ನಾಪೋಕ್ಲು, ಅ. ೨೫: ಅಗ್ನಿ ಯುವಕ ಮಂಡಲ ವತಿಯಿಂದ ಪೆರಾಜೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕ್ರೀಡಾಕೂಟ ಮತ್ತು ಸನ್ಮಾನ ಸಮಾರಂಭ ಆಯೋಜಿಸಲಾಯಿತು.

ಕ್ರೀಡಾಕೂಟ ಉದ್ಘಾಟನೆ ಮತ್ತು ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ನಾಗೇಶ್ ಕುಂದಲ್ಪಾಡಿ ಯುವಕರು ಸ್ಪೂರ್ತಿಯಿಂದ ಸವಾಲುಗಳನ್ನು ಸ್ವೀಕರಿಸಿಕೊಂಡು ಬದುಕು ಕಟ್ಟಿಕೊಳ್ಳುವಂತೆ ಕರೆ ನೀಡಿದರು.

ಸಭೆಯಲ್ಲಿ ಹಂಪಿ ವಿಶ್ವ ವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಮತ್ತು ನಿರ್ದೇಶಕ ಡಾ. ಮಾಧವ ಪೆರಾಜೆ ಮತ್ತು ಎ.ಜೆ. ಆಸ್ಪತ್ರೆ ಮೆಡಿಕಲ್ ಗ್ಯಾಸ್ಟೊçÃಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ವೈದ್ಯ ಡಾ. ರಾಘವೇಂದ್ರ ಪ್ರಸಾದ್ ಕೆ.ವಿ. ಅವರುಗಳನ್ನು ಸನ್ಮಾನಿಸಲಾಯಿತು.

ಹಿರಿಯ ಪ್ರಾಧ್ಯಾಪಕ ಮಾಧವ ಪೆರಾಜೆ ಮಾತನಾಡಿ, ಯುವಕರು ಈ ಆಧುನಿಕ ಕಾಲದಲ್ಲಿ ಹೊಣೆ ಅರಿತು ವರ್ತಮಾನದ ಜಾಲತಾಣದ ಸಕಾರಾತ್ಮಕ ಅನುಭವ ಹೊಂದಿ ಶಿಕ್ಷಣದಿಂದ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.

ವೈದ್ಯ ರಾಘವೇಂದ್ರ ಪ್ರಸಾದ್ ಮಾತನಾಡಿ, ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ಪ್ರಶಾಂತ್ ಕೆ.ಎಂ. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ದೊಡ್ಡಣ್ಣ ಬರೆಮೇಲೆ, ಜ್ಯೋತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ನಾಗರಾಜ್, ಸಂಘದ ಪದಾಧಿಕಾರಿಗಳು ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಶ್ರೀನಾಥ್ ಸ್ವಾಗತಿಸಿ, ಮುತ್ತಪ್ಪ ವಂದಿಸಿದರು.