ಸೋಮವಾರಪೇಟೆ, ಅ. ೧೮ : ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನವೆಂಬರ್ ೧ ರಂದು ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲು ಎಲ್ಲರೂ ಸಹಕಾರ ನೀಡಬೇಕೆಂದು ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ತಿಳಿಸಿದರು. ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಂದು ಬೆಳಿಗ್ಗೆ ೯.೩೦ ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ ೮.೩೦ ಗಂಟೆಗೆ ಪಟ್ಟಣದ ಜೇಸಿ ವೇದಿಕೆಯಿಂದ ವಿವಿಧ ಶಾಲಾ ಕಾಲೇಜುಗಳ ಸ್ತಬ್ಧಚಿತ್ರಗಳೊಂದಿಗೆ ಶಾಲಾ ಮೈದಾನದವರೆಗೆ ಮೆರವಣಿಗೆ ನಡೆಯಲಿದೆ ಎಂದು ತಹಶೀಲ್ದಾರ್ ತಿಳಿಸಿದರು. ಕಾರ್ಯಕ್ರಮ ಯಾವುದೇ ರೀತಿಯಲ್ಲೂ ಅಧ್ವಾನ ಆಗಬಾರದು. ಶಾಲೆಗಳ ಉಸ್ತುವಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವಹಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದ ಅವರು, ಪಟ್ಟಣದ ಎಲ್ಲಾ ಪ್ರತಿಮೆಗಳನ್ನು ಸ್ವಚ್ಚಗೊಳಿಸಬೇಕೆಂದು ಪ.ಪಂ. ಅಧಿಕಾರಿಗೆ ಸೂಚಿಸಿದರು. ಪ್ರಥಮವಾಗಿ ರಾಷ್ಟ್ರ ಧ್ವಜಾ ರೋಹಣ, ನಂತರ ಕನ್ನಡ ಧ್ವಜಾರೋಹಣ ನೆರವೇರಲಿದ್ದು, ಧ್ವಜಗಳು ಅಚ್ಚುಕಟ್ಟಾಗಿ ಇರುವಂತೆ ನೋಡಿ ಕೊಳ್ಳಬೇಕೆಂದು ಅಗ್ನಿಶಾಮಕ ಇಲಾಖಾ ಸಿಬ್ಬಂದಿ ಲಕ್ಷ್ಮೀಕುಮಾರ್ ಅವರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು, ಸಾಹಿತಿ, ಬರಹಗಾರರು, ಸಂಶೋಧಕರು, ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸಲು ತೀರ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ನಿರ್ಧರಿಸಲಾಯಿತು.

ಸಭೆಯಲ್ಲಿ ಮೀನುಗಾರಿಕಾ ಇಲಾಖಾ ಸಹಾಯಕ ನಿರ್ದೇಶಕಿ ಮಿಲನಾ ಭರತ್, ಆರ್.ಎಫ್.ಓ. ಶೈಲೇಂದ್ರ, ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರ್, ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯ ಕವನ್ ಕಾರ್ಯಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರದೀಪ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಶಾಲಾ ಕಾಲೇಜು ಮುಖ್ಯಸ್ಥರು ಭಾಗವಹಿಸಿದ್ದರು.