ನಾಪೋಕ್ಲು, ನ. ೧೬: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಬೆಂಬಲವೇ ಅಧಿಕಾರ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ನಾಪೋಕ್ಲು ಟೌನ್ ಮಹಿಯುದ್ದೀನ್ ಸುನ್ನಿ ಜುಮಾ ಮಸೀದಿ ವತಿಯಿಂದ ಇಲ್ಲಿಯ ಚೆರಿಯಪರಂಬುವಿನಲ್ಲಿ ಆಯೋಜಿಸಲಾದ ನೂತನ ಶಾದಿ ಮಹಲ್ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜನರ ಪ್ರೀತಿ - ವಿಶ್ವಾಸ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದಾಗಿದೆ. ಚೆರಿಯಪರಂಬು ಭಾಗದ ಜನರ ಬಹುಕಾಲದ ನಿರೀಕ್ಷೆಯನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಸರ್ಕಾರದ ಅನುದಾನದಲ್ಲಿ ಸಭೆ ಸಮಾರಂಭಗಳ ಹಾಗೂ ಹಬ್ಬಗಳ ಆಚರಣೆಗೆ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಲಾಗುವುದು. ಎರಡು ವರ್ಷಗಳ ಹಿಂದೆ ಚೆರಿಯಪರಂಬು ವ್ಯಾಪ್ತಿಯಲ್ಲಿ ಪ್ರವಾಹ ಬಂದಾಗ ರಸ್ತೆ ಸಮಸ್ಯೆ ಎದುರಾಗಿತ್ತು. ಸರ್ಕಾರದ ವಿಶೇಷ ಅನುದಾನದಲ್ಲಿ ರೂ. ೧.೮೦ ಕೋಟಿ ವೆಚ್ಚದಲ್ಲಿ ರಸ್ತೆಯನ್ನು ಎತ್ತರಿಸಿ ಸೇತುವೆಯನ್ನು ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸಲು ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದರು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗಿದೆ. ಪ್ರಗತಿಪಥ ಯೋಜನೆಯಡಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ರೂ. ೨೩ ಕೋಟಿ ಮೀಸಲಿಟ್ಟಿದೆ. ಮಳೆಹಾನಿ ಪರಿಹಾರ ಯೋಜನೆಯು ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ವೀರಾಜಪೇಟೆ ಕ್ಷೇತ್ರದಲ್ಲಿ ಎಲ್ಲಿಯೂ ಅಭಿವೃದ್ಧಿ ಕುಂಠಿತವಾಗಿಲ್ಲ. ಹಲವು ವರ್ಷಗಳ ಬಳಿಕ ರೂ. ೧೫೦ ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ತರಲಾಗಿದೆ. ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ಮುಖ್ಯಮಂತ್ರಿಗಳು ವಿಶೇಷ ಅನುದಾನ ನೀಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟೌನ್ ಮಹಿಯುದ್ದೀನ್ ಸುನ್ನಿ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಹಮಾನ್ ಎಂ.ಹೆಚ್. ವಹಿಸಿ ಮಾತನಾಡಿ, ಇದುವರೆಗೆ ಆಗದ ಅಭಿವೃದ್ಧಿ ಕಾರ್ಯಗಳನ್ನು ಶಾಸಕ ಪೊನ್ನಣ್ಣ ಅವರು ಮಾಡಿದ್ದಾರೆ. ಅದೇರೀತಿ ಇಲ್ಲಿ ನಿರ್ಮಾಣವಾಗಲಿರುವ ನೂತನ ಶಾದಿ ಮಹಲ್ ಕಟ್ಟಡಕ್ಕೆ ಸಂಪೂರ್ಣ ಸಹಕಾರ ನೀಡಿದ್ದು ಇನ್ನು ಮುಂದೆಯೂ ಹೆಚ್ಚಿನ ಅನುದಾನವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನಾಪೋಕ್ಲು ಟೌನ್ ಮಹಿಯುದ್ದೀನ್ ಸುನ್ನಿ ಜುಮಾ ಮಸೀದಿ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ನಹೀಬು ಖಾಝಿ ಕೊಡಗು ಶೈಖುನ ಅಬ್ದುಲ್ ಫೈಜಿ ಎಡಪಾಲ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ನಿಜಾರ್ ಅಕ್ಸನಿ ಕಕ್ಕಡೀಪುರ ಮುದರಿಸ್ ಕುಂಜಿಲ, ಸಾದುಲಿ ಸಖಾಫಿ ಕೊಳಕೇರಿ, ಖತೀಬರಾದ ಅಫಿಳ್ ಶೌಕತ್ ಸಖಾಫಿ, ಮುದರಿಸ್ ಇಬ್ರಾಹಿಂ ಖಾಲೀಲ್ ಸಖಾಫಿ ಗ್ರಾಮ ಪಂಚಾಯಿತಿ ಸದಸ್ಯರಾದ ಇಸ್ಮಾಯಿಲ್ ಕೆ.ಎ., ಮಾಚೇಟಿರ ಕುಸು ಕುಶಾಲಪ್ಪ, ಕುಲ್ಲೇಟಿರ ಅರುಣ್ ಬೇಬ, ತಿಮ್ಮಯ್ಯ, ಮಹಮ್ಮದ್ ಎಂ.ಇ., ನಾಯಕಂಡ ಮುತ್ತಪ್ಪ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಲೀಂ ಹ್ಯಾರಿಸ್, ಮಸೀದಿಯ ಹಾಗೂ ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳ ಹಾಗೂ ಪಕ್ಷದ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು. ಟೌನ್ ಮಹಿಯುದ್ದೀನ್ ಸುನ್ನಿ ಜುಮ್ಮ ಮಸೀದಿ ಕಾರ್ಯದರ್ಶಿ ಯೂನಸ್ ಸ್ವಾಗತಿಸಿ, ವಂದಿಸಿದರು.