ಮಡಿಕೇರಿ, ಅ. ೨೫ : ಮಡಿಕೇರಿ ನಗರದಲ್ಲಿ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ವತಿಯಿಂದ ಕೈಗೊಳ್ಳಲಾಗಿರುವ ಮನೆ ಮನೆಗೆ ನೀರನ್ನೊದಗಿಸುವ ಅಮೃತ್-೨ ಯೋಜನೆಯ ಕಾಮಗಾರಿಯಿಂದ ಜನತೆಗೆ ಸಮಸ್ಯೆಯಾಗುತ್ತಿದ್ದು ಈ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಮಡಿಕೇರಿ ನಗರಸಭಾ ಮಾಜಿ ಸದಸ್ಯ ಕೆ.ಎಂ.ಗಣೇಶ್ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಇದೀಗ ನಗರ ವ್ಯಾಪ್ತಿಯಲ್ಲಿ ರೂ.೩೮ ಕೋಟಿ ವೆಚ್ಚದಲ್ಲಿ ಕೈಗೊಳ್ಳುತ್ತಿರುವ ನೀರಿನ ಪೈಪ್ ಅಳವಡಿಕೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಕೇವಲ ರಸ್ತೆಗಳನ್ನು ಅಗೆದು ಬೃಹತ್ ಪ್ರಮಾಣದ ಪೈಪ್‌ಗಳನ್ನು ಹಾಕಲಾಗುತ್ತಿದೆ. ತೆಗೆದ ಗುಂಡಿಯನ್ನು ಸರಿಯಾದ ರೀತಿಯಲ್ಲಿ ಮುಚ್ಚದ ಹಿನ್ನೆಲೆಯಲ್ಲಿ ಗುಂಡಿಯೊಳಗೆ ನೀರು ಸೇರಿಕೊಂಡು ರಸ್ತೆಬದಿ ಕುಸಿಯುವ ಸಾಧ್ಯತೆಗಳಿವೆ. ಅಲ್ಲದೆ, ಮಡಿಕೇರಿ ಗುಡ್ಡಗಾಡು ಪ್ರದೇಶವಾಗಿದ್ದು ಎಲ್ಲಾ ಕಡೆಗಳಲ್ಲಿ ಕಾಮಗಾರಿ ಸಾಧ್ಯವಾಗುವದಿಲ್ಲ. ಅದೂ ಅಲ್ಲದೆ ಅಷ್ಟೊಂದು ದೊಡ್ಡ ಪ್ರಮಾಣದ ಪೈಪ್‌ಗಳಲ್ಲಿ ಸರಬರಾಜು ಮಾಡುವಷ್ಟು ನೀರಿನ ವ್ಯವಸ್ಥೆ ಇದೆಯಾ., ಅಷ್ಟೊಂದು ನೀರು ಸಂಗ್ರಹ ಮಾಡುವ ಟ್ಯಾಂಕ್‌ಗಳಿವೆಯಾ ಎಂದು ಪರಿಶೀಲಿಸದೆ ಏಕಾಏಕಿ ಕಾಮಗಾರಿ ಕೈಗೊಂಡಿರುವದು ಸರಿಯಲ್ಲವೆಂದು ಹೇಳಿದರು.

ಅಭಿವೃದ್ಧಿ ಕಾರ್ಯಗಳಿಗೆ ಯಾವದೇ ಅಭ್ಯಂತರವಿಲ್ಲ, ಆದರೆ ಯಾವದೇ ಮೂಂದಾಲೋಚನೆ ಇಲ್ಲದೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿ ಹಣ ಪೋಲು ಮಾಡುವದರಿಂದ ಯಾವದೇ ಪ್ರಯೋಜನವಿಲ್ಲ, ಇದರಿಂದ ಜನರಿಗೆ ಸಮಸ್ಯೆಗಳಾಗುತ್ತಿವೆಯೇ ವಿನಹ ಪ್ರಯೋಜನವಾಗುತ್ತಿಲ್ಲ. ಈ ಹಿಂದೆ ಕೈಗೊಂಡ ಒಳಚರಂಡಿ ಕಾಮಗಾರಿ ಇಂದಿಗೂ ಪೂರ್ಣವಾಗದೆ ನೆನೆಗುದಿಗೆ ಬಿದ್ದಿದ್ದು, ಜನರು ಈಗಲೂ ಸಮಸ್ಯೆ ಎದುರಿಸುತ್ತಿದ್ದಾರೆ. ಕೋಟಿಗಟ್ಟಲೆ ಹಣ ಮಣ್ಣುಪಾಲಾಗಿದೆ. ಇದೀಗ ನೀರಿನ ಯೋಜನೆಯಲ್ಲಿಯೂ ಹಣ ಪೋಲಾಗುತ್ತಿದೆ. ಇದೇ ಹಣವನ್ನು ರಸ್ತೆ ಕಾಮಗಾರಿಗೆ ಬಳಸಿದರೆ ಒಂದಿಷ್ಟು ಪ್ರಯೋಜನವಾಗಲಿದೆ ಎಂದು ಅಭಿಪ್ರಾಯಿಸಿದರು.

ಆಡಳಿತದವರಿಗೆ ಮಾಹಿತಿ ಇಲ್ಲ

ನಗರಸಭಾ ಅಧ್ಯಕ್ಷರಿಗೆ ಕಾಮಗಾರಿಗಳ ಬಗ್ಗೆ ಮಾಹಿತಿ ಇಲ್ಲವಾಗಿದೆ. ಆಡಳಿತದಲ್ಲಿ ಕೆಲವು ಹಿರಿಯ ಸದಸ್ಯರುಗಳಿದ್ದು, ಸಭೆ ನಡೆಸಿ ಅವರುಗಳೊಂದಿಗೆ ಚರ್ಚಿಸಿ ಮಾಹಿತಿ, ಸಲಹೆ ಪಡೆದುಕೊಂಡು ಮುಂದುವರೆದರೆ ಕೆಲಸಗಳಾಗುತ್ತವೆ. ಇಲ್ಲವಾದಲ್ಲಿ ಈ ರೀತಿ ಹಣ ಪೋಲಾಗುತ್ತದೆ ಎಂದು ಹೇಳಿದರು. ಮಡಿಕೇರಿ ದಸರಾ ದಶಮಂಟಪ ಸಮಿತಿ ಮಾಜಿ ಅಧ್ಯಕ್ಷ ಮಂಜುನಾಥ್ ಮಾತನಾಡಿ; ಕಾಮಗಾರಿಗಾಗಿ ಇರುವ ರಸ್ತೆಯನ್ನು ಅಗೆದು ಹಾಕುತ್ತಿದ್ದು, ವಾಹನ ಸಂಚರಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎಂಟು ವರ್ಷದ ಹಿಂದೆ ಒಳಚರಂಡಿ ಮಂಡಳಿಯಿAದ ಮಲ್ಲಿಕಾರ್ಜುನ ನಗರ ಅಂಗನವಾಡಿ ಬಳಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದ್ದು, ಇದುವರೆಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ, ಇದೀಗ ಘಟಕ ತುಕ್ಕು ಹಿಡಿದಿರುವದಾಗಿ ಹೇಳಿದರು.

ಗೋಷ್ಠಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಕೃಷ್ಣರಾಜು, ಶ್ರೀ ಕೋದಂಡರಾಮ ದೇವಾಲಯ ಟ್ರಸ್ಟಿ ಅನಿಲ್ ಕೃಷ್ಣಾನಿ, ದಸರಾ ಸಮಿತಿ ಮಾಜಿ ಅಧ್ಯಕ್ಷ ಜಗದೀಶ್, ವನ ಚಾಮುಂಡಿ ದೇವಾಲಯ ಸಮಿತಿ ಅಧ್ಯಕ್ಷ ಎನ್.ಸಿ. ಸುನಿಲ್ ಇದ್ದರು.