ಮಡಿಕೇರಿ, ನ. ೧೬: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಇಂಗ್ಲಿಷ್ ವಿಭಾಗದ ಜಾಯ್ಸ್ ಸಾಹಿತ್ಯ ಸಂಘದ ಆಶ್ರಯದಲ್ಲಿ “ಬಿಯಾಂಡ್ ದಿ ಬುಕ್ ಆ್ಯಕ್ಟಿವಿಟಿ - ಲಿಟ್ ಅಪ್” ಎಂಬ ಸಾಹಿತ್ಯ ಕಾರ್ಯಕ್ರಮವು ಶುಕ್ರವಾರ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಜರುಗಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಇಂಗ್ಲಿಷ್ ಸಾಹಿತ್ಯ ವಿದ್ಯಾರ್ಥಿ ಶಿಫಾ ಅವರು ಚಟುವಟಿಕೆಯ ಉದ್ದೇಶಗಳ ಬಗ್ಗೆ ಸಂಕ್ಷಿಪ್ತವಾಗಿ ಪರಿಚಯಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಮತ್ತು ಜಾಯ್ಸ್ ಸಾಹಿತ್ಯ ಸಂಘದ ಅಧ್ಯಕ್ಷೆ ಪ್ರೊ. ನಯನಾ ಕಶ್ಯಪ್ ಮಾತನಾಡಿ ಜಾಯ್ಸ್ ಸಾಹಿತ್ಯ ಸಂಘವು ವಿದ್ಯಾರ್ಥಿಗಳ ಒಳಗಿರುವ ಚಿಂತನೆ ಮತ್ತು ಪ್ರತಿಭೆಗೆ ವೇದಿಕೆ ಒದಗಿಸುವ ಉದ್ದೇಶದಿಂದ ಪ್ರತಿವರ್ಷ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ ಎಂದು ವಿವರಿಸಿದರು.

ನಂತರ ಪ್ರಾಂಶುಪಾಲರಾದ ಮೇಜರ್ ರಾಘವ ಬಿ. ಮಾತನಾಡಿ, ಸಾಹಿತ್ಯದ ಮೌಲ್ಯವನ್ನು ಜೀವನದ ಬೆಳಕಾಗಿ ಪರಿಗಣಿಸುವಂತೆ ಕರೆ ನೀಡಿದರು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವ ಜೊತೆಗೆ ಮಾತನಾಡುವ, ಆಲೋಚಿಸುವ ಮತ್ತು ಅಭಿವ್ಯಕ್ತಿಯ ಕೌಶಲ್ಯವನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.

ವಿದ್ಯಾರ್ಥಿಗಳಿಂದ ಹಾಗೂ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಈ ಸಾಹಿತ್ಯ ಚಟುವಟಿಕೆಯಲ್ಲಿ ವಿವಿಧ ಸಾಹಿತ್ಯಾಧಾರಿತ ಸ್ಪರ್ಧೆಗಳು ನಡೆದವು. ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ಹಾಸ್ಯಬುದ್ಧಿ ಮತ್ತು ಸೃಜನಾತ್ಮಕ ಚಿಂತನೆ ಪ್ರದರ್ಶಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಜಾಯ್ಸ್ ಸಾಹಿತ್ಯ ಸಂಘದ ಕಾರ್ಯದರ್ಶಿ ಅಲೋಕ್ ಬಿಜೈ ಹಾಗೂ ಇತರ ಉಪನ್ಯಾಸಕರು ಉಪಸ್ಥಿತರಿದ್ದರು.