ಭಾರತೀಯ ಮಹಿಳೆಯರ ಕ್ರಿಕೆಟ್ ತಂಡವು ನಿನ್ನೆ ಇತಿಹಾಸ ಸೃಷ್ಟಿಸಿತು. ಮೊದಲನೇ ಬಾರಿಗೆ ಏಕದಿನ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತು. ಈ ಹಿಂದಿನ ಹಲವಾರು ಅವಕಾಶಗಳ ಸಂದರ್ಭ ಕೊನೇ ಕ್ಷಣದಲ್ಲಿ ಮುಗ್ಗರಿಸಿದ್ದ ತಂಡ ಆಸ್ಟೆçÃಲಿಯಾದೊಂದಿಗಿನ ಒತ್ತಡಭರಿತ ಉಪಾಂತ್ಯ ಹಾಗೂ ದಕ್ಷಿಣಾ ಆಫ್ರಿಕಾದೊಂದಿಗಿನ ಅಂತಿಮ ಪಂದ್ಯಗಳಲ್ಲಿ ಈ ಹಿಂದೆ ಮಾಡಿದ್ದ ತಪ್ಪುಗಳನ್ನು ಸರಿಪಡಿಸಿಕೊಂಡು ಚೊಚ್ಚಲ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಈ ಮೂಲಕ ಮಹಿಳೆಯರ ವಿಶ್ವಕಪ್‌ನಲ್ಲಿ ಹೊಸ ಚಾಂಪಿಯನ್‌ಗಳು ಸೃಷ್ಟಿಯಾದವು. ನಾಯಕಿ ಹರ್ಮನ್‌ಪ್ರೀತ್ ಕೌರ್ ಪಡೆಯ ಸಾಧನೆಯನ್ನು ಸಂಭ್ರಮಿಸಲು, ೨೦೦೫ರಲ್ಲಿ ಭಾರತವನ್ನು ಅಂತಿಮ ಪಂದ್ಯಕ್ಕೆ ಕರೆದೊಯ್ದಿದ್ದ ಹಾಗೂ ಮಹಿಳಾ ಕ್ರಿಕೆಟ್ ದೇಶದಲ್ಲಿ ಪ್ರಸಿದ್ಧತೆ ಪಡೆಯಲು ರೂವಾರಿಗಳಾದ ಮಾಜಿ ನಾಯಕಿ ಅಂಜುಮ್ ಚೋಪ್ರಾ, ೨೦೧೭ರಲ್ಲಿ ಅಂತಿಮ ಪಂದ್ಯದವರೆಗೆ ಸಾಗಿಸಿದ್ದ ಮಿಥಾಲಿ ರಾಜ್ ಹಾಗೂ ಮಹಿಳೆಯರ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ ಗಳಿಸಿರುವ ಸಾಧಕಿ ಮಾಜಿ ಆಟಗಾರ್ತಿ ಜೂಲಾನ್ ಗೋಸ್ವಾಮಿ ಅವರುಗಳೂ ವಿಶ್ವಕಪ್ ಟ್ರೋಫಿಯೊಂದಿಗೆ ಸಂಭ್ರಮಿಸಿದರು.

ಮಹಿಳಾ ಹಾಗೂ ಪುರುಷ ಕ್ರಿಕೆಟ್ ಆಟಗಾರ್ತಿಯರಿಗೆ ಪ್ರತಿ ಪಂದ್ಯಕ್ಕೆ ಸಮಾನ ಸಂಬಳವನ್ನು ೨ ವರ್ಷಗಳ ಹಿಂದೆ ಘೋಷಿಸಿದ್ದ ಬಿ.ಸಿ.ಸಿ.ಐ(ಭಾರತೀಯ ಕ್ರಿಕೆಟ್ ಮಂಡಳಿ), ವಿಶ್ವಕಪ್ ವಿಜೇತರಿಗೆ ಬೃಹತ್ ಮೊತ್ತದ ಪ್ರೋತ್ಸಾಹಕ ಬಹುಮಾನವನ್ನು ನೀಡಿ ಗೌರವಿಸಿದೆ.

ಈ ಮೊತ್ತವು ಕಳೆದ ಬಾರಿ ಟಿ-೨೦ ವಿಶ್ವಕಪ್ ವಿಜೇತ ಪುರುಷರ ತಂಡಕ್ಕೆ ದೊರೆತ ಮೊತ್ತಕ್ಕಿಂತ ಕಡಿಮೆಯಿದ್ದರೂ ಟೂರ್ನಿ ವಿಜೇತರಿಗೆ ಐ.ಸಿ.ಸಿ(ಅಂತರರಾಷ್ಟಿçÃಯ ಕ್ರಿಕೆಟ್ ಮಂಡಳಿ) ನೀಡುವ ಅಧಿಕೃತ ಬಹುಮಾನಕ್ಕಿಂತ ಹೆಚ್ಚಾಗಿಯೇ ಇರುವುದು ಮಹಿಳೆಯರ ಕ್ರಿಕೆಟ್ ಜಗತ್ತಿನಲ್ಲಿ ಉತ್ತಮ ಬೆಳವಣಿಗೆಯಾಗಿದೆ. ಕಳೆದ ವಿಶ್ವಕಪ್‌ನಲ್ಲಿ ಗೆದ್ದ ಆಸ್ಟೆçÃಲಿಯಾ ತಂಡಕ್ಕೆ ಐ.ಸಿ.ಸಿ ವತಿಯಿಂದ ದೊರೆತ ಮೊತ್ತ ರೂ.೧೧.೭ ಕೋಟಿಯಷ್ಟಾಗಿತ್ತು. ಈ ಬಾರಿ ಇದು ೩ ಪಟ್ಟು ಹೆಚ್ಚಾಗಿರುವುದು ಮಹಿಳಾ ಕ್ರಿಕೆಟ್ ಜಗತ್ತಿನ ಬೆಳವಣಿಗೆ, ಅಭಿಮಾನಿಗಳು ಹಾಗೂ ಜಾಹಿರಾತುದಾರರ ಆಸಕ್ತಿಯೆ ಪರಿಣಾಮ ಎನ್ನಬಹುದು.

ಐ.ಸಿ.ಸಿ, ವಿಜೇತ ಭಾರತ ತಂಡಕ್ಕೆ ರೂ.೩೯ ಕೋಟಿ ಘೋಷಣೆ ಮಾಡಿದರೆ, ಬಿ.ಸಿ.ಸಿ.ಐ ಬರೋಬ್ಬರಿ ರೂ.೫೧ ಕೋಟಿ ಘೋಷಿಸಿದೆ. ೨೦೨೪ನಲ್ಲಿ ಪುರುಷರ ತಂಡ ಟಿ-೨೦ ವಿಶ್ವಕಪ್ ಗೆದ್ದಾಗ ಐ.ಸಿ.ಸಿ ನೀಡಿದ್ದು ರೂ.೯೯ ಕೋಟಿ, ಬಿ.ಸಿ.ಸಿ.ಐ ನೀಡಿದ್ದು ರೂ.೧೨೫ ಕೋಟಿ. ಪುರುಷರ ವಿಶ್ವಕಪ್ ಮಹಿಳೆಯರ ಟೂರ್ನಿಗಿಂತ ಜಾಹಿರಾತು ಹಾಗೂ ಪ್ರಸರಣಾ ಹಕ್ಕುಗಳ ಮೂಲಕ ಅಧಿಕ ಸಂಪಾದಿಸುವುದೇ ಇದಕ್ಕೆ ಕಾರಣ. ಅದಾಗ್ಯೂ ವೈಯಕ್ತಿಕ ಸಂಬಳ ಮಿತಿ ಇಬ್ಬರಿಗೂ ಸಮಾನವಾಗಿರುವುದು ಹಾಗೂ ಐ.ಸಿ.ಸಿಗಿಂತ ಬಿ.ಸಿ.ಸಿ.ಐ ಬಹುಮಾನ ಮೊತ್ತವೇ ಅಧಿಕವಾಗಿರುವುದು ಗಮನಾರ್ಹ.

೩೦ ಕೋಟಿ ಆನ್‌ಲೈನ್ ವೀಕ್ಷಕರು

ಅಂತಿಮ ಪಂದ್ಯ ವೀಕ್ಷಣೆಗೆ ಮುಂಬೈನ ಡಿ.ವೈ ಪಾಟಿಲ್ ಕ್ರೀಡಾಂಗಣದ ೪೫,೫೦೦ ಆಸನ ಸಾಮರ್ಥ್ಯ ಸಂಪೂರ್ಣ ಭರ್ತಿಯಾಗಿತ್ತು. ಭಾರತೀಯ ಜಿಯೋ ಹಾಟ್‌ಸ್ಟಾರ್ ಮೂಲಕ ನಿನ್ನೆಯ ಅಂತಿಮ ಪಂದ್ಯವನ್ನು ೩೦ ಕೋಟಿ ಅಭಿಮಾನಿಗಳು ವೀಕ್ಷಿಸಿ ದಾಖಲೆ ಸೃಷ್ಟಿಯಾಗಿದೆ.

ಅತ್ಯಂತ ಕಿರಿಯ ಪಂದ್ಯ ಶ್ರೇಷ್ಠ ಪುರಸ್ಕೃತೆ - ಶೆಫಾಲಿ ವರ್ಮಾ

ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ೫೦ ಓವರ್‌ಗಳಲ್ಲಿ ೭ ವಿಕೆಟ್‌ಗಳ ನಷ್ಟಕ್ಕೆ ೨೯೮ ರನ್ ಗಳಿಸಿತು. ತಂಡದ ಪರ ಶೆಫಾಲಿ ವರ್ಮಾ ೭೮ ಎಸೆತಗಳಲ್ಲಿ ೮೭ ರನ್ ಗಳಿಸಿದರು. ದೀಪ್ತಿ ಶರ್ಮಾ ೫೮, ಸ್ಮೃತಿ ಮಾಂದನ ೪೫ ರನ್‌ಗಳನ್ನು ಗಳಿಸಿದರು. ದಕ್ಷಿಣ ಆಫ್ರಿಕಾ ಪರ ನಾಯಕಿ ಲಾರಾ ಅವರು ಶತಕ ಭಾರಿಸಿದರೂ ಉಳಿದ ಆಟಗಾರ್ತಿಯರು ಅವರಿಗೆ ಸಾತ್ ನೀಡದಿದ್ದ ಕಾರಣ ತನ್ನ ಮೊದಲ ವಿಶ್ವಕಪ್ ಫೈನಲ್‌ನಲ್ಲಿ ೨೪೬ ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ದಕ್ಷಿಣ ಆಫ್ರಿಕಾವು ೫೨ ರನ್‌ಗಳಿಂದ ಭಾರತಕ್ಕೆ ಸೋಲೊಪ್ಪಿಕೊಂಡಿತು.

ಕೇವಲ ೨೧ರ ಹರೆಯದ ಶೆಫಾಲಿ ವರ್ಮಾ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿ ವಿಶ್ವಕಪ್ ಅಂತಿಮ ಪಂದ್ಯಗಳ ಇತಿಹಾಸದಲ್ಲಿ ಅತ್ಯಂತ ಕಿರಿಯ ಪಂದ್ಯ ಶ್ರೇಷ್ಠ ಪ್ರಶಸ್ತಿ ವಿಜೇತೆಯಾಗಿ ಹೊರಹೊಮ್ಮಿದರು. ಟೂರ್ನಿಯಲ್ಲಿ ೨೧೫ ರನ್‌ಗಳನ್ನು ಗಳಿಸಿ ೨೨ ವಿಕೆಟ್‌ಗಳನ್ನು ಕಬಳಿಸಿದದೀಪ್ತಿ ಶರ್ಮಾ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. - ಪ್ರಜ್ವಲ್