ಸಿದ್ದಾಪುರ, ಅ. ೨೫ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿದ್ದಾಪುರ ಪೌರ ಕಾರ್ಮಿಕರು ತಾ. ೨೭ ರಿಂದ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ ಎಂದು ಪೌರ ಕಾರ್ಮಿಕ ಸುರೇಶ್ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಇಪ್ಪತ್ತು ವರ್ಷಗಳಿಂದ ಗ್ರಾಮ ಪಂಚಾಯಿತಿಯಲ್ಲಿ ಪೌರಕಾರ್ಮಿಕರಾಗಿ ದಿನಗೂಲಿ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಖಾಯಂಗೊಳಿಸಲು ಅನುಮೋದನೆಗೆ ಆದೇಶ ಪ್ರತಿ ಗ್ರಾಮ ಪಂಚಾಯಿತಿ ಕಚೇರಿಗೆ ಬಂದು ಏಳೆಂಟು ತಿಂಗಳು ಕಳೆದರೂ ಈವರೆಗೂ ಆಡಳಿತ ಮಂಡಳಿ ನಮ್ಮಿಂದ ಅದನ್ನು ಮರೆಮಾಚಿ ದುಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಮೂರು ನಾಲ್ಕು ದಿನಗಳ ಒಳಗೆ ಪಂಚಾಯಿತಿಯು ಅನುಮೋದನೆ ಆದೇಶ ಮಾಡದಿದ್ದಲ್ಲಿ ಪೌರಕಾರ್ಮಿಕರು ಅವಕಾಶದಿಂದ ವಂಚಿತ ರಾಗಲಿದ್ದೇವೆ ಎಂದು ತಿಳಿಸಿದ ಅವರು ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಕಾರ್ಯವೈಖರಿಯನ್ನು ಖಂಡಿಸಿ ಕೆಲಸವನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧರಿಸಲಾಗಿದೆ ಎಂದರು.

ಹಿರಿಯ ಪೌರ ಕಾರ್ಮಿಕ ಮಾದೇವ ಮಾತನಾಡಿ ಸಿದ್ದಾಪುರ ಜಿಲ್ಲೆಯಲ್ಲಿ ಅತಿ ದೊಡ್ಡ ಗ್ರಾಮ ಪಂಚಾಯಿತಿ ಹಾಗೂ ಹೆಚ್ಚು ವರಮಾನ ಇರುವ ಪಂಚಾಯಿತಿ ಆಗಿದ್ದು ಒಬ್ಬ ಮಹಿಳಾ ಸಿಬ್ಬಂದಿ ಸೇರಿ ಐದು ಮಂದಿ ಪೌರ ಕಾರ್ಮಿಕರು ದಿನಗೂಲಿ ನೌಕರರಾಗಿ ದುಡಿಯುತ್ತಿದ್ದಾರೆ.

ಆದರೆ ಅನುಮೋದನೆಗೊಳಿಸದ ಹಿನ್ನೆಲೆಯಲ್ಲಿ ಸರ್ಕಾರದಿಂದ ನಮಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಎಂದರು.

ಸುದ್ದಿ ಗೋಷ್ಠಿಯಲ್ಲಿ ಪೌರಕಾರ್ಮಿಕರಾದ ಗಣೇಶ ಮತ್ತು ಮಂಜುನಾಥ್ ಹಾಜರಿದ್ದರು.