ಸೋಮವಾರಪೇಟೆ, ನ. ೧೮: ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಸಂಘದ ವಾರ್ಷಿಕೋತ್ಸವ-ಪ್ರಶಸ್ತಿ ಪ್ರದಾನ ಅಂಗವಾಗಿ ಜಿಲ್ಲಾಮಟ್ಟದ ಒಳಾಂಗಣ ಕ್ರೀಡಾಕೂಟ ನಗರದ ಪಿ.ಎಲ್.ಡಿ. ಬ್ಯಾಂಕ್ ಕಟ್ಟಡದ ಡಾಲ್ಪಿನ್ ಸ್ಪೋಟ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಅಪ್ಪಚ್ಚು ರಂಜನ್, ಪತ್ರಕರ್ತರು ಸಮಾಜದ ವಿವಿಧ ಘಟನೆಗಳನ್ನು ಜನತೆಗೆ ತಲುಪಿಸುವ ಜವಾಬ್ದಾರಿಯನ್ನು ನಿಭಾಯಿಸುವಾಗ ಎದುರಿಸುವ ಒತ್ತಡವನ್ನು ನಿವಾರಿಸಲು ಕ್ರೀಡೆಯಂತಹ ಚಟುವಟಿಕೆಗಳು ಅವಶ್ಯಕವಿದೆ ಎಂದರು.
ಒತ್ತಡದ ಕರ್ತವ್ಯದಲ್ಲಿ ಪತ್ರಕರ್ತರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಇಂತಹ ಕ್ರೀಡಾಕೂಟಗಳು ಪರಸ್ಪರ ಸ್ನೇಹ ವೃದ್ಧಿ, ಒಗ್ಗಟ್ಟು ಮತ್ತು ದೈಹಿಕ-ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತವೆ ಎಂದರು.
ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಮಾತನಾಡಿ, ಸ್ಥಳೀಯ ಮಟ್ಟದಲ್ಲಿ ಎದುರಾಗುವ ಸಮಸ್ಯೆಗಳನ್ನು ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ತಲುಪಿಸುವಲ್ಲಿ ಪತ್ರಿಕಾರಂಗ ಪ್ರಮುಖ ಪಾತ್ರ ವಹಿಸುತ್ತಿದೆ.
ಸೋಮವಾರಪೇಟೆ ತಾಲೂಕಿನ ಅಭಿವೃದ್ಧಿಗೆ ಸ್ಥಳೀಯ ಪತ್ರಕರ್ತರು ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ ಕುಮಾರ್ ಮಾತನಾಡಿ, ತಾಲೂಕು ವ್ಯಾಪ್ತಿಯಲ್ಲಿ ಸಂಘದ ಮೂಲಕ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಇದರೊಂದಿಗೆ ಸದಸ್ಯರ ಶ್ರೇಯೋಭಿವೃದ್ಧಿಗೂ ಸಂಘ ಶ್ರಮಿಸುತ್ತಿದೆ ಎಂದರು.
ಸAಘದ ವತಿಯಿಂದ ನೀಡಲಾದ ಮೀಡಿಯಾ ಕೋಟ್ಗಳನ್ನು ಜಾನಪದ ಪರಿಷತ್ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಹಾಗೂ ಕ್ರೀಡಾಪಟು ಕೆ.ಎ. ಪ್ರಕಾಶ್ ಅವರು ವಿತರಿಸಿದರು.
ಕೊಡಗು ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಎಸ್.ಎ. ಮುರುಳೀಧರ್ ಪ್ರಾಸ್ತವಿಕವಾಗಿ ಮಾತನಾಡಿದರು. ತಾಲೂಕು ಸಂಘದ ಕಾರ್ಯದರ್ಶಿ ಡಿ.ಪಿ. ಲೋಕೇಶ್ ಸ್ವಾಗತಿಸಿ, ಉಪಾಧ್ಯಕ್ಷ ಕವನ್ ಕಾರ್ಯಪ್ಪ ನಿರೂಪಿಸಿದರು.
ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ಟಿ.ಪಿ. ರಮೇಶ್, ಸಿದ್ದಲಿಂಗಪುರದ ಪ್ರಗತಿಪರ ಕೃಷಿಕ ಶುಂಠಿ ರಾಮಣ್ಣ, ಡಾಲ್ಪಿನ್ ಸ್ಪೋಟ್ಸ್ ಕ್ಲಬ್ನ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಇತರರು ಇದ್ದರು.