ಬೆಂಗಳೂರು, ಅ.೨೮: ಸರ್ಕಾರಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘಟನೆಗಳು ಯಾವುದೇ ಚಟುವಟಿಕೆಗಳನ್ನು ನಡೆಸಲು ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಇತ್ತೀಚಿಗೆ ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ಧಾರವಾಡ ಉಚ್ಚ ನ್ಯಾಯಾಲಯ ಮಂಗಳವಾರ ತಡೆ ನೀಡಿದ್ದು, ಸರ್ಕಾರಕ್ಕೆ ಹಿನ್ನಡೆಯಾಗಿದೆ. ಈ ತಡೆಯಾಜ್ಞೆ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.
ಸರ್ಕಾರಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘಟನೆಗಳು ಯಾವುದೇ ಚಟುವಟಿಕೆಗಳನ್ನು ನಡೆಸಲು ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಇತ್ತೀಚಿಗೆ ಆದೇಶ ಹೊರಡಿಸಿತ್ತು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸುವಂತೆ ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಧಾರವಾಡ ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠ ತಡೆಯಾಜ್ಞೆ ನೀಡಿದೆ. ಈ ಆದೇಶದ ವಿರುದ್ಧ ನಾವು ಮೇಲ್ಮನವಿ ಸಲ್ಲಿಸುತ್ತೇವೆ’ ಎಂದು ತಿಳಿಸಿದರು.
ಖಾಸಗಿ ಸಂಸ್ಥೆಗಳು, ಸಂಘಟನೆಗಳು ಮತ್ತು ಗುಂಪುಗಳು ತಮ್ಮ ಚಟುವಟಿಕೆಗಳಿಗೆ ಸರ್ಕಾರಿ ಆಸ್ತಿ ಅಥವಾ ಸಾರ್ವಜನಿಕ ಸ್ಥಳಗಳನ್ನು ಬಳಸುವ ಮೊದಲು ಅನುಮತಿ ಪಡೆಯಬೇಕೆಂದು ಸರ್ಕಾರ ಅಕ್ಟೋಬರ್ ೧೮ ರಂದು ಆದೇಶ ಹೊರಡಿಸಿತ್ತು. ೪£ (ಮೊದಲ ಪುಟದಿಂದ)
ಈ ಹಿಂದೆ ಸರ್ಕಾರ ಹೊರಡಿಸಿರುವ ಆದೇಶವು ನಿರ್ದಿಷ್ಟವಾಗಿ ಆರ್‌ಎಸ್‌ಎಸ್ ಅನ್ನು ಹೆಸರಿಸದಿದ್ದರೂ, ಹಿಂದೂ ಬಲಪಂಥೀಯ ಸಂಘಟನೆಯ ಚಟುವಟಿಕೆಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಆರ್.ಎಸ್.ಎಸ್. ಚಟುವಟಿಕೆಗಳನ್ನು ನಿಷೇಧಿಸುವಂತೆ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರವನ್ನು ಅನುಸರಿಸಿ ಇತ್ತೀಚೆಗೆ ನಡೆದ ಸಚಿವ ಸಂಪುಟದ ನಿರ್ಧಾರದ ಆಧಾರದ ಮೇಲೆ ಸರ್ಕಾರ ಈ ಆದೇಶ ಹೊರಡಿಸಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಹುಬ್ಬಳ್ಳಿಯ ‘ಪುನಃಶ್ಚೇತನ ಸೇವಾ ಸಂಸ್ಥೆ’ಯ ಅಧ್ಯಕ್ಷ , ವಿನಾಯಕ ಮತ್ತು ವಿ ಕೇರ್ ಫೌಂಡೇಶನ್ ಅಧ್ಯಕ್ಷ ಗಂಗಾಧರಯ್ಯ, ಧಾರವಾಡದ ರಾಜೀವ ಮಲ್ಹಾರ ಕುಲಕರ್ಣಿ ಹಾಗೂ ಬೆಳಗಾವಿಯ ಉಮಾ ಸತ್ಯಜಿತ್ ಚೌಹಾಣ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ಬೆಳಿಗ್ಗೆ ವಿಚಾರಣೆ ನಡೆಸಿತು. ಸಂವಿಧಾನದ ೧೯ (೧)ಎ.ಬಿ. ವಿಧಿಯಡಿ ನೀಡಿರುವ ಹಕ್ಕನ್ನು ಸರ್ಕಾರ ಕಸಿದಿದೆ. ಸಂವಿಧಾನ ನೀಡಿರುವ ಹಕ್ಕನ್ನು ಸರ್ಕಾರಿ ಆದೇಶದ ಮೂಲಕ ಕಸಿಯಲಾಗದು. ಹೀಗಾಗಿ, ಸರ್ಕಾರದ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ಆದೇಶಿಸಿದ ನ್ಯಾಯಾಲಯ ವಿಚಾರಣೆ ಮುಂದೂಡಿಕೆ ಮಾಡಿದೆ. ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಬೇಕು ಎಂದು ಅಡ್ವ್ವೊಕೇಟ್ ಜನರಲ್‌ಗೆ ಕೋರ್ಟ್ ಕಾಲಾವಕಾಶ ನೀಡಿದೆ. ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದರು. “ಹತ್ತು ಜನಕ್ಕಿಂತ ಹೆಚ್ಚು ಮಂದಿ ಸೇರಿದಂತೆ ಅನುಮತಿ ಪಡೆಯಬೇಕು” ಎಂದು ಸರ್ಕಾರ ಆದೇಶಿಸಿದೆ. ಇದು ಸಂವಿಧಾನದತ್ತವಾಗಿ ಲಭ್ಯವಾಗಿರುವ ಮೂಲಭೂತ ಹಕ್ಕಿಗೆ ನಿರ್ಬಂಧವಾಗಿದೆ. ಪಾರ್ಕ್ನಲ್ಲಿ ನಗೆಕೂಟ ನಡೆಸಿದರೂ ಸರ್ಕಾರದ ಆದೇಶದ ಪ್ರಕಾರ ಅಕ್ರಮ ಕೂಟವಾಗುತ್ತದೆ ಎಂದು ವಕೀಲರು ಪೀಠದ ಗಮನಕ್ಕೆ ತಂದರು. ಆರ್.ಎಸ್.ಎಸ್. ಚಟುವಟಿಕೆಗಳಿಗೆ ನಿರ್ಬಂಧ ವಿಧಿಸುವ ಭಾಗವಾಗಿ ಸರ್ಕಾರಿ ಸ್ಥಳಗಳಲ್ಲಿ ಅನುಮತಿಯಿಲ್ಲದೇ ಮೆರವಣಿಗೆ, ಸಭೆ ನಡೆಸುವ ಸಂಬAಧ ಹತ್ತು ಜನಕ್ಕಿಂತ ಹೆಚ್ಚು ಮಂದಿ ಸೇರಿದರೆ ಅಕ್ರಮ ಕೂಟ ಎಂದು ಸರಕಾರ ಆದೇಶಿತ್ತು. ಈ ಮೂಲಕ ಸರ್ಕಾರವು ಪೊಲೀಸ್ ಕಾಯಿದೆಯಡಿ ಅಧಿಕಾರ ಚಲಾಯಿಸಿತ್ತು.
ಈ ಹಿನ್ನೆಲೆೆ ರಾಜ್ಯ ಸರ್ಕಾರ, ಗೃಹ ಇಲಾಖೆ ಮತ್ತು ಹುಬ್ಬಳ್ಳಿ ಆಯುಕ್ತರಿಗೆ ಉಚ್ಚ ನ್ಯಾಯಾಲಯ ಇದೀಗ ನೋಟಿಸ್ ಜಾರಿ ಮಾಡಿದೆ. ಖಾಸಗಿ ಸಂಘಟನೆಗಳ ನಿರ್ಬಂಧ ಕುರಿತ ಸರ್ಕಾರದ ತೀರ್ಮಾನ ಹಿನ್ನೆಲೆ ಆರ್.ಎಸ್. ಎಸ್. ಪಥ ಸಂಚಲನಗಳಿಗೆ ತೊಡಕಾಗಿತ್ತು. ಜಿಲ್ಲಾಧಿಕಾರಿ ಅಥವಾ ಸ್ಥಳೀಯ ಆಡಳಿತದ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಮಂಗಳವಾರ ಸರ್ಕಾರದ ತೀರ್ಮಾನಕ್ಕೆ ನ್ಯಾಯಾಲಯ ತಡೆನೀಡಿದ ಬೆನ್ನಲ್ಲೇ ಆರ್‌ಎಸ್‌ಎಸ್ ಪಥ ಸಂಚಲನಗಳಿಗೆ ಸದ್ಯಕ್ಕೆ ಹಸಿರು ನಿಶಾನೆ ಸಿಕ್ಕಂತಾಗಿದೆ.
ಕಲ್ಬುರ್ಗಿಯಲ್ಲಿ ಗೊಂದಲ
ಈ ನಡುವೆ ಚಿತ್ತಾಪುರದಲ್ಲಿ ಆರ್.ಎಸ್.ಎಸ್. ಪಥಸಂಚಲನಕ್ಕೆ ಅನುಮತಿ ಕೊಡುವ ನಿಟ್ಟಿನಲ್ಲಿ ಈ ಹಿಂದೆ ರಾಜ್ಯ ಉಚ್ಚ ನ್ಯಾಯಾಲಯ ಪೀಠದ ನಿರ್ದೇಶನದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಂತಿ ಸಭೆ ಏರ್ಪಟ್ಟಿತ್ತು. ಜಿಲ್ಲಾಧಿಕಾರಿ ನೀಡಿದ ನೋಟಿಸಿನಂತೆ ಒಟ್ಟು ೧೦ ಸಂಘಟನೆಗಳ ತಲಾ ಮೂರು ಪ್ರತಿನಿಧಿಗಳನ್ನು ಪೊಲೀಸರು ಹೆಸರು ಪರಿಶೀಲನೆ ಮಾಡಿ ಒಳಗೆ ಬಿಡುತ್ತಿದ್ದರು. ಈ ವೇಳೆ ಪೊಲೀಸರು ಹಾಗೂ ಸಂಘಟನೆಯವರ ಮಧ್ಯೆ ವಾಗ್ವಾದ ನಡೆದಿದೆ. ಜೈ ಭೀಮ್ ಆರ್ಮಿ ಎಂಬ ಸಂಘಟನೆಯ ಅಧ್ಯಕ್ಷ, ಗುಂಡಪ್ಪ ಎಂಬವರು ನಮಗೂ ಶಾಂತಿ ಸಭೆಯಲ್ಲಿ ಭಾಗವಹಿಸಲು ಅವಕಾಶ ಕೊಡಿ ಎಂದು ಆಗ್ರಹಿಸಿದರು. ಡಿಸಿ ಅವರಿಂದ ಆಹ್ವಾನ ಇಲ್ಲದಿರುವ ಕಾರಣ ಅವರನ್ನು ಒಳಗೆ ಬಿಡಲು ಸಾಧ್ಯವಿಲ್ಲ ಎಂದು ಪೊಲೀಸರು ತಡೆ ಒಡ್ಡಿದಾಗ, ಜೈ ಭೀಮ್ ಸಂಘಟನೆಯವರು ನಾವು ನಿನ್ನೆಯಷ್ಟೇ ಅರ್ಜಿ ಹಾಕಿದ್ದೇವೆ, ನಮಗೂ ಅವಕಾಶ ಕೊಡಿ ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಯವರು ಭಾನುವಾರವೇ ೧೦ ಸಂಘಟನೆಗಳಿಗೆÉ ನೋಟಿಸ್ ನೀಡಿದ್ದರು. ಆದರೆ ನಿನ್ನೆ ಮತ್ತೆ ೨ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಅವರಿಗೆ ಆಹ್ವಾನವೂ ಇರಲಿಲ್ಲ. ಆದರೆ ಅರ್ಜಿ ಸಲ್ಲಿಕೆ ಮಾಡಿಯೂ ಅವಕಾಶ ನೀಡಿಲ್ಲ ಎಂದು ಸಭೆಗೆ ಹೋಗಲು ಮುಂದಾದಾಗ, ಪೊಲೀಸರು ತಡೆದಾಗ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಅಲ್ಲದೆ, ಕೆಲವು ಸಂಘಟನೆಗಳು ಆರ್‌ಎಸ್‌ಎಸ್ ಲಾಠಿ ಹಿಡಿಯದೇ ಪಥ ಸಂಚಲನ ನಡೆಸಬೇಕೆಂದು ಒತ್ತಾಯಿಸಿದಾಗ ಆರ್‌ಎಸ್‌ಎಸ್ ಪ್ರತಿನಿಧಿಗಳು ಅದಕ್ಕೆ ಒಪ್ಪಲಿಲ್ಲ. ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದೆ ಗೊಂದಲದ ಬಳಿಕ ಮುಂದೂಡಲ್ಪಟ್ಟಿತು.