ವೀರಾಜಪೇಟೆ, ನ. ೧೮: ಕೊಡಗು ಹಿಂದು ಮಲಯಾಳಿ ಮಹಿಳಾ ಅಸೋಸಿಯೇಷನ್ ವೀರಾಜಪೇಟೆ ವತಿಯಿಂದ ನಗರದ ಗೌರಿಕೆರೆ ಬಳಿಯಲ್ಲಿ ಸಂಘದ ಮಹಿಳಾ ಸದಸ್ಯರಿಗೆ ದ್ವಿಚಕ್ರ ವಾಹನ ತರಬೇತಿ ಕಾರ್ಯಾಗಾರಕ್ಕೆ ಸಂಘದ ಹಿರಿಯ ಸದಸ್ಯೆ ಕೃಷಿಕರಾದ ಸ್ಮಿತಾ ಸಂತೋಷ್ ಅವರು ಹಸಿರು ಬಾವುಟ ತೋರಿಸಿ ಚಾಲನೆ ನೀಡಿದರು.

ತರಬೇತಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ಮಲಯಾಳಿ ಮಹಿಳಾ ಅಸೋಸಿಯೇಷನ್ ಅಧ್ಯಕ್ಷರಾದ ಶೀಬಾ ಪ್ರಥ್ವಿನಾತ್ ವಹಿಸಿ ಮಾತನಾಡಿ, ಸಂಘದ ಸದಸ್ಯರ ಏಳಿಗೆಗಾಗಿ ಅಸೋಸಿಯೇಷನ್ ವತಿಯಿಂದ ಮಹಿಳೆಯರು ಸ್ವ ಉದ್ಯೋಗ ನಡೆಸಿ ಅಭಿವೃದ್ಧಿ ಹೊಂದಲು ಸಹಾಯ, ಅನಾರೋಗ್ಯದಿಂದ ಇದ್ದವರಿಗೆ ಧನಸಹಾಯ, ಮನೆಯಲ್ಲಿ ಕುಳಿತು ಸಮಯ ವ್ಯರ್ಥ ಮಾಡದಂತೆ ಉಚಿತ ಯೋಗಬ್ಯಾಸ ಹಾಗೂ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಹಿಳೆಯರಿಗೆ ವ್ಯವಹಾರ ನಡೆಸಲು ಅನುಕೂಲವಾಗಲೆಂದು ದ್ವಿಚಕ್ರ ವಾಹನ ತರಬೇತಿ ನೀಡಲಾಗುತ್ತಿದೆ.

ಸಂಘದ ಎಲ್ಲಾ ಮಹಿಳಾ ಸದಸ್ಯರು ಇದರ ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.

ತರಬೇತಿ ಕಾರ್ಯಾಗಾರದಲ್ಲಿ ಮಲಯಾಳಿ ಅಸೋಸಿಯೇಷನ್ ಗೌರವ ಅಧ್ಯಕ್ಷೆ ರೀತಾ ರಾಜನ್, ಉಪಾಧ್ಯಕ್ಷೆ ಚೈತ್ರ ಮೋಹನ್, ಕಾರ್ಯದರ್ಶಿ ಪುಷ್ಪಲತಾ, ಸಹಕಾರ್ಯದರ್ಶಿ ಪದ್ಮ, ಸದಸ್ಯರಾದ ಪೂಜಾ ಸಜೇಶನ್, ರಾಖಿ ಸಜೀವನ್, ಶ್ರೀದೇವಿ ಸಂತೋಷ್, ಶೀಲಾ ಸುನೀಲ್, ಶಾಂತ ಚಂದ್ರನ್, ಗ್ರಾ.ಪಂ. ಸದಸ್ಯೆ ಸಿ.ಹೆಚ್. ಸುನೀತ ಹರಿದಾಸ, ಪುರಸಭೆ ಮಾಜಿ ಸದಸ್ಯ ಸಿ.ಕೆ. ಪ್ರಥ್ವಿನಾಥ್ ಹಾಗೂ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.