್ಮೆ ಸಮೀಕ್ಷೆ ನಡೆಸುವ ಕಾರ್ಯ ಆಗಬೇಕಿದೆ ಎಂದು ಡಾ. ಮಂತರ್ ಗೌಡ ಹೇಳಿದರು.

ನಮ್ಮ ತೋಟದಲ್ಲಿಯೂ ಕಾಫಿ, ಕರಿಮೆಣಸು ನಷ್ಟವಾಗಿದೆ. ಇನ್ನು ಶಾಂತಳ್ಳಿ ಹೋಬಳಿಯಾದ್ಯಂತ ನಷ್ಟದ ಪ್ರಮಾಣ ಅಧಿಕವಾಗಿದೆ. ಇದರೊಂದಿಗೆ ಕಸಬಾ, ಕೊಡ್ಲಿಪೇಟೆ, ಶನಿವಾರಸಂತೆ ಭಾಗದಲ್ಲಿಯೂ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಶಾಂತಳ್ಳಿ ವ್ಯಾಪ್ತಿಯಲ್ಲಿ ವಾಡಿಕೆಗಿಂತ ಎರಡುಪಟ್ಟು ಹೆಚ್ಚು ಮಳೆಯಾಗಿ ಕಾಫಿ ಸೇರಿದಂತೆ ಇನ್ನಿತರ ಬೆಳೆಗಳು ಹಾನಿಯಾಗಿವೆ. ಆದರೂ ಸಹ ಅಧಿಕಾರಿಗಳು ನಷ್ಟ ಸಂಭವಿಸಿಲ್ಲ ಎಂದು ವರದಿ ನೀಡಿರುವುದು ಸರಿಯಲ್ಲ ಎಂದು ತೋಟಗಾರಿಕಾ ಅಧಿಕಾರಿ ಫಣೀಶ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಅಧಿಕಾರಿಗಳು ಸಮರ್ಪಕ ವರದಿ ನೀಡಿದರೆ ಸರ್ಕಾರದಿಂದ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ. ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಕಾಫಿ ಮಂಡಳಿಯ ಅಧಿಕಾರಿಗಳು ಜಿಲ್ಲಾ ಕೆಡಿಪಿ ಸಭೆಗೆ ತಪ್ಪದೇ ಹಾಜರಾಗಬೇಕು. ಆ ಸಭೆಯಲ್ಲಿ ಮತ್ತೊಮ್ಮೆ ಚರ್ಚೆ ನಡೆಸಿ, ಮುಂದಿನ ಕ್ರಮಕ್ಕೆ ಮುಂದಾಗುವುದಾಗಿ ಮಂತರ್ ಗೌಡ ಸೂಚಿಸಿದರು. ಅಧಿಕಾರಿಗಳ ಅವೈಜ್ಞಾನಿಕ ಕ್ರಮದಿಂದ ರೈತರು ಸಮಸ್ಯೆ ಎದುರಿಸುವಂತಾಗಿದೆ ಎಂದು ಸದಸ್ಯರಾದ ಜಗದೀಶ್, ಶರತ್‌ಶೇಖರ್, ಸಬಿತಾ ಚನ್ನಕೇಶವ ದೂರಿದರು.

ಹಣ ಕೇಳಿದರೆ ಶಿಸ್ತು ಕ್ರಮ: ಸರ್ಕಾರದ ವಿವಿಧ ಸೌಲಭ್ಯಗಳನ್ನು ಒದಗಿಸಲು ಯಾವುದೇ ಇಲಾಖೆಯ ಅಧಿಕಾರಿ, ೪ಏ (ಮೊದಲ ಪುಟದಿಂದ) ಸಿಬ್ಬಂದಿಗಳು ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆಯಿಟ್ಟರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಶಾಸಕರು, ವಸತಿ ಯೋಜನೆ ಅನುಷ್ಠಾನ, ೯ ಅಂಡ್ ೧೧ ದಾಖಲೆ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳಿಗೆ ಸುಖಾಸುಮ್ಮನೆ ಜನರನ್ನು ಅಲೆದಾಡಿಸುವುದು, ಹಣಕ್ಕೆ ಬೇಡಿಕೆಯಿಡುವ ಬಗ್ಗೆ ದೂರುಗಳು ಬರುತ್ತಿದ್ದು, ದಾಖಲೆ ಲಭಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ಕ್ಷೇತ್ರಕ್ಕೆ ಸರ್ಕಾರದ ವಿವಿಧ ಯೋಜನೆಗಳ ಮೂಲಕ ೧ ಸಾವಿರ ಮನೆಗಳು ಅನುಮೋದನೆಗೊಂಡಿದ್ದು, ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಶಾಸಕರು ಸೂಚಿಸಿದರು. ಅಧಿಕಾರಿ ಭಾನುಪ್ರಕಾಶ್ ಮಾಹಿತಿ ನೀಡಿ, ಬಸವ ವಸತಿ ಯೋಜನೆಯಡಿ ೩೧೦, ಅಂಬೇಡ್ಕರ್ ವಸತಿ ಯೋಜನೆಯಡಿ ೧೦೨ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಇನ್ನೂ ಆರಂಭಗೊಳ್ಳದ ಹಾಗೂ ಹಂತವಾರು ಅನುದಾನ ಬಿಡುಗಡೆಯಾಗದ ಪ್ರಕರಣಗಳನ್ನು ಪತ್ತೆಹಚ್ಚಿ, ಖುದ್ದು ಅಧಿಕಾರಿಗಳೇ ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸಬೇಕು. ವಸತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಮಂತರ್ ಗೌಡ ನಿರ್ದೇಶನ ನೀಡಿದರು.

ಅಕ್ಕಿ ಮಾರಾಟ ತಡೆಗೆ ಕ್ರಮ

ವಾರದ ಸಂತೆ ದಿನವಾದ ಸೋಮವಾರದಂದು ಗ್ರಾಮೀಣ ಭಾಗದಿಂದ ಹೆಚ್ಚಿನ ಮಂದಿ ಸರ್ಕಾರಿ ಕೆಲಸ ಕಾರ್ಯಗಳಿಗೆ ಆಗಮಿಸುತ್ತಾರೆ. ಈ ಹಿನ್ನೆಲೆ ಅಧಿಕಾರಿಗಳು ಕಚೇರಿಯಲ್ಲಿ ಕಡ್ಡಾಯವಾಗಿ ಇರಬೇಕು ಎಂದ ಅವರು, ಕೆಲವೊಂದು ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳಿಂದ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು. ಅಂತಹ ಅಂಗಡಿಗಳ ಪರವಾನಗಿ ರದ್ದುಗೊಳಿಸಬೇಕೆಂದು ಆಹಾರ ನಿರೀಕ್ಷಕಿ ಯಶಸ್ವಿನಿ ಅವರಿಗೆ ಸೂಚಿಸಿದರು.

ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ತಡೆಗೆ ಕ್ರಮ ವಹಿಸಬೇಕು. ಜಾಗರೂಕ ಸಮಿತಿ ರಚಿಸಿ ತಿಂಗಳಿಗೆ ಕನಿಷ್ಟ ೨೦ ನ್ಯಾಯಬೆಲೆ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗೆ ನಿರ್ದೇಶಿಸಿದರು.

ಹಕ್ಕು ಪತ್ರ ಇಲ್ಲ

ಕೊಡ್ಲಿಪೇಟೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಸುಮಾರು ೮೦೦ ಕುಟುಂಬಗಳಿಗೆ ಇಂದಿಗೂ ಹಕ್ಕು ಪತ್ರವಿಲ್ಲ. ಇದರಿಂದಾಗಿ ಸರ್ಕಾರದ ಸೌಲಭ್ಯ ಪಡೆಯಲು ಕಷ್ಟವಾಗಿದೆ. ಈ ಭಾಗದಲ್ಲಿ ಕಂದಾಯ ಇಲಾಖೆಯಿಂದ ಅಭಿಯಾನ ಹಮ್ಮಿಕೊಂಡು ದಾಖಲೆ ನೀಡಬೇಕೆಂದು ನಾಮನಿರ್ದೇಶಿತ ಸದಸ್ಯ ಔರಂಗಜೇಬ್ ಹೇಳಿದರು.

ಊರುಡುವೆ, ಸಿ ಮತ್ತು ಡಿ, ಗೋಮಾಳ ಜಾಗಕ್ಕೆ ಸಂಬAಧಿಸಿದ ಅರ್ಜಿಗಳನ್ನು ಹಾಗೆಯೇ ಇಡಲಾಗಿದೆ. ಇದರಲ್ಲಿ ಗೋಮಾಳ ಜಾಗಕ್ಕೆ ಹಕ್ಕುಪತ್ರ ನೀಡಲು ಕ್ರಮ ವಹಿಸಲಾಗುವುದು ಎಂದು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಹೇಳಿದರು. ಸಿ ಮತ್ತು ಡಿ ಜಾಗಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖೆಯೊಂದಿಗೆ ಜಂಟಿ ಸರ್ವೆ ನಡೆಸಿ, ಒಂದು ಸರ್ವೆ ನಂಬರ್‌ನಲ್ಲಿರುವ ಎಲ್ಲಾ ಜಾಗವೂ ಸಿ ಮತ್ತು ಡಿ ಜಾಗ ಅಲ್ಲ. ಅರಣ್ಯ ಇಲಾಖೆಯವರು ತಮ್ಮ ಜಾಗ ಗುರುತಿಸಿ ಬೌಂಡರಿ ಮಾಡಲಿ. ಉಳಿದ ಜಾಗಕ್ಕೆ ಕಂದಾಯ ಇಲಾಖೆಯಿಂದ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಿ ಎಂದು ಶಾಸಕರು ತಿಳಿಸಿದರು.

ಕಡತ ವಿಲೇವಾರಿಯಾಗುವುದಿಲ್ಲ

ಡಿಸೆಂಬರ್ ಅಂತ್ಯದೊಳಗೆ ಪೋಡಿ ದುರಸ್ತಿ ಕಡತಗಳು ವಿಲೇವಾರಿಯಾಗಿ, ರೈತರಿಗೆ ದಾಖಲೆ ಹಸ್ತಾಂತರಿಸಲು ಕ್ರಮವಹಿಸಬೇಕು ಎಂದು ಶಾಸಕರು ಸೂಚಿಸಿದರು. ನೂತನ ಉಪ ವಿಭಾಗಾಧಿಕಾರಿಗಳು ಬಂದ ನಂತರ ಕನ್ವರ್ಷನ್ ಕಡತಗಳು ವಿಲೇವಾರಿಯಾಗುತ್ತಿಲ್ಲ. ಅಧಿಕಾರಿ ಸ್ಥಳ ಪರಿಶೀಲನೆ ಮಾಡುತ್ತಿಲ್ಲ ಎಂದು ಸದಸ್ಯ ಔರಂಗಜೇಬ್ ಸಭೆಯ ಗಮನ ಸೆಳೆದರು. ಈ ಬಗ್ಗೆ ಕೆಡಿಪಿ ಸಭೆಯಲ್ಲಿ ಸೂಚಿಸುವುದಾಗಿ ಮಂತರ್ ಗೌಡ ಹೇಳಿದರು.

ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸರ್ವೆಯರ್‌ಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಖಾಸಗಿ ವ್ಯಕ್ತಿಗಳಿಗೆ ಸಂಬAಧಿಸಿದAತೆ ಸರ್ವೆಗಳು ನಡೆಯುತ್ತಿವೆ. ಆದರೆ ಇಲಾಖೆಗೆ ಅರ್ಜಿ ಸಲ್ಲಿಸುವ ರೈತರ ಜಾಗದ ಸರ್ವೆ ಆಗುತ್ತಿಲ್ಲ ಎಂದು ಸದಸ್ಯರಾದ ಶರತ್, ಆದಂ, ಗ್ಯಾರಂಟಿ ಸಮಿತಿ ಅಧ್ಯಕ್ಷ ಕಾಂತರಾಜ್ ದೂರಿದರು. ಇದರೊಂದಿಗೆ ಸರ್ವೆ ಇಲಾಖೆಯಲ್ಲಿರುವ ಸಿಬ್ಬಂದಿಗಳು ಉಡಾಫೆಯ ವರ್ತನೆ ತೋರುತ್ತಿದ್ದಾರೆ. ಸಾರ್ವಜನಿಕರೊಂದಿಗೆ ಸೌಹಾರ್ದತೆಯಿಂದ ವರ್ತಿಸುತ್ತಿಲ್ಲ. ಇದಕ್ಕೆ ಕಡಿವಾಣ ಹಾಕಬೇಕೆಂದು ಸದಸ್ಯರು ಒತ್ತಾಯಿಸಿದರು.

ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ವಸತಿ ಶಾಲೆ ಸ್ಥಾಪನೆ ಸಂಬAಧ ಸಚಿವ ಸಂತೋಷ್ ಲಾಡ್ ಅವರು ರೂ. ೪೦ ಕೋಟಿ ಅನುದಾನ ನೀಡಿದ್ದಾರೆ. ಕಂದಾಯ ಇಲಾಖೆಯಿಂದ ಚನ್ನಾಪುರದಲ್ಲಿ ಜಾಗ ಗುರುತು ಮಾಡಿದ್ದರೂ, ಕಾರ್ಮಿಕ ಇಲಾಖೆ ಸ್ವಾಧೀನಕ್ಕೆ ಪಡೆದಿಲ್ಲ ಇದೀಗ ಕೆಲವರು ಜಾಗ ನಮಗೆ ಸೇರಿದ್ದೆಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದಕ್ಕೆ ಕಾರ್ಮಿಕ ಇಲಾಖೆಯ ನಿರ್ಲಕ್ಷವೇ ಕಾರಣ ಎಂದು ಶಾಸಕರು, ಅಧಿಕಾರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಅನಧಿಕೃತ ಕಟ್ಟಡಗಳು

ಸೋಮವಾರಪೇಟೆ ಯೋಜನಾ ಪ್ರಾಧಿಕಾರಕ್ಕೆ ಒಳಪಟ್ಟಿರುವ ಬೇಳೂರು, ಹಾನಗಲ್ಲು, ಚೌಡ್ಲು ಗ್ರಾ.ಪಂ.ಗಳಲ್ಲಿ ಅನಧಿಕೃತವಾಗಿ ಕಟ್ಟಡಗಳು ನಿರ್ಮಾಣಗೊಳ್ಳುತ್ತಿದ್ದು, ಇದರಿಂದಾಗಿ ಸರ್ಕಾರದ ಆದಾಯ ಸೋರಿಕೆಯಾಗುತ್ತಿದೆ. ಕಟ್ಟಡಗಳಿಗೆ ಕಡ್ಡಾಯವಾಗಿ ಪ್ರಾಧಿಕಾರದ ಅನುಮತಿ ಪಡೆಯುವಂತೆ ಸಂಬAಧಿಸಿದ ಪಿಡಿಓಗಳು, ಅರ್ಜಿದಾರರಿಗೆ ಸೂಚಿಸಬೇಕು. ಈ ಬಗ್ಗೆ ಶಾಸಕರು ಸಂಬAಧಿಸಿದ ಪಿಡಿಓಗಳಿಗೆ ನಿರ್ದೇಶನ ನೀಡಬೇಕೆಂದು ಪ್ರಾಧಿಕಾರ ಅಧ್ಯಕ್ಷ ಕೆ.ಎ. ಆದಂ ಮನವಿ ಮಾಡಿದರು.

ಪಟ್ಟಣ ಪಂಚಾಯಿತಿಯಲ್ಲಿ ಪ್ರಗತಿಯಲ್ಲಿರುವ ಅಮೃತ್-೨ ಯೋಜನೆಯಿಂದ ರಸ್ತೆಗಳು ಗುಂಡಿ ಬಿದ್ದಿವೆ. ತಕ್ಷಣ ಮುಚ್ಚಲು ಅಭಿಯಂತರರಿಗೆ ಸೂಚಿಸಬೇಕು. ಬೀದಿ ನಾಯಿಗಳ ಹಾವಳಿ ನಿಯಂತ್ರಣ ಸಂಬAಧ ಕ್ರಮ ಕೈಗೊಳ್ಳಬೇಕೆಂದು ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರಿಗೆ ನಿರ್ದೇಶನ ನೀಡಲಾಯಿತು. ಅಂತೆಯೇ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ರೂ. ೧ ಕೋಟಿ ಅನುದಾನವನ್ನು ಪ.ಪಂ.ಗೆ ನೀಡಲಾಗಿದ್ದು, ತಕ್ಷಣ ಕ್ರಿಯಾಯೋಜನೆ ಸಲ್ಲಿಸುವಂತೆ ಶಾಸಕರು ತಿಳಿಸಿದರು.

ಉಳಿದಂತೆ ರಸ್ತೆಗಳ ಅಭಿವೃದ್ಧಿ, ನೂತನ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಸೆಸ್ಕ್ ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಅಭಿಯಂತರರು ಮಾಹಿತಿ ನೀಡಿದರು. ಸಭೆಗೆ ಗೈರುಹಾಜರಾದ ಸಬ್‌ರಿಜಿಸ್ಟಾçರ್ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಶಾಸಕರು ಸೂಚಿಸಿದರು.

ವೇದಿಕೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್‌ಕುಮಾರ್, ಆಡಳಿತಾಧಿಕಾರಿ ಅಬ್ದುಲ್ ನಭಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು, ತಹಶೀಲ್ದಾರ್ ಕೃಷ್ಣಮೂರ್ತಿ ಇದ್ದರು. ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಭಾಗಿಯಾಗಿದ್ದರು.