ಶ್ರೀಮಂಗಲ, ಅ. ೨೫: ಕೊಡವ ಭಾಷೆಯನ್ನು ಕೊಡವ ಜನಾಂಗದವರು ಮೊದಲು ಬಳಸುವ ಮೂಲಕ ಭಾಷೆ ಬೆಳೆಸಬೇಕು ಎಂದು ಟಿ. ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಲಿಯಂಡ ಶಶಿ ಸೀತಮ್ಮ ಅಭಿಪ್ರಾಯಪಟ್ಟರು.
ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಯುತ್ತಿರುವ ೯ನೇ ವರ್ಷದ ಪತ್ತಲೋದಿ ಕಾರ್ಯಕ್ರಮದ ೭ನೇ ದಿನದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಟಿ. ಶೆಟ್ಟಿಗೇರಿ ಕೊಡವ ಸಮಾಜ ಹಮ್ಮಿಕೊಂಡಿರುವ ಇಂತಹ ಕಾರ್ಯಕ್ರಮ ಹೆಮ್ಮೆಯ ವಿಚಾರ. ವಿವಿಧ ಕಲಾವಿದರಿಗೆ ಪ್ರತಿನಿತ್ಯ ವೇದಿಕೆ ಕಲ್ಪಿಸುವ ಮೂಲಕ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮದಿಂದ ಮಕ್ಕಳಲ್ಲಿ ಕೊಡವ ಸಂಸ್ಕೃತಿ ಆಚಾರ ವಿಚಾರದ ಬಗ್ಗೆ ಅಭಿಮಾನ ಹಾಗೂ ಅರಿವು ಮೂಡುವಂತಾಗಲಿದೆ ಹಾಗೂ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಸಹಕಾರಿಯಾಗುತ್ತಿದೆ ಎಂದು ಹೇಳಿದ ಅವರು ಎಲ್ಲರೂ ಸೇರಿ ಕೊಡವಾಮೆಯನ್ನು ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು.
ಟಿ. ಶೆಟ್ಟಿಗೇರಿ ಕೊಡವ ಸಮಾಜದ ಉಪಾಧ್ಯಕ್ಷ ಮಚ್ಚಮಾಡ ಸುಮಂತ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊಡವ ಆಚಾರ ವಿಚಾರ ಸಂಸ್ಕೃತಿ ಪರಂಪರೆ ಹಾಗೂ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಜನಾಂಗದ ಯುವ ಸಮುದಾಯ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಸ್ವಯಂ ಪ್ರೇರಿತವಾಗಿ ತೊಡಗಿಸಿಕೊಂಡಿದೆ, ಜನಾಂಗದ ಹಿತಾಸಕ್ತಿಗೆ ಧಕ್ಕೆ ಉಂಟಾದಾಗ ಎದ್ದು ನಿಂತು ಪ್ರಶ್ನಿಸುವ ಸಾಮರ್ಥ್ಯ ಬೆಳೆಸಿಕೊಂಡಿರುವುದು ಶ್ಲಾಘನೀಯ. ಯುವ ಸಮುದಾಯಕ್ಕೆ ಕೊಡವ ಸಂಸ್ಕೃತಿ ನಿಟ್ಟಿನಲ್ಲಿ ಹೆಚ್ಚಿನ ಅಭಿಮಾನ ಕಾಣುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ವೇದಿಕೆಯಲ್ಲಿ ಸಮಾಜದ ನಿರ್ದೇಶಕರಾದ ದಾನಿ ಮಾಣೀರ ಸಂಜೀವ್ ಮತ್ತು ಮೈನಾ ಸಂಜೀವ್, ತಡಿಯಂಗಡ ಶಮ್ಮಿ ಸುಬ್ಬಯ್ಯ, ಮುಕ್ಕಾಟಿರ ಸಂದೀಪ್, ತೀತಿರ ಅನಿತಾ ಪ್ರಭು, 'ತಿಂಗಕೊರ್ ಮೊಟ್ಟ್ ತಲಕಾವೇರಿಕ್' ಕೂಟದ ಬಲ್ಯಮೀದೇರಿರ ಸಂಪತ್, ದಾನಿ ತಡಿಯಂಗಡ ಲಿಖಿತ್ ಕರುಂಬಯ್ಯ ಹಾಜರಿದ್ದರು. ಈ ಸಂದರ್ಭ ದಾನಿ ಮಾಣೀರ ಸಂಜೀವ್ ಮತ್ತು ಮೈನಾ ಸಂಜೀವ್ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭ 'ತಿಂಗಕೊರ್ ಮೊಟ್ಟ್ ತಲಕಾವೇರಿಕ್' ಕೂಟದಿಂದ ಕೊಡವ ಜಾನಪದ ನೃತ್ಯ ಪ್ರದರ್ಶನ ಚೌರಿ ಆಟ್, ಪರೆಯಕಳಿ, ಕತ್ತಿಯಾಟ್, ಪುತ್ತರಿ ಕೋಲಾಟ್ ಹಾಗೂ ಚೇಂದಿರ ರಮ್ಯಾ ಜಗನ್ ಅವರಿಂದ ಸ್ವರಚಿತ ಹಾಡು, ಸಂಸ್ಕೃತಿ ಮತ್ತು ಸಂಸ್ಕಾರ ಬಗ್ಗೆ ನಾಟಕ ಪ್ರದರ್ಶನ, ಚೆಟ್ಟಂಡ ತನುಷ್ ತಮ್ಮಯ್ಯ ಅವರಿಂದ ಹಾಡು ಹಾಗೂ ಮಚ್ಚಮಾಡ ಕವಿತಾ ಸತೀಶ್ ಅವರಿಂದ ಸ್ವಾಗತ ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು.
ಅಜ್ಜಮಾಡ ಸಾವಿತ್ರಿ ಪ್ರಾರ್ಥಿಸಿ ಚಂಗುಲAಡ ಸತೀಶ್ ಸ್ವಾಗತಿಸಿ, ಸಮಾಜದ ಸಾಂಸ್ಕೃತಿಕ ಸಮಿತಿ ಸಂಚಾಲಕರುಗಳಾದ ಚೆಟ್ಟಂಗಡ ರವಿ ಸುಬ್ಬಯ್ಯ ಹಾಗೂ ಚಂಗುಲAಡ ಅಶ್ವಿನಿ ಸತೀಶ್ ಅವರು ಕಾರ್ಯಕ್ರಮ ನಿರ್ವಹಿಸಿ ಸಮಾಜದ ಗೌರವ ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ ವಂದಿಸಿದರು.
ಟಿ. ಶೆಟ್ಟಿಗೇರಿ ಕೊಡವ ಸಮಾಜದ ಪತ್ತಲೋದಿ ಕಾರ್ಯಕ್ರಮದಲ್ಲಿ ತಾ. ೨೬ ರಂದು (ಇಂದು) ಸಂಜೆ ೬ ಗಂಟೆಗೆ ಹೊಸ ಕೊಡವ ಕಿರುಚಿತ್ರ “ಕಾವೇರಿ ಚಂಗ್ರಾAದಿ” ಬಿಡುಗಡೆಯಾಗಲಿದ್ದು, ಎಲ್ಲರಿಗೂ ಉಚಿತ ಪ್ರದರ್ಶನವಿರುತ್ತದೆ.