*ಕಣಿವೆ, ನ. ೧೬: ಕಾರ್ತಿಕ ಮಾಸದ ಕಗ್ಗತ್ತಲೆಯ ಇರುಳನ್ನು ಮರುಳು ಮಾಡಿ ಮುತ್ತಿಟ್ಟು ಬೆಳಕು ಅರಳಿಸುವ ವಿದ್ಯುತ್ ಬೆಳಕಿನ ಹಾರಗಳು....

ಮೋಡದಿಂದ ಮುತ್ತಿನ ಮಳೆ ಸುರಿದಂತೆ ಝಗಮಗಿಸುತ್ತಿರುವ ಹೆದ್ದಾರಿಯ ಅಲಂಕೃತ ಬೆಳಕಿನ ದೀಪಗಳು....

ನೋಡುಗರಲ್ಲಿ ಇದೇನು ಹಗಲೋ ಅಥವಾ ಇರುಳೋ ಎಂಬ ಮರುಳು ಮೂಡಿಸುವ ಸನ್ನಿವೇಶಗಳು....

ಇದು ಈ ಬಾರಿ ಗಣಪತಿ ದೇವರ ಹೆಸರಲ್ಲಿ ಜರುಗುವ ಕುಶಾಲನಗರದ ಜಾತ್ರೋತ್ಸವ ಬೆಳಕಿನೋತ್ಸವವಾಗಿ ರೂಪುಗೊಂಡಿರುವ ಬಗೆ...

ಜಾತ್ರೆಯ ಅಂಗವಾಗಿ ಖುಷಿ ನಗರ ಕುಶಾಲನಗರದ ರಾತ್ರಿಗಳು ಕಳೆದ ನವೆಂಬರ್ ೮ ರಿಂದಲೂ ಪೂರ್ಣ ಹಗಲಾಗಿ ಬದಲಾದಂತೆ ಭಾಸವಾಗುತ್ತಿವೆ. ನಗರದಲ್ಲಿ ಹಾದು ಹೋಗಿರುವ ಮೈಸೂರು ಬಂಟ್ವಾಳ ರಾಷ್ಟಿçÃಯ ಹೆದ್ದಾರಿ, ಹಾಸನ, ವೀರಾಜಪೇಟೆ ರಾಜ್ಯ ಹೆದ್ದಾರಿಗಳು, ನಗರದ ವಿವಿಧ ಬಡಾವಣೆ ರಸ್ತೆಗಳು, ಕುಶಾಲನಗರದಲ್ಲಿ ವಿದ್ಯುತ್ ಅಲಂಕೃತಗೊAಡು ಝಗಮಗಿಸುತ್ತಿವೆ.

ಕಳೆದ ವರ್ಷ ಈ ರಾತ್ರಿಯ ಬೆಳಕಿನ ಮಾಲೆಗಳು ಕೇವಲ ರಾಷ್ಟಿçÃಯ ಹೆದ್ದಾರಿಯಲ್ಲಿ ಮಾತ್ರ ಅಳವಡಿಸಲಾಗಿತ್ತು. ಆದರೆ ಈ ಬಾರಿ ನಗರದ ಬಹುತೇಕ ರಸ್ತೆಗಳು ಇಂತಹ ಅಲಂಕೃತ ಬೆಳಕಿನ ಮಾಲೆಗಳ ಭಾಗ್ಯದೊಂದಿಗೆ ನೋಡುಗರ ಕಣ್ಮನ ಸೂರೆಗೊಳ್ಳುತ್ತಿವೆ.

ಗಣಪತಿ ದೇವರೇ ಎದ್ದು ಬಂದAತೆ ಭಾಸ

ಪುರದೈವ ಗಣಪತಿಯ ಆಲಯ ಇರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತವಂತೂ ವಿದ್ಯುದ್ದೀಪಗಳಿಂದ ವಿಶೇಷವಾಗಿ ಅಲಂಕಾರ ಗೊಂಡಿದೆ. ಗಣಪತಿ ದೇವಾಲಯದ ಗೋಪುರದ ಮೇಲೆ ಬಗೆ ಬಗೆಯ ಬಣ್ಣಗಳಿಂದ ಸಿದ್ದಪಡಿಸಿರುವ ವಿದ್ಯುತ್ ಅಲಂಕಾರ ನೋಡುಗರಿಗಂತೂ ಅರೆ ಕ್ಷಣ ಗರ್ಭ ಗುಡಿಯಿಂದ ಗಣಪತಿಯೇ ಎದ್ದು ಬಂದು ನಿಂತAತೆ ಭಾಸವಾಗುತ್ತಿದೆ.

ಈ ಬಾರಿ ಆಕರ್ಷಕ ಜಾತ್ರೋತ್ಸವ

ಈ ಬಾರಿ ಕುಶಾಲನಗರದ ಜಾತ್ರೋತ್ಸವ ನೋಡುಗರಿಗೆ ವಿಶೇಷ ಅನುಭೂತಿ ಉಂಟು ಮಾಡುತ್ತಿದೆ. ವರ್ಷದಿಂದ ವರ್ಷಕ್ಕೆ ವಿನೂತನ ಆಟಿಕೆಗಳು ಮಕ್ಕಳು, ಮಹಿಳೆಯರು ಸೇರಿದಂತೆ ನೋಡುಗರನ್ನು ತನ್ನತ್ತ ಆಕರ್ಷಿಸುವ ರೀತಿಯಲ್ಲಿ ಜಾತ್ರೋತ್ಸವ ಸಿದ್ದಗೊಂಡಿದೆ. ಕಳೆದ ಬಾರಿಗಿಂತ ಈ ಬಾರಿ ಜಾತ್ರೆಗೆ ದಿನೇ ದಿನೇ ಹೆಚ್ಚಿನ ಮಂದಿ ಆಗಮಿಸುತ್ತಿದ್ದು ನಗರದ ಅಲಂಕಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ನಗರದ ವಿಶಾಲ ಭೂಪ್ರದೇಶ ಗುಂಡೂರಾವ್ ಬಡಾವಣೆಯಲ್ಲಿ ಆಯೋಜನೆಯಾಗಿರುವ ಜಾತ್ರಾ ಮೈದಾನದಲ್ಲಿ ತಮ್ಮ ಅಮೂಲ್ಯ ಜೀವ ಹಾಗೂ ಜೀವನವನ್ನು ಪಣಕ್ಕಿಟ್ಟು ನೋಡುಗರಲ್ಲಿ ರೋಮಾಂಚನ ಮೂಡಿಸುವ ಮರಣ ಭಾವಿಯಲ್ಲಿ ನಡೆಯುವ ಬೈಕ್ ಹಾಗೂ ಕಾರುಗಳ ಚಮತ್ಕಾರದ ಸವಾರಿ ನೋಡಲು ಎದೆ ಗಟ್ಟಿ ಇರಬೇಕು. ಏಕೆಂದರೆ ಇಂತಹ ಸಾಹಸಮಯ ಚಾಲನೆ ನೋಡುಗರಲ್ಲಿ ದಿಗ್ರö್ಭಮೆ, ಭಯ, ಆತಂಕವನ್ನು ಹೆಚ್ಚಿಸುತ್ತದೆ.

ಇನ್ನೂ ಮನಸ್ಸಿಗೆ ಮುದ ಹಾಗೂ ಭಯ ಎರಡನ್ನೂ ಜೊತೆ ಜೊತೆಗೆ ಮೂಡಿಸುವ ಜಾಯಿಂಟ್ ವ್ಹೀಲ್, ಕೊಲಂಬಸ್, ಬ್ರೇಕ್ ಡ್ಯಾನ್ಸ್, ಬೌನ್ಸಿ ಜಾರು ಬಂಡಿ, ಡಬ್ಬಲ್ ಟ್ರಕ್, ಉಲ್ಟಾ ಪಲ್ಟಾ ರೇಂಜರ್ ಮೊದಲಾದ ಮನರಂಜನೆ ಆಟಿಕೆಗಳು ಜನರನ್ನು ತಮ್ಮತ್ತ ಆಕರ್ಷಿಸುತ್ತಿವೆ.

ಇನ್ನು ಮಕ್ಕಳ ಮೆಚ್ಚಿನ ಡ್ರಾಗನ್ ರೈಲು, ಜಾರು ಬಂಡಿ, ಪುಟ್ಟ ಫುಟ್ಟ ಸರ್ಕಸ್ ಗಳ ಮಾದರಿಗಳು ಜಾತ್ರೆಯ ಅಂದವನ್ನು ಆನಂದಗೊಳಿಸಿವೆ. ಈ ಬಾರಿ ವಿಶೇಷವಾಗಿ ೨೫ಕ್ಕೂ ಬಗೆಯ ರಂಗು ರಂಗಿನ ಮೀನುಗಳು ಉಳ್ಳ ಮತ್ಸ್ಯಾಲಯ ಸೇರ್ಪಡೆಯಾಗಿದ್ದು ಜನಾಕರ್ಷಣೆಗೆ ಒಳಗಾಗಿದೆ.

ಜಾತ್ರೆಯಲ್ಲಿ ಇರುವ ವಿವಿಧ ೬೫ ಮಳಿಗೆಗಳಲ್ಲಿ ಮಹಿಳೆಯರ ಅಡುಗೆ ಮನೆಗೆ ಬೇಕಾದ ಪಾತ್ರೆ ಪರಿಕರಗಳು, ಅಲಂಕಾರಿಕ ಸಾಮಗ್ರಿಗಳು, ಹೆಣ್ಣು ಮಕ್ಕಳ ಅಂದ ಚೆಂದದ ಆಕರ್ಷಣೀಯ ಸಾಮಗ್ರಿಗಳು ಸೇರಿದಂತೆ ಎಲ್ಲ ವಸ್ತುಗಳ ಮಾರಾಟ ಖರೀದಿ ಭರದಿಂದ ಸಾಗಿದೆ.

ಸುವ್ಯವಸ್ಥಿತ ವಾಹನ ನಿಲುಗಡೆ

ನವೆಂಬರ್ ೮ ರಿಂದ ಆರಂಭಗೊAಡು ೩೦ ರವರೆಗೂ ನಡೆಯುವ ಜಾತ್ರೋತ್ಸವದಲ್ಲಿ ಪಾಲ್ಗೊಳ್ಳಲು ತಾಲೂಕಿನ ಪ್ರತಿ ಗ್ರಾಮಗಳಿಂದ ಹಾಗೂ ನೆರೆಯ ಮೈಸೂರು ಹಾಗೂ ಹಾಸನ ಗಡಿ ಜಿಲ್ಲೆಗಳ ಸಹಸ್ರಾರು ಮಂದಿ ಭಾಗಿಯಾಗುವ ಮೂಲಕ ಜಾತ್ರಾ ಮೈದಾನ ಇರುವೆ ಗೂಡಿನಂತಾಗಿದೆ. ಅಷ್ಟೂ ಮಂದಿಯೂ ಆಗಮಿಸುವ ನೂರಾರು ಸಂಖ್ಯೆಯ ವಾಹನಗಳ ಸುಗಮ ನಿಲುಗಡೆ ಶಿಸ್ತು ಬದ್ದವಾಗಿ ಕಂಡುಬರುತ್ತಿದೆ.

ಬಾಯಿ ರುಚಿ ತರಿಸುವ ಖಾದ್ಯಗಳು

ಜಾತ್ರೆಗೆ ಬರುವವರನ್ನು ತಮ್ಮತ್ತ ಆಕರ್ಷಿಸುತ್ತಿರುವ ತಿನಿಸುಗಳ ಮಳಿಗೆಗಳು ಬಾಂಡಲಿ ಅಗಲದ ಹಪ್ಪಳ, ಕಣ್ಣಲ್ಲಿ ನೀರು ತರಿಸುವ ಖಾರ ಖಾರ ಮೆಣಸಿನ ಕಾಯಿ ಬಜ್ಜಿಗಳು, ಆಲುಗೆಡ್ಡೆಯ ಅಲಂಕಾರಿಕ ತಿನಿಸುಗಳು, ಬಾಯಿ ರುಚಿಯ ಮಸಾಲೆ, ಪಾನಿ ಪೂರಿಗಳು ಸೇರಿದಂತೆ ಹತ್ತು ಹಲವು ಖಾದ್ಯಗಳು ಜಾತ್ರೆಯ ಸೊಬಗಿಗೆ ಪಾತ್ರ ವಹಿಸಿವೆ.

ಸಾಹಿತ್ಯ ಸಂಗೀತ ಪ್ರಿಯರ ಮನ ಸೆಳೆವ ಸಾಂಸ್ಕೃತಿಕ ಸಂಭ್ರಮ

ಜಾತ್ರಾ ಮೈದಾನದಲ್ಲಿ ಜಾತ್ರೆ ನಡೆಯುವ ಅಷ್ಟೂ ದಿನಗಳ ಆವಧಿ ಪ್ರತಿ ರಾತ್ರಿ ೮ ರಿಂದ ಜರುಗುವ ನೃತ್ಯ, ಸಂಗೀತ, ಸಮೂಹ ನೃತ್ಯ, ಗಾಯನ, ಭರತ ನಾಟ್ಯ ಮೊದಲಾದ ವೈವಿಧ್ಯಮಯ ಸಾಂಸ್ಕೃತಿಕ ಸಂಭ್ರಮಗಳು ಸಾಹಿತ್ಯ ಸಂಗೀತ ಪ್ರಿಯರ ಮನ ಸೂರೆಗೊಳ್ಳುತ್ತಿವೆ. ಜೊತೆಗೆ ಸ್ಥಳೀಯ ಮಕ್ಕಳ ಪ್ರತಿಭೆಗಳ ಅನಾವರಣಕ್ಕೂ ಇದೊಂದು ಉತ್ತಮ ವೇದಿಕೆ ಯಾಗಿ ಮಾರ್ಪಟ್ಟಿದೆ.

ನೋಡುಗರ ಮನಸೆಳೆದ ಗೋವುಗಳ ಪ್ರದರ್ಶನ

ಜಾತ್ರೋತ್ಸವದಲ್ಲಿ ಪರಂಪರಾಗತವಾಗಿ ನಡೆದು ಬಂದ ಶತ ವರ್ಷಗಳನ್ನು ಕಂಡ ಗೋ ಪ್ರದರ್ಶನ ನೊಡುಗರ ಮನಸೆಳೆಯಿತು. ತಾಲೂಕಿನ ಬಹುತೇಕ ಹಳ್ಳಿಗಳ ರೈತರು ತಾವು ಸಲಹಿದ್ದ ಗೋವುಗಳನ್ನು ವಾಹನಗಳಲ್ಲಿ ಕರೆ ತಂದು ಪ್ರದರ್ಶನದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ಕೆಲವು ರೈತರು ತಮ್ಮ ಪ್ರಿಯವಾದ ಆಕಳುಗಳೊಂದಿಗೆ ನಡೆದುಕೊಂಡೇ ಜಾತ್ರಾ ಮೈದಾನಕ್ಕೆ ಬಂದು ಮರಳಿದ್ದು ಕಂಡು ಬಂತು. ಒಟ್ಟಾರೆ ಕುಶಾಲನಗರದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಊರ ದೇವರ ಜಾತ್ರೆ ಮಡಿಕೇರಿ ದಸರಾ ಮಾದರಿಯಲ್ಲಿ ಜನೋತ್ಸವವಾಗಿ ರೂಪುಗೊಂಡಿದ್ದು ನೋಡುಗರಲ್ಲಿ ಖುಷಿ ಮೂಡಿಸುತ್ತಿದೆ.

-ಕೆ.ಎಸ್.ಮೂರ್ತಿ