ಮಡಿಕೇರಿ, ಅ. ೧೭: ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ದರುಶನ ನೀಡುವ ಪುಣ್ಯ ಘಳಿಗೆಯ ಸ್ವಾಗತಕ್ಕೆ ಭಾಗಮಂಡಲದಿAದ ತಲಕಾವೇರಿ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಕಾಲ್ನಡಿಗೆ ಜಾಥ (ಕಾಲ್ನಡಪು) ಮೂಲಕ ತೆರಳಿದರು.
ಕಾವೇರಿಯನ್ನು ಕುಲದೇವಿಯಾಗಿ ಆರಾಧಿಸುವ ಕೊಡವ ಜನಾಂಗದ ಭಕ್ತಾದಿಗಳು ಕಳೆದ ಹಲವು ವರ್ಷಗಳಿಂದ ಪುರಾತನ ಕಾಲದಲ್ಲಿ ಇದ್ದ ಸಂಪ್ರದಾಯವನ್ನು ಮರು ಪಾಲನೆ ಮಾಡುವ ಮೂಲಕ ಧಾರ್ಮಿಕ ಭಾವಕ್ಕೆ ಒತ್ತು ನೀಡುತ್ತಾ ಬರುತ್ತಿದ್ದಾರೆ. ಈ ಪಾದಯಾತ್ರೆಯನ್ನು ವಿವಿಧ ಕೊಡವ ಸಂಘಟನೆ, ಸಂಘ - ಸಂಸ್ಥೆ, ಸಮಾಜಗಳು ಒಂದೇ ಬ್ಯಾನರ್‌ನಡಿ ಸಾರ್ವತ್ರಿಕವಾಗಿ ಹಮ್ಮಿಕೊಂಡು ಬರುತ್ತಿದ್ದು, ಈ ಬಾರಿ ಎಂಟನೆಯ ವರ್ಷದ ಕಾಲ್ನಡಪು ಜಾಥಾ ನಡೆಯಿತು.
ಜಿಲ್ಲೆಯ ವಿವಿಧೆಡೆಗಳಿಂದ ಇನ್ನಿತರ ಕಡೆಗಳಿಂದ ಆಗಮಿಸಿದ್ದ ನೂರಾರು ಮಂದಿ ಭಾಗಮಂಡಲ ದಲ್ಲಿ ಸಂಗಮ ಗೊಂಡರು. ಬಳಿಕ ಭಗವಂಡೇಶ್ವರ ದೇಗುಲದಲ್ಲಿ ಪೂಜೆ - ಪ್ರಾರ್ಥನೆ ನೆರವೇರಿಸಿ ಅಲ್ಲಿಂದ ತಲಕಾವೇರಿಯತ್ತ ತೆರಳಲಾಯಿತು. ದುಡಿಕೊಟ್ಟ್... ತಳಿಯತಕ್ಕಿ ಬೊಳಕ್‌ನೊಂದಿಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಸಾಗಿದ ಯುವಕ - ಯುವತಿಯರು, ಪುರುಷರು, ಮಹಿಳೆಯರು, ಮಕ್ಕಳು, ಕಾವೇರಿ ಮಾತೆಗೆ ಜಯಕಾರ... ಭಜನೆ ಯೊಂದಿಗೆ ಸುಮಾರು ೮ ಕಿ.ಮೀ. ಅಂತರವನ್ನು ಕ್ರಮಿಸಿದರು.
ಈ ಬಾರಿ ವಿಶೇಷವಾಗಿ ಕೊಡಗು - ಮೈಸೂರು ಸಂಸದ ಯದುವೀರ್ ಒಡೆಯರ್, ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹಾಗೂ ಅವರ ಪತ್ನಿ ಕಾಂಚನ್ ಪೊನ್ನಣ್ಣ ಅವರುಗಳೂ ಎಲ್ಲರೊಂದಿಗೆ ಉತ್ಸುಕತೆ - ಭಕ್ತಿಭಾವದೊಂದಿಗೆ ಬೆರೆತು ಕಾಲ್ನಡಿಗೆಯಲ್ಲಿ ಪಾಲ್ಗೊಂಡಿದ್ದರು. ಇವರೊಂದಿಗೆ ಇನ್ನಿತರ ಪ್ರಮುಖರುಗಳು ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.
ಮೈಸೂರು ರಾಜ ಸಂಸದ ಯದುವೀರ್ ಬರಿಗಾಲಿನಲ್ಲಿ ರಾಜರಪೇಟದೊಂದಿಗೆ ಪೋಷಾಕುವಿನಲ್ಲಿ ಆಗಮಿಸಿದ್ದರೆ, ಪೊನ್ನಣ್ಣ ಅವರು ಸಾಂಪ್ರದಾಯಿಕ ಉಡುಗೆ ಕುಪ್ಯಚೇಲೆಯಲ್ಲಿ ಪಾಲ್ಗೊಂಡಿದ್ದರು. ತಲಕಾವೇರಿಗೆ ತೆರಳಿದ ಸಂದರ್ಭ ಗೌಡ ಜನಾಂಗದ ಯುವಕರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರೆ, ಜಿಲ್ಲಾಡಳಿತದ ಪ್ರಮುಖರು ಜನಪ್ರತಿನಿಧಿಗಳನ್ನು ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.
ಪಾದಯಾತ್ರೆಯ ಮಾರ್ಗದ ನಡುವೆ ನೀರು, ಮಜ್ಜಿಗೆ, ಜ್ಯೂಸ್ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು. ದುಡಿಕೊಟ್ಟ್ ಪಾಟ್‌ನ ನಿನಾದ ಹಾಗೂ ಜಯಘೋಷಗಳು ಭಕ್ತಿಭಾವವನ್ನು ಪ್ರತಿಬಿಂಬಿಸುವAತಿತ್ತು. ಬಳಿಕ ಬ್ರಹ್ಮಕುಂಡಿಕೆ ಹಾಗೂ ಕೊಳದ ಸುತ್ತಲೂ ಜಮಾಯಿಸಿದ ಮಂದಿ ತಳಿಯತಕ್ಕಿ ಬೊಳ್‌ಚ ಸಹಿತವಾಗಿ ಕನ್ನಿಬಾಳೋ...
೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಕಾವೇರಿ ಬಾಳೋ... ಕಾವೇರಮ್ಮೆ ಉಕ್ಕಿ ಬಾ... ಸೇರಿದಂತೆ ವಿವಿಧ ಜಯಘೋಷಗಳೊಂದಿಗೆ ಮಾತೆ ತೀರ್ಥರೂಪಿಣಿಯಾಗಿ ದರುಶನ ನೀಡುವ ಕ್ಷಣವನ್ನು ಸ್ವಾಗತಿಸಿ, ಬರಮಾಡಿ ಕೊಂಡರು.