ಮಡಿಕೇರಿ, ನ. ೧೨: ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲ್ಪಡುವ ಸಹಕಾರ ರತ್ನ, ಶ್ರೇಷ್ಠ ಸಹಕಾರಿ ಹಾಗೂ ಉತ್ತಮ ಸಹಕಾರಿ ಸಿಬ್ಬಂದಿ ಪ್ರಶಸ್ತಿಗೆ ಜಿಲ್ಲೆಯ ಐವರು ಪಾತ್ರರಾಗಿದ್ದಾರೆ ಎಂದು ಸಹಕಾರಿ ಯೂನಿಯನ್ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಘೋಷಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ೭೨ನೇ ಅಖಿಲ ಭಾರತ ಸಪ್ತಾಹ ಅಂಗವಾಗಿ ರಾಜ್ಯ ಸಹಕಾರ ಮಹಾಮಂಡಳ ನಿಯಮಿತಿ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ಕರ್ನಾಟಕ ಇನ್ಸಿ÷್ಟಟ್ಯೂಟ್ ಆಫ್ ಕೋ ಅಪರೇಟಿವ್ ಮ್ಯಾನೇಜ್‌ಮೆಂಟ್ ಹಾಗೂ ಸ್ಥಳೀಯ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ತಾ, ೨೦ ರಂದು ಮಡಿಕೇರಿಯ ಡಿಸಿಸಿ ಬ್ಯಾಂಕ್‌ನ ಉನ್ನತಿ ಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿದೆ ಎಂದರು.

ಕೊಡಗು ಸಹಕಾರ ರತ್ನ ಪ್ರಶಸ್ತಿಗೆ ಕಳೆದ ೫೧ ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಪೊನ್ನಂಪೇಟೆಯ ಚಿರಿಯಪಂಡ ಕೆ. ಉತ್ತಪ್ಪ, ಶ್ರೇಷ್ಠ ಸಹಕಾರಿ ಪ್ರಶಸ್ತಿಗೆ ಸೋಮವಾರಪೇಟೆ ತಾಲೂಕಿನ ಶುಂಠಿ ಗ್ರಾಮದ ಎಚ್.ಎಸ್. ಮುದ್ದಪ್ಪ, ಮಡಿಕೇರಿ ತಾಲೂಕಿನ ಅರ್ವತೋಕ್ಲು ಗ್ರಾಮದ ತಳೂರು ಕಿಶೋರ್ ಕುಮಾರ್, ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿಗೆ ಶನಿವಾರಸಂತೆಯ ದೇಬಾಂಬಿಕ ಮಹೇಶ್ ಹಾಗೂ ಉತ್ತಮ ಸಹಕಾರಿ ಸಿಬ್ಬಂದಿ ಪ್ರಶಸ್ತಿಗೆ ಆಲೆಮಾಡ ಕಾವೇರಮ್ಮ ಅವರನ್ನು ಆಯ್ಕೆಗೊಳಿಸಲಾಗಿದೆ ಎಂದು ತಿಳಿಸಿದರು. ಸಹಕಾರಿ ಸಪ್ತಾಹ ೪ಏಳನೇ ಪುಟಕ್ಕೆ ತಾ. ೧೪ ರಂದು ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಚಾಲನೆಗೊಳ್ಳಲಿದ್ದು, ತಾ. ೧೫ ರಂದು ಪಾಲಿಬೆಟ್ಟ, ೧೬ ರಂದು ಸುಂಟಿಕೊಪ್ಪ, ೧೭ ರಂದು ಸೋಮವಾರಪೇಟೆ, ೧೮ ರಂದು ಕಾನೂರು, ೧೯ ರಂದು ದೇವಣಗೇರಿಯಲ್ಲಿ ವಿವಿಧ ಕಾರ್ಯಚಟುವಟಿಕೆಗಳೊಂದಿಗೆ ನಡೆಯಲಿದೆ. ತಾ. ೨೦ ರಂದು ಮಡಿಕೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಸಂಸದ ಯದುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಸೇರಿದಂತೆ ಸಹಕಾರಿ ಯೂನಿಯನ್ ನಿರ್ದೇಶಕರು, ಸಹಕಾರ ಸಂಘಗಳ ಉಪನಿಬಂಧಕ ಎಚ್.ಡಿ. ರವಿಕುಮಾರ್, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪನಿರ್ದೇಶಕಿ ಎಂ.ಎನ್. ಹೇಮಾವತಿ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಶೈಲಜಾ ಭಾಗವಹಿಸಲಿದ್ದು, ಸಹಕಾರ ಯೂನಿಯನ್ ನಿರ್ದೇಶಕಿ, ಕೆಐಸಿಎಂ ನಿವೃತ್ತ ಪ್ರಾಂಶುಪಾಲೆ ಎಂ.ಎA. ಶ್ಯಾಮಲ ದಿನದ ಮಹತ್ವ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಬಲ್ಲಾರಂಡ ಮಣಿ ಉತ್ತಪ್ಪ, ವಿ.ಸಿ. ಅಮೃತ್, ಎಂ.ಟಿ. ಸುಬ್ಬಯ್ಯ, ಎಂ.ಎA. ಶ್ಯಾಮಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಹಾಜರಿದ್ದರು.