ಮಡಿಕೇರಿ, ಅ. ೧೭ : ಅಭಿವೃದ್ಧಿ ಹೊಂದುತ್ತಿರುವ ದೇಶವಾದ ಭಾರತದಲ್ಲಿಂದು, ಅತ್ಯಂತ ಸಂಪದ್ಭರಿತವಾದ ಜಾನಪದ ಕಲಾ ಸಂಸ್ಕೃತಿಯತ್ತ ಯುವ ಪೀಳಿಗೆಯ ಆಸಕ್ತಿ ಕ್ಷೀಣಿಸುತ್ತಿರುವುದು ಕಂಡು ಬರುತ್ತಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ ಮತ್ತು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಆಯೋಜಿತ ‘ಜಿಲ್ಲಾ ಮಟ್ಟದ ಯುವ ಜನೋತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಶಕ್ತಿ ಪ್ರಸ್ತುತ ತಂತ್ರಜ್ಞಾನ ಕ್ಷೇತ್ರದತ್ತ ಹೆಚ್ಚಿನ ಆಸಕ್ತಿಯನ್ನು ತೋರಿ ಅದರತ್ತ ಮಾರುಹೋಗುತ್ತಿದೆ. ಮೊದಲು ನಾವು ನಾಡಿನೆಲ್ಲೆಡೆ ಇರುವ ವೈವಿಧ್ಯಮಯವಾದ ಜಾನಪದ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಸಕ್ತರಾಗಬೇಕು. ಇಂದಿನ ಯುವ ಸಮೂಹ ತಮ್ಮ ಬದುಕಿಗೆ ಒಳಿತಾಗುವಂತಹ ವಿದ್ಯಾಭ್ಯಾಸ ಪಡೆಯುವಂತಾಗಬೇಕೇ ಹೊರತು, ಕೇವಲ ಸರ್ಟಿಫಿಕೇಟ್ಗಾಗಿ ಓದುವಂತಾಗ ಬಾರದು ಎಂದು ವಿಸ್ಮಯಿ ಸಲಹೆ ನೀಡಿದರು. ಮೈ ಭಾರತ್ ಕೊಡಗು ಯುವ ಅಧಿಕಾರಿ ಕೆಟಿಕೆ ಉಲ್ಲಾಸ್ ಮಾತನಾಡಿ, ಯುವ ಶಕ್ತಿಯಲ್ಲಿ ಗುರಿ ಇರಬೇಕು. ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಿ, ಬದುಕಿನಲ್ಲಿ ತಮ್ಮ ಕನಸನ್ನು ನನಸು ಮಾಡಿಕೊಳ್ಳುವಂತಾಗಬೇಕು. ದೇಶ ನನಗೇನು ನೀಡಿದೆ ಎನ್ನುವುದಕ್ಕಿಂತ ನಾನು ದೇಶಕ್ಕಾಗಿ ಏನು ಮಾಡಿದ್ದೇನೆ ಎನ್ನುವುದು ಮುಖ್ಯ ಎಂದರು.
ಮಡಿಕೇರಿ ನಗರಸಭಾ ಅಧ್ಯಕ್ಷೆ ಪಿ.ಕಲಾವತಿ ಮಾತನಾಡಿ, ಯುವ ಜನೋತ್ಸವದಲ್ಲಿ ಯುವ ಸಮೂಹ ಪಾಲ್ಗೊಳ್ಳುವುದರ ಮೂಲಕ ಪ್ರತಿಭೆಯನ್ನು ಹೊರಸೂಸಿ, ರಾಷ್ಟçಮಟ್ಟದಲ್ಲಿ ಕೀರ್ತಿ ತರುವಂತಾಗಲಿ ಎಂದರು.
ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ.ಸುಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನಿರ್ದೇಶಕಿ ಮುಕ್ಕಾಟಿರ ಸ್ಮಿತಾ ಸುಬ್ಬಯ್ಯ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ನಿರ್ಮಲಾ, ಉಪನ್ಯಾಸಕರಾದ ಚಿದಾನಂದ, ಡಾ. ವೇಣುಗೋಪಾಲ್, ಉದಯಕುಮಾರ್, ಕೆಂಬಡತAಡ ಮುದ್ದಪ್ಪ, ಕಂಬೀರAಡ ರಾಖಿ ಪೂವಣ್ಣ, ಜಿಲ್ಲಾ ಯುವ ಒಕ್ಕೂಟದ ಖಜಾಂಚಿ ಕುಂಜಿಲAಡ ಮಧು ಮೋಹನ್, ಸ್ಥಳೀಯ ಕಾಲೇಜು ನಿವೃತ್ತ ಪ್ರಾಂಶುಪಾಲೆ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಚಿತ್ರಾ ಉಪಸ್ಥಿತರಿದ್ದರು.
ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಜಿಲ್ಲಾ ಯುವ ಒಕ್ಕೂಟದ ಕಾರ್ಯಾಧ್ಯಕ್ಷ ಕೂಡಂಡ ಸಾಬ ಸುಬ್ರಮಣಿ ನಿರೂಪಿಸಿದರು. ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್ ವಂದಿಸಿದರು.
ಬಹುಮಾನ ವಿತರಣೆ : ಸಮಾರಂಭದಲ್ಲಿ ವಿಜ್ಞಾನ ಮೇಳ, ಜಾನಪದ ಗೀತೆ, ಜಾನಪದ ನೃತ್ಯ, ಕಥೆ ಬರೆಯುವುದು, ಕವಿತೆ ಬರೆಯುವುದು, ಚಿತ್ರಕಲೆ, ಭಾಷಣ (ಘೋಷಣೆ) ಸ್ಪರ್ಧೆ ನಡೆದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿಜೇತರಿಗೆ ಪಾರಿತೋಷಕದೊಂದಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು .ಪ್ರಥಮ ಸ್ಥಾನ ಪಡೆದ ಜಿಲ್ಲೆಯ ತಂಡಗಳು ನವೆಂಬರ್ ತಿಂಗಳಿನಲ್ಲಿ ಯಾದಗಿರಿ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಯುವ ಜನೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.