ಗೋಣಿಕೊಪ್ಪಲು, ಅ. ೧೪: ನಿಟ್ಟೂರು ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಲಕಿಯರ ವಸತಿ ನಿಲಯದ ಆವರಣದಲ್ಲಿದ್ದ ಗಂಧದ ಮರ ತಡರಾತ್ರಿಯಲ್ಲಿ ಕಳ್ಳತನವಾಗಿದೆ.
ಮುಖ್ಯರಸ್ತೆಯ ಸಮೀಪದಲ್ಲೇ ಇರುವ ಮೆಟ್ರಿಕ್ ಪೂರ್ವ ಗಿರಿಜನ ಬಾಲಕಿಯರ ವಸತಿ ನಿಲಯದ ಕಾಂಪೌAಡ್ ಬಳಿ ಗಂಧದ ಮರ ಸಮೃದ್ಧಿಯಾಗಿ ಬೆಳೆದು ನಿಂತಿತ್ತು. ತಡರಾತ್ರಿಯಲ್ಲಿ ಬಂದ ಕಳ್ಳರು ಮರವನ್ನು ಬುಡದಿಂದ ಕತ್ತರಿಸಿ ಕದ್ದೊಯ್ದಿದ್ದಾರೆ.
ಎರಡು ದಿನಗಳ ಹಿಂದೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ವಸತಿ ನಿಲಯದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾವನ್ನು ಗಂಧದ ಮರ ಕಾಣುವ ರೀತಿಯಲ್ಲಿ ತಿರುಗಿಸಲು ಪ್ರಸ್ತ್ತಾಪಿಸಿದ್ದರು.
ಈ ವಿಷಯ ತಿಳಿದ ಕಳ್ಳರು ತರಾತುರಿಯಲ್ಲಿ ಈ ಕೃತ್ಯವೆಸಗಿರುವ ಅನುಮಾನ ವ್ಯಕ್ತವಾಗಿದೆ. ಕೆಲವು ದಿನಗಳ ಹಿಂದೆ ತಡರಾತ್ರಿಯಲ್ಲಿ ನಿಟ್ಟೂರು ಮುಖ್ಯರಸ್ತೆಯ ಬದಿಯಲ್ಲಿರುವ ಮನೆಗಳಲ್ಲಿ ಕಳ್ಳತನ ನಡೆದಿತ್ತು. ಕಳ್ಳರ ಬಂಧನಕ್ಕೆ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.