ಶ್ರೀಮಂಗಲ, ಅ. ೨೮: ಕಾವೇರಿ ಚಂಗ್ರಾAದಿ (ತುಲಾ ಸಂಕ್ರಮಣ)ಯ ಅಂಗವಾಗಿ ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿಯಲ್ಲಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ೯ ವರ್ಷದ ಪತ್ತಲೋದಿ ಸಂಭ್ರಮಕ್ಕೆ ಸೋಮವಾರ ರಾತ್ರಿ ವೈಭವಯುತ ತೆರೆಬಿದ್ದಿತು. ಕಾವೇರಿ ತೀರ್ಥೋದ್ಭವದ ಮರುದಿನ ತೀರ್ಥಪೂಜೆ, ತೀರ್ಥ ವಿತರಣೆಯೊಂದಿಗೆ ಕಳೆದ ಹಲವು ವರ್ಷಗಳಿಂದ ಹತ್ತು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ, ಸಭೆ-ಸಮಾರಂಭ, ಸನ್ಮಾನ, ಪ್ರತಿದಿನ ಆಗಮಿಸುವ ಜನರಿಗೆ ಕಾಫಿ-ತಿಂಡಿಯ ವ್ಯವಸ್ಥೆ, ರಾತ್ರಿ ಊಟೋಪಚಾರ ಸಹಿತವಾಗಿ ಟಿ. ಶೆಟ್ಟಿಗೇರಿಯ ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜ ಈ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದ್ದು, ಈ ವರ್ಷವೂ ಉತ್ತಮ ಯಶಸ್ಸು ಕಂಡಿತು.

ಕೊಡವ ಸಮಾಜದ ಮೂಲಕ ನಡೆಯುವ ಈ ವಿಶೇಷ ಕಾರ್ಯಕ್ರಮಕ್ಕೆ ಶ್ರೀ ಪೆರುಮಾಳೇಶ್ವರ ಆಟೋ ಮಾಲೀಕ-ಚಾಲಕರ ಸಂಘ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಹಾಗೂ ಸಾಂಸ್ಕೃತಿಕ ಸಂಸ್ಥೆ ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಹಾಗೂ ಕೊಡವ ತಕ್ಕ್ ಎಳ್ತ್ಕಾರಡ ಕೂಟ ಸಹಕಾರ ನೀಡಿದ್ದವು. ಕಳೆದ ೯ ದಿನಗಳ ಕಾಲ ಸ್ಥಳೀಯ ವ್ಯಾಪ್ತಿಯ ಸಂಘ ಸಂಸ್ಥೆಗಳು, ಸುತ್ತಮುತ್ತಲ ಗ್ರಾಮದ ಸಂಘಟನೆಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಿದ್ದು, ಅಂತಿಮ ದಿನವಾದ ನಿನ್ನೆ ಟಿ. ಶೆಟ್ಟಿಗೇರಿಯ ರೂಟ್ಸ್ ಶಾಲೆಯ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ವೈಭವ ಹಾಗೂ ಜಾಗೃತಿ ಸಂದೇಶ ಸಾರುವ ಕಾರ್ಯಕ್ರಮಗಳನ್ನು ನೀಡಿದರು. ಅಧಿಕ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದು, ರಾತ್ರಿ ಈ ವರ್ಷದ ಕಾರ್ಯಕ್ರಮ ವೈಭವಯುತ ತೆರೆಕಂಡಿತು. ಅತಿಸೂಕ್ಷö್ಮ ಹಾಗೂ ಅಲ್ಪಸಂಖ್ಯಾತ ಕೊಡವ ಜನಾಂಗದ ಭಾಷೆ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಡವ ಸಮಾಜ, ಸಂಘ ಸಂಸ್ಥೆಗಳು, ಅಕಾಡೆಮಿ ಪ್ರಯತ್ನದ ನಡುವೆ ಬೆಳವಣಿಗೆ ಕಾಣುತ್ತಿದೆ, ಆದರೆ ಇದರ ನಡುವೆ ಕೊಡವರು ತಮ್ಮ ಮಣ್ಣನ್ನು ಮಾರಾಟ ಮಾಡದೇ ಉಳಿಸಿಕೊಳ್ಳಬೇಕು ಹಾಗೂ ಜನಸಂಖ್ಯೆ ವೃದ್ಧಿಗೆ ಗಂಭೀರವಾದ ಚಿಂತನೆ ಅಗತ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆದ ಒಂಬತ್ತನೇ ವರ್ಷದ ಪತ್ತಲೋದಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕೊಡವ ಸಮಾಜಗಳು, ಸಂಘ ಸಂಸ್ಥೆ ಕೊಡವರ ಹಿತಾಸಕ್ತಿ (ಮೊದಲ ಪುಟದಿಂದ) ಕಾಪಾಡಲು ಕೆಲಸ ಮಾಡುತ್ತಿವೆ ಆದರೆ ಸಣ್ಣ ಸಣ್ಣ ಬಿನ್ನಾಭಿಪ್ರಾಯ ಬಂದರೆ ಅದನ್ನು ವೇದಿಕೆಯಲ್ಲಿ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕೇ ಹೊರತು, ಯಾವುದೇ ರೀತಿಯಲ್ಲಿ ಸಂಘರ್ಷದ ಹಾದಿ ತುಳಿಯಬಾರದು ಎಂದು ಕಿವಿಮಾತು ಹೇಳಿದ ಅವರು ಈಚೆಗೆ ಅಖಿಲ ಕೊಡವ ಸಮಾಜದ ಸಭೆಯಲ್ಲಿ ಉಂಟಾದ ಅಹಿತಕರ ಘಟನೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸಿದರು.

ಅಖಿಲ ಕೊಡವ ಸಮಾಜ ಹಾಗೂ ೩೫ ಕೊಡವ ಸಮಾಜಗಳು, ಸಂಘ ಸಂಸ್ಥೆಗಳು, ಲೇಖಕರ ಅಭಿಪ್ರಾಯದೊಂದಿಗೆ ಮತ್ತು ನಮ್ಮ ಜನಾಂಗದ ಇತಿಹಾಸದ ದಾಖಲೆಗಳನ್ನು ಅಧ್ಯಯನ ಮಾಡಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೇ ಹೊರತು ಸಂಘರ್ಷದ ಹಾದಿ ಸರಿಯಲ್ಲ ಎಂದ ಅವರು, ಇನ್ನು ಮುಂದೆ ಇಂತಹ ಘಟನೆ ನಡೆಯಬಾರದು ಎಂದರು. ಅವರು ಟಿ. ಶೆಟ್ಟಿಗೇರಿ ಕೊಡವ ಸಮಾಜ ಕಳೆದ ೯ ವರ್ಷದಿಂದ ಹಮ್ಮಿಕೊಂಡಿರುವ ಪತ್ತಲೋದಿ ಕಾರ್ಯಕ್ರಮ ಜನಪ್ರಿಯವಾಗಿದೆ. ಕೊಡವ ಸಂಸ್ಕೃತಿ ರಕ್ಷಣೆ, ಜನಾಂಗದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕೊಡವ ಸಮಾಜ ಸಂಘ ಸಂಸ್ಥೆ ಕೆಲಸ ಮಾಡಬೇಕು ಎಂದರು.

ಮತ್ತೋರ್ವ ಅತಿಥಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಗುಡ್ಡಗಾಡು ಪ್ರದೇಶದಲ್ಲಿ ತಮ್ಮ ನಾಗರಿಕತೆ ಹಾಗೂ ಬದುಕನ್ನು ಕಂಡುಕೊAಡ ಒಂದು ವಿಶೇಷ ಜನಾಂಗ ಕೊಡವರಾಗಿದ್ದು, ಇತರ ಜನಾಂಗ ಮತ್ತು ಧರ್ಮಕ್ಕಿಂತ ತಮ್ಮ ಸಂಸ್ಕೃತಿ, ಆಚರಣೆಗಳು ವಿಭಿನ್ನವಾಗಿರುವ ಪರಂಪರೆಯನ್ನು ಹೊಂದಿರುವ ಜನಾಂಗವಾಗಿದೆ. ಪ್ರಮುಖ ಹಬ್ಬಗಳಾದ ಕೈಲ್‌ಪೋಳ್ದ್ನಲ್ಲಿ ನಾವು ಆಯುಧಪೂಜೆ ಮಾಡುತ್ತೇವೆ, ಕಾವೇರಿ ಚಂಗ್ರಾAದಿ ಹಬ್ಬದಲ್ಲಿ ‘ತೋಟ ಗದ್ದೆ ಜಾನುವಾರು ಇತ್ಯಾದಿ ವಿಚಾರದಲ್ಲಿ ಏನೇ ಹಗೆತನ ಜಗಳ ಇದ್ದರೂ ಕಾವೇರಿ ಮಾತೆಯನ್ನು ಪೂಜಿಸಿ ಹತ್ತು ದಿನ ಪತ್ತಲೋದಿವರೆಗೆ ನೆರೆ ಕರೆ ಊರಿನವರು ಮನೆಗೆ ಮನೆಗೆ ಹೋಗಿ ಕಾಲು ಹಿಡಿಯುವ ಸಂಸ್ಕೃತಿಯೊAದಿಗೆ ಹಿರಿಯರ ಆಶೀರ್ವಾದ ಪಡೆಯುವ ಮೂಲಕ ಅಲ್ಲಿಗೆ ಹಿಂದಿನ ಎಲ್ಲಾ ಜಗಳ ಬಿನ್ನಾಭಿಪ್ರಾಯ ಮುಗಿಸಿಕೊಳ್ಳುತ್ತೇವೆ. ಹಾಗೆ ಪುತ್ತರಿ ಹಬ್ಬದಲ್ಲಿ ಹೊಸ ಬೆಳೆಯನ್ನು ಮನೆಗೆ ಸ್ವಾಗತಿಸುವ ಸುಗ್ಗಿ ಹಬ್ಬವಾಗಿದೆ ಎಂದು ಹಬ್ಬದ ವಿಶೇಷತೆಗಳ ಬಗ್ಗೆ ವಿವರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿ. ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬುಲೀರ ಹರೀಶ್ ಅಪ್ಪಯ್ಯ ಅವರು ೧೦ ದಿನದ ಕಾರ್ಯಕ್ರಮ ಯಶಸ್ಸು ಕಂಡಿದೆ. ಪ್ರತಿ ವರ್ಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಾಂಸ್ಕೃತಿಕ ಸಮಿತಿ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಮುಂದಿನ ವರ್ಷ ೧೦ನೇ ವರ್ಷದ ಕಾರ್ಯಕ್ರಮವಿದ್ದು, ಕೊಡವಾಮೆಗೆ ಉತ್ತಮ ಸಂದೇಶ ನೀಡುವ ಕಾರ್ಯಕ್ರಮ ನೀಡುವಂತೆ ಕೋರಿದರು. ೧೦ ದಿನದ ಕಾರ್ಯಕ್ರಮದಲ್ಲಿ ಪ್ರತಿದಿನ ನೂರಾರು ಜನರು ಪಾಲ್ಗೊಂಡಿದ್ದು ಅವರಿಗೆಲ್ಲರಿಗೂ ಊಟದ ವ್ಯವಸ್ಥೆ, ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ಮಚ್ಚಮಾಡ ಸುಮಂತ್ ಅವರು ಮಾತನಾಡಿ, ೧೯೮೪ರಲ್ಲಿ ತುಂಬಾ ಆರ್ಥಿಕ ಕಷ್ಟವಿದ್ದ ಕಾಲದಲ್ಲಿ ನಮ್ಮ ಹಿರಿಯರು ಈ ಕೊಡವ ಸಮಾಜವನ್ನು ಸ್ಥಾಪನೆ ಮಾಡಲು ಮುಂದಾದರು. ನಂತರ ನ್ಯಾಯ ಪೀಠವನ್ನು ಸಹ ಸ್ಥಾಪನೆ ಮಾಡಲಾಯಿತು. ನಂತರದಲ್ಲಿ ಬಹಳಷ್ಟು ಆರ್ಥಿಕ ಸಂಕಷ್ಟದೊAದಿಗೆ ಬಹಳಷ್ಟು ದಾನಿಗಳ ನೆರವಿನಿಂದ ಹಿರಿಯರ ಶ್ರಮ ಸೇವೆಯೊಂದಿಗೆ ಟಿ. ಶೆಟ್ಟಿಗೇರಿ ಕೊಡವ ಸಮಾಜದ ಬೆಳೆದು ಬಂದ ದಾರಿಯನ್ನು ಅವರು ಸ್ಮರಿಸಿದರು.

ಸಮಾಜದ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ಅವರು ಮಾತನಾಡಿ, ಸ್ಥಳೀಯವಾಗಿ ಕೊಡವರ ಆರ್ಥಿಕ ಸಂಪನ್ಮೂಲ ಹಾಗೂ ನೇತೃತ್ವದಲ್ಲಿ ಇಂತಹ ಹಬ್ಬಗಳು ಯಶಸ್ವಿಯಾಗಿ ನಡೆಸುತ್ತಾ ಬರಲಾಗುತ್ತಿತ್ತು. ಆದರೆ ನಮ್ಮ ಮಣ್ಣಿಗೆ ಸಂಬAಧಪಟ್ಟ ಹಬ್ಬಗಳನ್ನು ನಾವು ಆಚರಣೆ ಮಾಡದೆ ಕಳೆಗುಂದುತ್ತಿದ್ದವು, ಈ ಹಿನ್ನೆಲೆಯಲ್ಲಿ ಕೊಡವ ಭಾಷೆ, ಸಂಸ್ಕೃತಿ ಆಚರಣೆಗಳಿಗೆ ಮತ್ತು ಕಲೆ ಜನಪದಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಚಂಗ್ರಾAದಿ ಪತ್ತಲೋದಿ ಎಂಬ ಕಾರ್ಯಕ್ರಮವನ್ನು ಒಂಬತ್ತು ವರ್ಷಗಳ ಹಿಂದೆ ಆರಂಭ ಮಾಡಿ ಎಲ್ಲರ ಸಹಕಾರದಿಂದ ಇದೀಗ ಯಶಸ್ವಿಯಾಗಿ ನಡೆಯುತ್ತಿದೆ. ಆರಂಭದ ದಿನಗಳಲ್ಲಿ ನಮಗೆ ೧೦ ದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಕಷ್ಟವಾಗುತ್ತಿತ್ತು. ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ತಂಡಗಳು ಸಿಗುತ್ತಿರಲಿಲ್ಲ. ಆದರೆ ಈಗ ವೇದಿಕೆ ನೀಡಲು ಸಾಧ್ಯವಾಗದಷ್ಟು ತಂಡಗಳು ಬರುತ್ತವೆ.

ಸಂಭ್ರಮ ಮಹಿಳಾ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ತೀತಿರ ಲೀನಾ ಸತೀಶ್ ಅವರು ಮಾತನಾಡಿ, ಕೊಡವ ಹಬ್ಬ- ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ತಾಯಿ ತಂದೆ ಕಳಿಸಬೇಕು. ಇಂತಹ ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆತಂದಾಗ ಅವರಿಗೆ ಅಭಿಮಾನ ಮೂಡುತ್ತದೆ ಎಂದು ಹೇಳಿದರು ಈ ಸಂದರ್ಭ ಕೊಡವ ಜಾನಪದ ಕಲೆಗೆ ಸೇವೆಸಲ್ಲಿಸಿರುವುದನ್ನು ಪರಿಗಣಿಸಿ ಮಲ್ಲಮಾಡ ಶ್ಯಾಮಲಾ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಟಿ. ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕಿ ನೆಲ್ಲೀರ ಪೂರ್ಣಿಮಾ, ಪೆರುಮಾಳೇಶ್ವರ ಆಟೋ ಮಾಲೀಕ ಮತ್ತು ಚಾಲಕರ ಸಂಘದ ಅಧ್ಯಕ್ಷ ಚೊಟ್ಟೆಯಂಡಮಾಡ ಪ್ರವೀಣ್ ಮೇದಪ್ಪ, ಸಂಭ್ರಮ ಮಹಿಳಾ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಸ್ಥೆ ಕಾರ್ಯದರ್ಶಿ ತೀತಿರ ಲೀನಾ ಸತೀಶ್, ಟಿ.ಶೆಟ್ಟಿಗೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟ ಅಧ್ಯಕ್ಷ ಕೋಟ್ರಮಾಡ ರೇಷ್ಮಾ ಕಾರ್ಯಪ್ಪ, ಕೊಡವ ಎಳ್ತ್ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಕೊಡವ ಸಮಾಜದ ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ, ಜಂಟಿ ಕಾರ್ಯದರ್ಶಿ ಆಂಡಮಾಡ ಸತೀಶ್ ವಿಶ್ವನಾಥ್, ಖಜಾಂಚಿ ಚಂಗುಲAಡ ಸತೀಶ್, ಕ್ರೀಡಾ ಸಂಚಾಲಕ ತಡಿಯಂಗಡ ಶಮ್ಮಿ ಸುಬ್ಬಯ್ಯ, ನಿರ್ದೇಶಕರುಗಳಾದ ಚಂಗುಲAಡ ಅಶ್ವಿನಿ ಸತೀಶ್, ಮುಕ್ಕಾಟಿರ ಸಂದೀಪ್, ಕರ್ನಂಡ ರೂಪ ದೇವಯ್ಯ, ತೀತಿರ ಅನಿತ ಸುಬ್ಬಯ್ಯ, ಬಾದುಮಂಡ ವಿಷ್ಣು ಕಾರ್ಯಪ್ಪ, ಬೊಳ್ಳೆರ ಅಪ್ಪುಟ ಪೊನ್ನಪ್ಪ ಹಾಜರಿದ್ದರು. ಜನಮೆಚ್ಚುಗೆ ಪಡೆದ ಸಾಂಸ್ಕೃತಿಕ ಕಾರ್ಯಕ್ರಮ :ಟಿ. ಶೆಟ್ಟಿಗೇರಿಯ ರೂಟ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜನರ ಮನಸೂರೆಗೊಂಡಿತು. ವಿಭಿನ್ನವಾಗಿ ಪ್ರದರ್ಶನ ಕಂಡ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟದಿಂದ ಉಂಟಾಗುವ ದುಷ್ಪರಿಣಾಮ ಬಗ್ಗೆ ಸಂದೇಶ ನೀಡುವ ನಾಟಕ ಗಮನ ಸೆಳೆಯಿತು. ಇದರೊಂದಿಗೆ ಕೊಡವ ಸಾಂಸ್ಕೃತಿಕ ಹಿರಿಮೆಯನ್ನು ಸಾರುವ ಹಾಗೂ ಪರಿಸರದ ಮಹತ್ವದ ಬಗ್ಗೆ ವಿವಿಧ ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು.

ಚಂಗುಲAಡ ಅಶ್ವಿನಿ ಸತೀಶ್ ಪ್ರಾರ್ಥಿಸಿ, ಕೋಟ್ರಮಾಡ ಸುಮಂತ್ ಮಾದಪ್ಪ ಸ್ವಾಗತಿಸಿದರು. ಬಾದುಮಂಡ ವಿಷ್ಣು ಕಾರ್ಯಪ್ಪ ವಂದಿಸಿದರು.