ಮಡಿಕೇರಿ, ನ. ೧೮: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಗರದ ಬಾಲ ಭವನದಲ್ಲಿ ಶಾಂತಿಯುತವಾಗಿ ನಡೆದು ಬಿಜೆಪಿ ಬೆಂಬಲಿತರು ಜಯಭೇರಿ ಬಾರಿಸಿದ್ದಾರೆ.
ಚುನಾವಣೆಯಲ್ಲಿ ಮತ ಚಲಾವಣೆ ಮಾಡಲು ಅವಕಾಶ ನೀಡಬೇಕೆಂದು ಕೆಲವರು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದ ಹಿನ್ನೆಲೆ ಪ್ರತ್ಯೇಕ ಬೂತ್ ರಚಿಸಿ ಮತದಾನಕ್ಕೆ ಅವಕಾಶ ನೀಡುವಂತೆ ಕೋರ್ಟ್ ಸೂಚಿಸಿತ್ತು. ಅನಂತರ ಉಚ್ಚ ನ್ಯಾಯಾಲಯದ ಮೊರೆ ಹೋದ ಸಂಘದ ಅರ್ಜಿ ಪರಿಶೀಲಿಸಿದ ಬಳಿಕ ‘ಅನುಮತಿ ಪಡೆದು ಅರ್ಹ ಮತದಾರರು ಮಾಡಿರುವ ಮತಗಳನ್ನು ಮಾತ್ರ ಎಣಿಕೆ ಮಾಡುವಂತೆ’ ನ್ಯಾಯಾಧೀಶರು ಆದೇಶಿಸಿದ್ದ ಹಿನ್ನೆಲೆ ಇಂದು ಮತ ಎಣಿಕೆ ಪ್ರಕ್ರಿಯೆಯನ್ನು ಕೈಗೊಳ್ಳಲಾಯಿತು.
ಮಡಿಕೇರಿ ತಾಲೂಕಿನ ಸಾಮಾನ್ಯ ಕ್ಷೇತ್ರದ ೫ ಸ್ಥಾನಗಳಿಗೆ ೧೦ ಅಭ್ಯರ್ಥಿಗಳು, ಸೋಮವಾರಪೇಟೆ ತಾಲೂಕಿನ ೩ ಸ್ಥಾನಗಳಿಗೆ ೫ ಅಭ್ಯರ್ಥಿಗಳು, ೨ ಮಹಿಳಾ ಮೀಸಲು ಕ್ಷೇತ್ರಗಳಿಗೆ ೪ ಅಭ್ಯರ್ಥಿಗಳು, ೧ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಕ್ಕೆ ೨ ಅಭ್ಯರ್ಥಿಗಳು, ೧ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ೩ ಅಭ್ಯರ್ಥಿಗಳು, ೧ ಹಿಂದುಳಿದ ಪ್ರವರ್ಗ ಎ ಮೀಸಲು ಕ್ಷೇತ್ರಕ್ಕೆ ೨ ಅಭ್ಯರ್ಥಿಗಳು ಕಣದಲ್ಲಿದ್ದರು. ಉಳಿದಂತೆ ವೀರಾಜಪೇಟೆ ತಾಲೂಕಿನ ೩ ಹಾಗೂ ೧ ಹಿಂದುಳಿದ ಪ್ರವರ್ಗ ಬಿ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು.
ವಿಜೇತರ ವಿವರ
ಮಡಿಕೇರಿ ತಾಲೂಕಿನ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೂದನ ಈರಪ್ಪ (೨೦೫ ಮತ), ಕೆ.ಆರ್. ಅನಂತಕುಮಾರ್ (೧೫೭), ತಳೂರು ದಿನೇಶ್ ಕುಮಾರ್ (೧೫೦), ಕುಂಬಗೌಡನ ವಿನೋದ್ ಕುಮಾರ್ (೧೪೪) ಹಾಗೂ ಮಂದ್ರಿರ ಮೋಹನ್ ದಾಸ್ (೧೪೩) ಗೆಲುವು ಪಡೆದರು.
ಕೂಪದೀರ ಕೆ ಉತ್ತಪ್ಪ (೯೪), ಎಂ.ಎA. ಗೋಪಾಲಕೃಷ್ಣ (೧೦೮), ಚೊಂಡೀರ ಜಿ ಚಂಗಪ್ಪ (೧೦೨), ಕಡ್ಯದ ಕೆ. ಪಾರ್ವತಿ (೧೦೩), ಬೆಪ್ಪುರನ ಬೋಪಯ್ಯ (೧೩೯) ಪರಾಜಿತಗೊಂಡರು.
ಸೋಮವಾರಪೇಟೆ ತಾಲೂಕು ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿ.ಸಿ. ರಾಜು (೨೭೨), ಸಿ.ಪಿ. ವಿಜಯ್ ಕುಮಾರ್ (೨೬೭) ಹಾಗೂ ಎ.ಜೆ. ಕೃಷ್ಣಪ್ಪ (೨೪೬) ಗೆಲುವಿನ ನಗೆ ಬೀರಿದರು. ಸಿ.ಎನ್. ತಮ್ಮಯ್ಯ (೧೮೭), ಕೆ.ಪಿ. ಭಾನುಪ್ರಕಾಶ್ (೨೧೦) ಪರಾಭವ ಗೊಂಡರು. ಮಹಿಳಾ ಮೀಸಲು ಕ್ಷೇತ್ರ ದಿಂದ ಕೆ.ಇ. ಸೌಮ್ಯ (೩೯೦) ಹಾಗೂ ಬಿ.ಬಿ. ಪುಷ್ಪಾವತಿ (೩೮೭) ಜಯ ಸಾಧಿಸಿದರು. (ಮೊದಲ ಪುಟದಿಂದ) ಪಿ.ಎಸ್. ಕವಿತಾ (೨೯೦), ಎ.ಎನ್. ಪ್ರಿಯಾ (೨೯೫) ಸೋಲು ಅನುಭವಿಸಿದರು.
ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಕುಡಿಯರ ಕೆ. ಮುತ್ತಣ್ಣ (೪೦೨) ವಿಜಯಿಯಾದರೆ, ಕುಡಿಯರ ಕೆ. ಮನು (೨೯೩) ಸೋಲು ಕಂಡರು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಎಸ್.ಸಿ. ಸತೀಶ್ (೪೪೯) ಜಯಶಾಲಿಯಾದರು. ಹೆಚ್.ಸಿ. ಪೊನ್ನಪ್ಪ (೨೦೫), ಹೆಚ್.ಎ. ಬೊಳ್ಳು (೨೮) ಪರಾಜಿತರಾದರು.
ಹಿಂದುಳಿದ ಪ್ರವರ್ಗ ಎ ಕ್ಷೇತ್ರದಿಂದ ವಿ. ಹರೀಶ್ (೩೯೭) ಜಯ ಗಳಿಸಿದರು. ಬಿ.ಸಿ. ಚೆನ್ನಪ್ಪ (೨೯೬) ಸೋಲನ್ನು ಅನುಭವಿಸಿದರು.
ಅವಿರೋಧ ಆಯ್ಕೆ
ವೀರಾಜಪೇಟೆ ಕ್ಷೇತ್ರದಿಂದ ಮಾಚೆಟೀರ ಕೆ. ಕುಟ್ಟಪ್ಪ, ಪೆಮ್ಮಂಡ ಟಿ. ಬೋಪಣ್ಣ, ಶಿವಚಾರರ ಎಸ್. ಸುರೇಶ್ ಹಾಗೂ ಹಿಂದುಳಿದ ಪ್ರವರ್ಗ ಬಿ. ಸ್ಥಾನದಿಂದ ಪೇರಿಯನ ಕೆ. ಉದಯ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಸಹಾಯಕ ನಿಬಂಧಕಿ ಶೈಲಜಾ ಹಾಗೂ ಉಪಚುನಾವಣಾಧಿಕಾರಿಗಳಾಗಿ ಸಂದೀಪ್, ಸುರೇಶ್ ಕಾರ್ಯನಿರ್ವಹಿಸಿದರು.
ಬಿಜೆಪಿ ಬೆಂಬಲಿತರ ಜಯಭೇರಿ
ಒಟ್ಟು ೧೭ ಸ್ಥಾನಗಳ ಪೈಕಿ ೧೩ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ರೈತ ಮಿತ್ರ ಒಕ್ಕೂಟ ತಂಡದ ೪ ಅಭ್ಯರ್ಥಿಗಳು ಗೆಲುವು ಪಡೆದುಕೊಂಡಿದ್ದಾರೆ.