ವೀರಾಜಪೇಟೆ, ಅ. ೨೫: ವ್ಯಾಸಂಗದ ಅವಧಿಯಲ್ಲಿ ವಿದ್ಯಾರ್ಥಿಗಳು ಕ್ರೀಡಾ ಮತ್ತು ಸಾಂಸ್ಕöÈತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ವ್ಯಕ್ತಿತ್ವದ ವಿಕಸನ ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ವೀರಾಜಪೇಟೆ ಪುರಸಭೆ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಕಾಳಪ್ಪ ಹೇಳಿದರು.
ವೀರಾಜಪೇಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಾಂಸ್ಕöÈತಿಕ, ಕ್ರೀಡಾ ಹಾಗೂ ವಿವಿಧ ಸಮಿತಿಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳು ಮಹಾತ್ಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕನಸನ್ನು ನನಸು ಮಾಡಲು ಪ್ರಯತ್ನಿಸಬೇಕು. ಪ್ರತಿಯೊಬ್ಬರಲ್ಲೂ ಕೌಶಲ್ಯ, ಜ್ಞಾನ, ಆರೋಗ್ಯ, ಸಂತೃಪ್ತಿ ಗುಣಗಳು ಇರಬೇಕು. ಈ ಗುಣಗಳು ಇದ್ದಾಗ ಮಾತ್ರ ಉತ್ತಮ ಮನುಷ್ಯನಾಗಲು ಸಾಧ್ಯ ಎಂದು ಹೇಳಿದರು. ಮನುಷ್ಯನಲ್ಲಿ ಆತ್ಮವಿಶ್ವಾಸ ಇದ್ದರೆ ಸಾಧನೆ ಮಾಡಬಹುದು. ನಿರಂತರ ಶ್ರಮದಿಂದ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡಾಗ ಜೀವನದಲ್ಲಿ ಯಶಸ್ಸು ಪಡೆಯಬಹುದು ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಾದಂಡ ತಿಮ್ಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಚಟುವಟಿಕೆಯ ಜೊತೆಯಲ್ಲಿ ಕ್ರೀಡೆ, ಸಾಂಸ್ಕöÈತಿಕ, ಪ್ರತಿಭಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ. ಪಠ್ಯ ಶಿಕ್ಷಣ, ಕ್ರೀಡೆ ಹಾಗೂ ಕಲೆ ಮತ್ತು ಸಾಂಸ್ಕöÈತಿಕ ವಿಭಾಗಗಳು ಶಿಕ್ಷಣದ ಅವಿಭಾಜ್ಯ ಅಂಗ ಎಂದರು. ಸರಕಾರಿ ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಬೋಧಿಸಲಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಸರಕಾರಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಬೇಕು. ಕಲಿಯುವ ಹುಮ್ಮಸ್ಸು ಪ್ರತಿಯೊಬ್ಬರಲ್ಲೂ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಿ ಬದುಕಲು ಸಾಧ್ಯ. ವಿದ್ಯೆ ಬದುಕನ್ನು ಸದೃಢಗೊಳಿಸುತ್ತದೆ.
ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅವಶ್ಯ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಪ್ರಾಧ್ಯಾಪಕ ಡಾ. ಬೋಪಯ್ಯ ಟಿ.ಕೆ. ಮಾತನಾಡಿ, ಯುವಕರು ಅಪರಿಮಿತ ಶಕ್ತಿ ಸಾಮರ್ಥ್ಯಗಳನ್ನು ಹೊಂದಿದ್ದು, ಅವುಗಳಿಗೆ ಸೂಕ್ತ ಮಾರ್ಗವನ್ನು ತೋರಿಸುವ ಮೂಲಕ ಅವರನ್ನು ಪೂರ್ಣತ್ವದ ಕಡೆ ಕರೆದೊಯ್ಯುವುದೇ ಶಿಕ್ಷಣ ಹಾಗೂ ವಿದ್ಯಾರ್ಥಿಗಳು ಕಲಿಕೆ ಸೇರಿದಂತೆ ತಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎನ್ನುವುದನ್ನು ಸವಿವರವಾಗಿ ತಿಳಿಸಿದರು.
ಐಕ್ಯೂಎಸಿ ಮತ್ತು ಸಾಂಸ್ಕöÈತಿಕ ಸಮಿತಿ ಸಂಚಾಲಕ ಪ್ರೊ. ಬಸವರಾಜು ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳ ಪಠ್ಯದ ಜೊತೆಗೆ ಅವರಲ್ಲಿ ಅಡಕವಾಗಿರುವ ಪ್ರತಿಭೆಗಳ ಅನಾವರಣಕ್ಕೆ ವಿಪುಲ ಅವಕಾಶಗಳನ್ನು ಒದಗಿಸಲಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸರಸ್ವತಿ ಡಿ.ಕೆ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ನಿರಂತರ ಪರಿಶ್ರಮ ಮುಖ್ಯ. ತನಗೆ ಸಿಗುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಉತ್ತಮ ಪ್ರತಿಫಲ ಪಡೆಯಬಹುದು ಎಂದು ತಿಳಿಸಿದರು.
ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯ ಸಂಚಾಲಕ ಪ್ರೊ. ದಯಾನಂದ ಕೆ.ಸಿ. ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಇದೇ ಸಂದರ್ಭ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಾದಂಡ ತಿಮ್ಮಯ್ಯ, ನಿವೃತ್ತ ಪ್ರಾದ್ಯಾಪಕ ಟಿ.ಕೆ. ಬೋಪಯ್ಯ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ರೋವರ್ಸ್ ಅಧಿಕಾರಿ ಎನ್. ಗುರುಪ್ರಸಾದ್, ರೇಂಜರ್ಸ್ ಅಧಿಕಾರಿ ಪಿ.ಟಿ. ದಮಯಂತಿ, ಎನ್‌ಎಸ್‌ಎಸ್ ಅಧಿಕಾರಿ ರುದ್ರ, ಕ್ರೀಡಾ ಸಮಿತಿ ಸಂಚಾಲಕಿ ಡಾ. ಟಿಶೋನಿ, ವಿದ್ಯಾರ್ಥಿ ಸಮಿತಿ ಪದಾಧಿಕಾರಿಗಳಾದ ಉಪಾಧ್ಯಕ್ಷ ನಿಶಾಂತ್ ಜೋಸೆಫ್, ಜಂಟಿ ಕಾರ್ಯದರ್ಶಿ ಸಾಧಿಯ. ಸಹ ಕ್ರೀಡಾ ಕಾರ್ಯದರ್ಶಿ ಭೀಮಯ್ಯ, ಎನ್‌ಎಸ್‌ಎಸ್ ನಾಯಕ ದೀಕ್ಷಿತ, ಸಾಂಸ್ಕöÈತಿಕ ಕಾರ್ಯದರ್ಶಿ ಗಾನ ಕಿಶೋರ್, ಕ್ರೀಡಾ ಕಾರ್ಯದರ್ಶಿ ಕಿಶೋರ್, ರೋವರ್ಸ್ ನಾಯಕ ಅಭಿಜಿತ್, ರೇಂಜರ್ಸ್ ನಾಯಕಿ ಲಿಖಿತ ಇದ್ದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಬೋಧಕೇತರ ಸಿಬ್ಬಂದಿ, ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಉಪನ್ಯಾಸಕ ವೃಂದದವರು ಇದ್ದರು.