ಮಡಿಕೇರಿ, ಅ. ೨೮ : ಯೋಗಾಸನದಲ್ಲಿ ಈಗಾಗಲೇ ದಾಖಲೆ ಮಾಡಿರುವ ಮದೆನಾಡು ಬಿಜಿಎಸ್ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಸಿಂಚನ ಇಂದು ಮತ್ತೆ ಮೂರು ದಾಖಲೆಗಳನ್ನು ಸೃಷ್ಟಿಸಿದ್ದಾಳೆ. ಖಂಡ ಏಡಾಸನ, ಡಿಂಬಾಸನ, ಧನುರಾಸನಗಳಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾಡ್ ಮಾಡಿದ್ದಾರೆ. ಮದೆನಾಡಿನ ಬಿಜಿಎಸ್ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದ್ದ ವಿಶ್ವದಾಖಲೆಯ ಪ್ರದರ್ಶನ ಕಾರ್ಯಕ್ರಮದಲ್ಲಿ ಖಂಡಪೀಡಾಸನದಲ್ಲಿ ಸ್ಥಿರವಾಗಿ ಒಂದು ನಿಮಿಷ ನಲವತ್ತನಾಲ್ಕು ಸೆಕೆಂಡ್‌ಗಳ ಕಾಲ ನಿಲ್ಲುವುದರೊಂದಿಗೆ, ಡಿಂಬಾಸನದಲ್ಲಿ ಒಂದು ನಿಮಿಷದ ಅವಧಿಯಲ್ಲಿ ಹತ್ತು ಸುತ್ತು ಬಂದು, ಧನುರಾಸನದಲ್ಲಿ ಒಂದು ನಿಮಿಷದಲ್ಲಿ ಹದಿನೈದು ಸುತ್ತು ತಿರುಗುವ ಮೂಲಕ ಸಿಂಚನ ದಾಖಲೆ ನಿರ್ಮಿಸಿದಳು. ಏಷ್ಯಾ ಹೆಡ್‌ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನ ಮುಖ್ಯ ತೀರ್ಪುಗಾರ ಡಾ. ಮನೀಶ್ ವೈಷ್ನೋಯಿ ಸಿಂಚನಳ ಈ ಮೂರು ದಾಖಲೆಗಳನ್ನು ದೃಢೀಕರಿಸಿ ಪದಕ ಹಾಗೂ ಪ್ರಮಾಣ ಪತ್ರ ನೀಡಿದರು. ಮಡಿಕೇರಿ ಶಾಸಕ ಡಾ. ಮಂತರ್‌ಗೌಡ, ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ವೈಯಕ್ತಿವಾಗಿ ಸಿಂಚನಳಿಗೆ ತಲಾ ೪ನಾಲ್ಕನೇ ಪುಟಕ್ಕೆ ೨೫ ಸಾವಿರ ರೂ.ಗಳನ್ನು ಬಹುಮಾನವಾಗಿ ನೀಡಿ ಪ್ರೋತ್ಸಾಹಿಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಆದಿಚುಂಚನಗಿರಿ ಮಠದ ಪೀಠಾಧೀಶರಾದ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಮಾತನಾಡಿ, ಸಿಂಚನಳ ಸಾಧನೆ ಹೀಗೆಯೆ ಮುಂದುವರೆಯಲಿ, ದೀರ್ಘಕಾಲದ ಅಭ್ಯಾಸದಿಂದ ಮಾತ್ರ ಸಿದ್ಧಿಪ್ರಾಪ್ತಿಯಾಗುತ್ತದೆ ಎಂದು ಹೇಳಿದರು. ಯೋಗ ನಮ್ಮನ್ನು ನಾವು ಕಂಡುಕೊಳ್ಳಲು ಇರುವ ಸೂತ್ರವಾಗಿದ್ದು, ಮನಸ್ಸಿನಲ್ಲಿರುವ ಕ್ಲೇಷಗಳನ್ನು ಹೊರಹಾಕಲು ಯೋಗ ಸಹಕಾರಿ ಎಂದರಲ್ಲದೆ ಯೋಗವನ್ನು ಭಾರತ ವಿಶ್ವಕ್ಕೆ ಕಾಣಿಕೆಯಾಗಿ ನೀಡಿದೆ ಎಂದು ಹೇಳಿದರು.
ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಮಾತನಾಡಿ, ಸಿಂಚನಳ ಸಾಧನೆ ಹೆಮ್ಮೆ ತರುವಂತಹ ವಿಚಾರವಾಗಿದೆ. ಆಕೆಯ ಸಾಧನೆ ಹಿಂದೆ ಬಹಳಷ್ಟು ಶ್ರಮವಿದೆ. ಪೋಷಕರ ಬೆಂಬಲ, ಗುರುಗಳ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ. ಇಂತಹ ಸಾಧನೆಗೆ ಪ್ರತಿಯೊಬ್ಬರು ಪ್ರೋತ್ಸಾಹ ನೀಡುವಂತಾಗಬೇಕೆAದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಸಿಂಚನಳ ಸಾಧನೆ ಎಲ್ಲರಿಗೂ ಮಾದರಿಯಾಗಬೇಕು. ಯೋಗಾಭ್ಯಾಸದಿಂದ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಯೋಗದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕೆಂದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜು ಮಾತನಾಡಿ, ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪೋಷಕರು ಪ್ರೋತ್ಸಾಹ ನೀಡುವಂತಾಗಬೇಕು. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೆ ಜವಾಬ್ದಾರಿ ಪೋಷಕರಿಗೂ ಇರಬೇಕು ಎಂದ ಅವರು ಶಿಕ್ಷಕರು ಮಕ್ಕಳಿಗೆ ಉತ್ತಮ ಮಾರ್ಗದರ್ಶಕರಾಗಬೇಕೆಂದರು.
ಏಷ್ಯಾ ಹೆಡ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನ ಮುಖ್ಯ ತೀರ್ಪುಗಾರ ಡಾ. ಮನೀಶ್ ವೈಷ್ನೋಯಿ ಮಾತನಾಡಿ, ಮಕ್ಕಳ ಸಾಧನೆಗೆ ಪೋಷಕರ ಪ್ರೋತ್ಸಾಹ ಹಾಗೂ ಬೆಂಬಲ ಅತ್ಯಗತ್ಯ ಎಂದರು.
ಯೋಗ ಗುರು ಕೆ.ಕೆ. ಮಹೇಶ್ ಕುಮಾರ್ ಮಾತನಾಡಿ, ಯೋಗಾ ಜಗತ್ತಿಗೆ ಬೆಳಕಾಗಿದ್ದು, ಶರೀರ ಹಾಗೂ ಮನಸ್ಸಿನ ಆರೋಗ್ಯಕ್ಕೆ ಯೋಗ ಸಹಕಾರಿ ಎಂದರು.
ವೇದಿಕೆಯಲ್ಲಿ ಸಾನ್ನಿಧ್ಯವನ್ನು ಮೈಸೂರು ಕೊಡಗು ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ವಹಿಸಿದ್ದರು. ಅತಿಥಿಗಳಾಗಿ ಮದೆ ಪಿ.ಯು. ಕಾಲೇಜಿನ ಅಧ್ಯಕ್ಷ ಹುದೇರಿ ರಾಜೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಸಿಂಚನಳ ಪೋಷಕರಾದ ಮದೆನಾಡು ಬೆಳಕುಮಾನಿಯ ಕೀರ್ತಿಕುಮಾರ್, ರೇಣುಕಾ ಉಪಸ್ಥಿತರಿದ್ದರು.
ಕೊಡಗು ಗೌಡ ಸಮಾಜ, ಕೊಡಗು ಗೌಡ ವಿದ್ಯಾಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸಿಂಚನಗಳನ್ನು ಸನ್ಮಾನಿಸಿ ಗೌರವಿಸಿದವು. ಶಾಲಾ ಆಡಳಿತಾಧಿಕಾರಿ ಸುಧಾಕರ್, ಉಸ್ತುವಾರಿ ಸಚಿನ್ ಸೇರಿದಂತೆ ಶಿಕ್ಷಕರು, ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಜರಿದ್ದರು.
ವಿದ್ಯಾರ್ಥಿನಿ ಪುಣ್ಯಶ್ರೀ ತಂಡ ಪ್ರಾರ್ಥಿಸಿ, ಶಿಕ್ಷಕರಾದ ಪಿ.ಜಿ. ಸವಿತ ನಿರೂಪಿಸಿದರು. ಪವಿತ್ರ ಕುಮಾರನ್ ಸ್ವಾಗತಿಸಿ, ಜಯಶ್ರೀ ವಂದಿಸಿದರು