ಐಗೂರು, ಸೆ. ೧೮: ಐಗೂರು ಗ್ರಾಮದಲ್ಲಿ ಹಾಡಿಗಳು ಮತ್ತು ಪಂಚಾಯಿತಿ ವ್ಯಾಪ್ತಿಯ ೧೮ ವರ್ಷ ಪ್ರಾಯದ ಮಕ್ಕಳ ಬಗ್ಗೆ ಪೋಷಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯವರು ಮತ್ತು ಗ್ರಾಮಸ್ಥರು ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಗ್ರಾಮ ಪಂಚಾಯಿತಿ ಪಿಡಿಓ ಪೂರ್ಣ ಕುಮಾರ್ ಕರೆ ನೀಡಿದರು.

ಅವರು ಐಗೂರು ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಪೋಷಣ್ ಮತ್ತು ಸೀಮಂತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮ ಪಂಚಾಯಿತಿಗೆ ಮಕ್ಕಳ ಸಮಸ್ಯೆಯ ಬಗ್ಗೆ ತಿಳಿಸಿದರೆ ನಾವು ಸಹಕಾರ ನೀಡುತ್ತೇವೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾತಾಧಿಕಾರಿ ಪೂಪತಿ ಮಾತನಾಡಿ, ಬಾಣಂತಿಯರು ಮತ್ತು ಗರ್ಭಿಣಿಯರು ಪೌಷ್ಟಿಕಾಂಶದ ಆಹಾರವನ್ನು ನಿಗದಿತ ಸಮಯದಲ್ಲಿ ಸೇವಿಸಬೇಕೆಂದರು. ಸೊಪ್ಪು, ಹಣ್ಣು ಹಂಪಲು, ಮೊಳಕೆಕಾಳು ,ಮೊಟ್ಟೆ, ಬಯಕೆಯ ಬಳೆ, ಹೂವು, ತಾಂಬೂಲಗಳನ್ನಿಟ್ಟು ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನಡೆದರೆ, ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು.

ಐಗೂರು, ಎರಡನೇಐಗೂರು, ಕಾಜೂರು, ಯಡವಾರೆ ಮತ್ತು ಸಜ್ಜಳ್ಳಿ ಅಂಗನವಾಡಿ ಕೇಂದ್ರಗಳ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪಿಡಿಒ ಪೂರ್ಣ ಕುಮಾರ್, ಆರೋಗ್ಯ ಸುರಕ್ಷತಾಧಿಕಾರಿ ಪೂಪತಿ, ಅಂಗನವಾಡಿ ಕಾರ್ಯಕರ್ತೆಯರಾದ ರಾಧಾಮಣಿ, ಗಿರಿಜಾ, ನೇತ್ರಾವತಿ, ಪ್ರಮೀಳಾ, ಗೀತಾ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.