ಮಡಿಕೇರಿ, ನ. ೧೨: ನಗರದ ಗಾಂಧಿ ಮೈದಾನದಲ್ಲಿ ತೋಡಿದ್ದ ಗುಂಡಿಗೆ ಗೂಳಿಯೊಂದು ಬಿದ್ದ ಘಟನೆ ನಡೆದಿದೆ.

ದಸರಾ ಸಂದರ್ಭ ತಾತ್ಕಾಲಿಕ ಶೌಚಾಲಯಗಳಿಗೆ ಸಪ್ಟಿಕ್ ಟ್ಯಾಂಕ್ ಅನ್ನು ಗಾಂಧಿ ಮೈದಾನದಲ್ಲಿ ನಿರ್ಮಿಸಲಾಗಿತ್ತು. ದಸರಾ ಮುಗಿದ ಬಳಿಕ ಶೌಚಾಲಯ ತೆರವು ಮಾಡಲಾಯಿತು. ಆದರೆ, ಗುಂಡಿ ಮಾತ್ರ ಮುಚ್ಚದೆ ಅದರ ಮೇಲೆ ತಗಡು ಹಾಗೂ ಶೀಟ್‌ಗಳನ್ನು ಬಳಸಿ ಮುಚ್ಚಲಾಗಿತ್ತು. ಬುಧವಾರ ಬೆಳಿಗ್ಗಿನ ವೇಳೆಯಲ್ಲಿ ಬೀಡಾಡಿ ಗೂಳಿಯೊಂದು ಆಕಸ್ಮಿಕವಾಗಿ ಈ ಗುಂಡಿಗೆ ಬಿದ್ದಿದೆ. ಸ್ಥಳೀಯರು ಇದನ್ನು ಗಮನಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಹಿತ ಮಾಹಿತಿಯನ್ನು ಹಂಚಿಕೊAಡು ಅಗ್ನಿಶಾಮಕ ದಳಕ್ಕೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿಗಳು ಗೂಳಿಯನ್ನು ಮೇಲೆತ್ತಿ ರಕ್ಷಿಸಿದ್ದಾರೆ.

ಸ್ಥಳಕ್ಕೆ ನಗರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ ಭೇಟಿ ನೀಡಿ ಗುಂಡಿ ಮುಚ್ಚಲು ಕ್ರಮಕೈಗೊಂಡಿದ್ದಾರೆ. ದಸರಾ ಕಳೆದು ಹಲವು ದಿನ ಕಳೆದರೂ ಇದುವರೆಗೂ ಗುಂಡಿ ಮುಚ್ಚದ ಬಗ್ಗೆ ಜನರಿಂದ ಆಕ್ರೋಶ ವ್ಯಕ್ತವಾಯಿತು. ಮೈದಾನದಲ್ಲಿ ಆಟವಾಡುವ ಶಾಲಾ ಮಕ್ಕಳು ಗುಂಡಿಯೊಳಗೆ ಬಿದ್ದಿದ್ದಾರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.