ಮಡಿಕೇರಿ, ಅ. ೧೮: ಪಂಚಾಯತ್ ರಾಜ್, ಗ್ರಾಮೀಣ ಅಭಿವೃದ್ಧಿ ಮತ್ತು ಐಟಿ, ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಇಲಾಖೆಯ ವೈಫಲ್ಯಗಳನ್ನು ಮರೆಮಾಚಲು ಹಾಗೂ ಕಾಂಗ್ರೆಸ್ ಹೈಕಮಾಂಡ್ ಅನ್ನು ಮೆಚ್ಚಿಸಲು ರಾಷ್ಟಿçÃಯ ಸ್ವಯಂಸೇವಕ ಸಂಘದ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವೀರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅವರು ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಆರ್‌ಎಸ್‌ಎಸ್ ವಿರುದ್ಧ ಪ್ರಿಯಾಂಕ್ ಖರ್ಗೆ ಅವರು ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ಅತ್ಯಂತ ಪ್ರಮುಖ ಖಾತೆಗಳನ್ನು ಹೊಂದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಮರ್ಪಕವಾಗಿ ಕಾರ್ಯನಿರ್ವಹಿಸಲಾಗದೆ ವೈಫಲ್ಯವನ್ನು ಕಾಣುತ್ತಿದ್ದಾರೆ. ತಮ್ಮ ಇಲಾಖೆಗಳ ನ್ಯೂನತೆಯನ್ನು ಮರೆಮಾಚಲು ಮತ್ತು ಚರ್ಚೆಯ ದಿಕ್ಕನ್ನು ಬದಲಾಯಿಸುವ ಉದ್ದೇಶದಿಂದ ಆರ್‌ಎಸ್‌ಎಸ್ ವಿರುದ್ಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ, ಅಲ್ಲದೆ ಕಾಂಗ್ರೆಸ್ ನಾಯಕರನ್ನು ಮೆಚ್ಚಿಸುವುದಕ್ಕೋಸ್ಕರ ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇವರು ಆರ್‌ಎಸ್‌ಎಸ್ ವಿರುದ್ಧ ಹಲವು ಬಾರಿ ದ್ವೇಷ ಕಾರಿದ್ದಾರೆ. ಆರ್‌ಎಸ್‌ಎಸ್ ಏನು ಮಾಡಿದೆ ಮತ್ತು ಏನು ಮಾಡುತ್ತಿದೆ ಎನ್ನುವ ಬಗ್ಗೆ ತಿಳಿದುಕೊಳ್ಳುವ ನೈಜ ಕಾಳಜಿ ಇದ್ದರೆ ಸಂಘದ ಶಾಖೆಗೆ ಬರಲಿ ಎಂದು ಸವಾಲು ಹಾಕಿರುವ ರಾಕೇಶ್ ದೇವಯ್ಯ, ಕಳೆದ ೨೫ ತಿಂಗಳ ಅವಧಿಯಲ್ಲಿ ಪ್ರಿಯಾಂಕ್ ಖರ್ಗೆ ಅವರು ತಮ್ಮ ಇಲಾಖೆಯ ಮೂಲಕ ಮಾಡಿರುವ ಸಾಧನೆಯನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಒತ್ತಾಯಿಸಿದ್ದಾರೆ.