ಮೂರ್ನಾಡು, ನ. ೧೬: ಲಯನ್ಸ್ ಕ್ಲಬ್ ಶತಮಾನೋತ್ಸವ ದಾಟಿ ತನ್ನ ಸೇವೆಯನ್ನು ಮುಂದುವರೆಸುತ್ತಿದ್ದರೂ ಇಲ್ಲಿ ಸದಸ್ಯತ್ವ ಪಡೆದುಕೊಳ್ಳುವ ಯುವ ಸಮುದಾಯ ಕಡಿಮೆಯಾಗುತ್ತಿದೆ ಎಂದು ಲಯನ್ಸ್ ಸಂಸ್ಥೆಯ ಪ್ರಾದೇಶಿಕ ಅಧ್ಯಕ್ಷ ಲಯನ್‌ಡಾ. ಪಂಚಮ್ ತಿಮ್ಮಯ್ಯ ಬೇಸರ ವ್ಯಕ್ತಪಡಿಸಿದರು.

ಮೂರ್ನಾಡು ಕೊಡವ ಸಮಾಜದಲ್ಲಿ ಮೂರ್ನಾಡು ಮತ್ತು ವೀರಾಜಪೇಟೆ ಲಯನ್ಸ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪ್ರಾದೇಶಿಕ ಅಧ್ಯಕ್ಷರ ಭೇಟಿಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ್ದ ಅವರು ಕ್ಲಬ್‌ನ ವತಿಯಿಂದ ಪ್ರಪಂಚದಾದ್ಯAತ ಹಲವು ರೀತಿಯಲ್ಲಿ ಸೇವಾ ಕಾರ್ಯಗಳನ್ನು ನಡೆಸಲಾಗುತ್ತಿದ್ದು, ಇಲ್ಲಿ ಹಿರಿಯರ ಸಂಖ್ಯೆ ಹೆಚ್ಚಿದ್ದು, ಯುವ ಸಮುದಾಯ ಕ್ಲಬ್‌ನ ಕಡೆ ಆಕರ್ಷಣೆ ಕಳೆದುಕೊಳ್ಳುತ್ತಿದೆ.

ಇವರನ್ನು ಕ್ಲಬ್‌ನ ಕಡೆಗೆ ಮುಖ ಮಾಡುವಂತಹ ಕಾರ್ಯಗಳು ನಮ್ಮಿಂದ ಆಗಬೇಕಿದೆ. ಅದಕ್ಕಾಗಿ ಪ್ರತಿಯೊಂದು ಲಯನ್ಸ್ ಸಂಸ್ಥೆಗಳಲ್ಲಿ ಲಿಯೊಕ್ಲಬ್ ಪ್ರಾರಂಭಿಸಿ, ಅಲ್ಲಿ ಯುವ ಜನತೆಯನ್ನು ಕ್ಲಬ್‌ನ ಕಡೆಗೆ ಸೆಳೆಯುವ ಕಾರ್ಯವಾಗಬೇಕಿದೆ ಎಂದ ಅವರು ಈ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ಆಸಕ್ತಿ ತೋರಬೇಕು ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮೂರ್ನಾಡು ಲಯನ್ಸ್ ಕ್ಲಬ್‌ನ ಅಧ್ಯಕ್ಷ ಎ. ಎಸ್. ಚಂಗಪ್ಪ ವಹಿಸಿದ್ದರು.

ವೇದಿಕೆಯಲ್ಲಿ ಲಯನ್ಸ್ ಸಂಸ್ಥೆಯ ಪ್ರಾದೇಶಿಕ ರಾಯಭಾರಿ ನವೀನ್ ಅಂಬೆಕಲ್, ವಲಯ ಅಧ್ಯಕ್ಷೆ ಬಿಂದು ಗಣಪತಿ, ವಲಯರಾಯ ಭಾರಿ ಡಾಮಿರೊ ಸರಿವೊ, ವೀರಾಜಪೇಟೆ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಅಂಬಿ ಕೃಷ್ಣಮೂರ್ತಿ, ಕಾರ್ಯದರ್ಶಿ ಪೌಲ್‌ಕ್ಸೆವಿಯರ್, ಖಜಾಂಚಿ ಎಂ. ಸುರೇಶ್, ಮೂರ್ನಾಡು ಲಯನ್ಸ್ ಕ್ಲಬ್‌ನ ಕಾಯದರ್ಶಿ ಪ್ರಕಾಶ್ ಕಾವೇರಪ್ಪ, ಖಜಾಂಚಿ ಎಂ. ದಿನು ಮೇದಪ್ಪ ಅವರುಗಳು ಉಪಸ್ಥಿತರಿದ್ದರು.

ಲಯನ್ ಪ್ರಕಾಶ್ ಕಾವೇರಪ್ಪ ಪ್ರಾರ್ಥಿಸಿ, ಲಯನ್ ಎ. ಎಸ್. ಚಂಗಪ್ಪ ಸ್ವಾಗತಿಸಿ, ಲಯನ್ ಅಂಬಿ ಕೃಷ್ಣಮೂರ್ತಿ ವಂದಿಸಿದರು.