ಮಡಿಕೇರಿ, ಅ. ೨೫: ದೇವರು ಕೊಟ್ಟಿರುವ ಮಹತ್ವದ ವರವಾಗಿರುವ ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಲು ಉತ್ತಮ ಆರೋಗ್ಯ ಕಾಳಜಿಯೂ ಮುಖ್ಯ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಹೇಳಿದರು.
ಮೂರ್ನಾಡುವಿನ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಮಡಿಕೇರಿಯ ರೋಟರಿ ವುಡ್ಸ್, ಕೊಡಗು ಔಷಧಿ ವ್ಯಾಪಾರಸ್ಥರ ಸಂಘ, ಮೂರ್ನಾಡು ಗ್ರಾಮ ಪಂಚಾಯಿತಿ ಮತ್ತು ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆ ವತಿಯಿಂದ ಉಚಿತ ಆಯೋಜಿತ ಕ್ಯಾನ್ಸರ್ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಹವನ್ನೇ ದೇಗುಲ ಎಂದು ಭಾವಿಸುತ್ತೇವೆ. ಹೀಗಿರುವಾಗ ದೇವಾಲಯದಂತೆಯೇ ನಮ್ಮ ದೇಹದ ಆರಾಧನೆಯೂ ಮುಖ್ಯ ಪಾತ್ರ ವಹಿಸುತ್ತದೆ. ನಿಯಮಿತವಾದ ಆಹಾರ ಸೇವನೆ, ವ್ಯಾಯಾಮ, ಸೂಕ್ತ ಆರೋಗ್ಯ ತಪಾಸಣೆ ಮೂಲಕ ನಮ್ಮ ದೇಹವನ್ನು ಆರಾಧನೆ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟ ಬಾರಿಕೆ ದಿನೇಶ್, ರೋಗ ಬಂದಾಗ ಮಾತ್ರ ಆಸ್ಪತ್ರೆಗೆ ಹೋಗುವ ಮನೋಭಾವ ಬದಲಾಗಿ, ಆಗಿಂದಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ರಾಷ್ಟಿçÃಯ ಔಷಧಿ ವ್ಯಾಪಾರಸ್ಥರ ಸಂಘಟನಾ ಕಾರ್ಯದರ್ಶಿ, ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಂಬೆಕಲ್ ಜೀವನ್ ಕುಶಾಲಪ್ಪ ಮಾತನಾಡಿ, ಹಬ್ಬಗಳು ಶುಭ ಸಮಾರಂಭಗಳು ನಮ್ಮ ಜೀವನಕ್ಕೆ ನೆಮ್ಮದಿ, ಸಂತೋಷ ನೀಡಿದರೆ, ಇಂತಹ ಆರೋಗ್ಯ ಶಿಬಿರಗಳು ಸಮಾಜದ ಪಾಲಿಗೆ ನಿಜವಾದ ಉತ್ಸವಗಳಾಗಿ ಕಾಣುತ್ತವೆ. ಇಂತಹ ಶಿಬಿರಗಳ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ತೋರುವುದೇ ಮತ್ತೊಂದು ಸಂಭ್ರಮವಾಗಬೇಕಾಗಿದೆ ಎಂದು ಹೇಳಿದರು. ಕ್ಯಾನ್ಸರ್ ಬಂದರೂ ಜೀವನ ಸೋಲುವುದಿಲ್ಲ ಎಂಬ ಸಂದೇಶವನ್ನು ಎಲ್ಲೆಡೆ ವ್ಯಾಪಿಸಲು ಪ್ರತಿಯೋರ್ವರೂ ಮುಂದಾದಲ್ಲಿ ಕ್ಯಾನ್ಸರ್ ಪೀಡಿತರಿಗೆ ಆತ್ಮಸ್ಥೆರ್ಯ ತುಂಬಲು ಸಾಧ್ಯವಾಗುತ್ತದೆ. ಎಂದರು.
ರೋಟರಿ ಜಿಲ್ಲೆ ೩೧೮೧ ನ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ರೋಟರಿ ಸಂಸ್ಥೆಗಳು ವಿಶ್ವವ್ಯಾಪಿ ಆರೋಗ್ಯ ಮತ್ತು ಶಿಕ್ಷಣದ ಕಾರ್ಯಯೋಜನೆಗಳಿಗೆ ಆದ್ಯತೆ ನೀಡುತ್ತಾ ಬಂದಿವೆ. ೨೨೫ ದೇಶಗಳಲ್ಲಿನ ೪೫ ಸಾವಿರ ರೋಟರಿ ಸಂಸ್ಥೆಗಳು ಕ್ಯಾನ್ಸರ್ ನಂತಹÀ ಮಾರಕ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಸಮಾರೋಪಾದಿಯಲ್ಲಿ ಹಮ್ಮಿಕೊಂಡಿದೆ.
ರೋಟರಿ ವುಡ್ಸ್ ಈ ನಿಟ್ಟಿನಲ್ಲಿ ಮೂರ್ನಾಡು ಪಂಚಾಯಿತಿ ವ್ಯಾಪ್ತಿಯಲ್ಲಿ ಜನರಿಗೆ ಮಾಹಿತಿ ನೀಡಲು ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು. ರೋಟರಿ ವಲಯ ೬ ರ ಸಹಾಯಕ ಗವರ್ನರ್ ದಿಲನ್ ಚಂಗಪ್ಪ ಮಾತನಾಡಿ, ಸಮುದಾಯ ಸೇವಾ ಚಟುವಟಿಕೆಗಳಿಗೆ ಪ್ರಸಿದ್ದಿಯಾಗಿರುವ ರೋಟರಿ ಸಂಸ್ಥೆಗಳು ಪೋಲಿಯೋ ನಿರ್ಮೂಲನೆಯಲ್ಲಿಯೂ ಜಾಗತಿಕವಾಗಿ ಪ್ರಮುಖ ಪಾತ್ರ ವಹಿಸಿವೆ ಎಂದರು. ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ ರೈ ಮಾತನಾಡಿ, ಮೂರ್ನಾಡು ಪಟ್ಟಣದಲ್ಲಿ ಮೊದಲ ಬಾರಿಗೆ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ರೋಟರಿ ವುಡ್ಸ್ ಬಗ್ಗೆ ಶ್ಲಾಘಿಸಿದರು. ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಮೂರ್ನಾಡು ಪಂಚಾಯಿತಿ ಸದಾ ಜೊತೆಗೂಡಲಿದೆ ಎಂದೂ ಭರವಸೆ ನೀಡಿದರು.
ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಮಾತನಾಡಿ, ಸ್ವಾರ್ಥ ರಹಿತ ಸೇವೆಗೆ ರೋಟರಿ ಮಾದರಿಯಾಗಿದೆ. ಹೀಗಾಗಿಯೇ ರೋಟರಿ ೧೨೦ ವರ್ಷಗಳಿಂದ ಜಾಗತಿಕವಾಗಿ ಅತ್ಯಂತ ಜನಮನ್ನಣೆಗಳಿಸಿ ಪ್ರಬಲ ಸಂಸ್ಥೆಯಾಗಿ ಮುಂದುವರೆದಿದೆ ಎಂದರು. ರೋಟರಿ ವುಡ್ಸ್ನ ಶಿಬಿರ ಸಂಚಾಲಕ ಚಂದ್ರಶೇಖರ್, ಮೈಸೂರು ಭಾರತ್ ಕ್ಯಾನ್ಸರ್ ಆಸ್ಪತ್ರೆಯ ತಜ್ಞ ವೈದ್ಯ ಡಾ. ರೆಜಿಲ್ ರಜನ್ ಹಾಜರಿದ್ದರು. ರೋಟರಿ ವುಡ್ಸ್, ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ನಿರ್ದೇಶಕರು, ಗ್ರಾಮ ಪಂಚಾಯಿತಿ ಸದಸ್ಯರು ಪಾಲ್ಗೊಂಡಿದ್ದರು. ರೋಟರಿ ವುಡ್ಸ್ ನಿರ್ದೇಶಕ ವಸಂತ್ ಕುಮಾರ್ ನಿರೂಪಿಸಿ, ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ ವಂದಿಸಿದರು.
ಶಿಬಿರದಲ್ಲಿ ೭೨ ಮಂದಿ ತಪಾಸಣೆ ಮಾಡಿಸಿಕೊಂಡರು.